Advertisement

ಮುಧೋಳ: ಯುಪಿಐ ಪೇಮೆಂಟ್‌ನಲ್ಲಿ ಮುಧೋಳ ಮಹತ್ತರ ಸಾಧನೆ

06:18 PM Mar 16, 2024 | Team Udayavani |

ಉದಯವಾಣಿ ಸಮಾಚಾರ
ಮುಧೋಳ: ಕಳೆದ ತಿಂಗಳು ವಾಯವ್ಯ ರಸ್ತೆ ಸಾರಿಗೆ ನಿಮಗದಲ್ಲಿ ಕಾರ್ಯಾರಂಭ ಮಾಡಿದ್ದ ಯುಪಿಐ ವಹಿವಾಟಿನಲ್ಲಿ ಮುಧೋಳ ಘಟಕದ ಸಿಬ್ಬಂದಿ ಅದ್ವಿತೀಯ ಸಾಧನೆಗೈಯುವ ಮೂಲಕ ಸಾರ್ವಜನಿಕರಲ್ಲಿ ಯುಪಿಐ ವಹಿವಾಟಿಗೆ ಪ್ರೇರೇಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿನ ಒಟ್ಟು 50 ಘಟಕಗಳಲ್ಲಿ ಯುಪಿಐ ವಹಿವಾಟು ಕಾರ್ಯಾರಂಭ ಮಾಡಿದ್ದು, ಇದೀಗ ಎಲ್ಲ ಘಟಕಗಳ ವಹಿವಾಟಿನ ಮೊದಲ 10 ಸ್ಥಾನದಲ್ಲಿ ಮುಧೋಳ ಘಟಕವು ನಾಲ್ಕನೇ ಸ್ಥಾನ ಪಡೆಯುವ ಮೂಲಕ ಉತ್ತಮ ಸಾಧನೆಗೈದಿದೆ.

Advertisement

ಫೆ.13ರಂದು ಯುಪಿಐಯನ್ನು ಆಯ್ದ ಘಟಕಗಳಲ್ಲಿ ಕಾರ್ಯಗತಗೊಳಿಸಲಾಗಿತ್ತು. ಡಿಜಿಟಲ್‌ ಇಂಡಿಯಾ ಯೋಜನೆ ಹಾಗೂ
ನಿರ್ವಾಹಕ ಮತ್ತು ಪ್ರಯಾಣಿಕರ ಮಧ್ಯದಲ್ಲಿ ಚಿಲ್ಲರೆ ವ್ಯವಹಾರದ ಕಿರಿಕಿರಿ ತಪ್ಪಿಸುವುದು, ಕ್ಯಾಶ್‌ಲೆಸ್‌ ವ್ಯವಹಾರ ವೃದ್ಧಿಯ ಉದ್ದೇಶದಿಂದ ಆರಂಭಗೊಂಡ ಯುಪಿಐ ವಹಿವಾಟಿಗೆ ಸಾರ್ವಜನಿಕರಿಂದ ಆರಂಭದಲ್ಲಿಯೇ ಉತ್ತಮ ಸ್ಪಂದನೆ ದೊರೆಯಿತು. ಇದೀಗ ಸಾರಿಗೆ ಬಸ್‌ ಗಳಲ್ಲಿ ಒಂದು ತಿಂಗಳಿನ ಅಂತರದಲ್ಲಿ ಲಕ್ಷಾಂತರ ರೂ. ಯುಪಿಐ ವಹಿವಾಟು ನಡೆಯುತ್ತಿದೆ. ಹೀಗೆ ಆರಂಭಗೊಂಡಿರುವ ಯುಪಿಐನಿಂದ ಇದೀಗ ಮುಧೋಳ ಘಟಕ ಮಹತ್ತರ ಸಾಧನೆ ಮಾಡಿದೆ.

ಟಾಪ್‌ ಹತ್ತರಲ್ಲಿ ಜಿಲ್ಲೆಯ ಮೂರು ಘಟಕಗಳು:
ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ  ಮಾ. 3ರಿಂದ ಮಾ.13ರವರೆಗಿನ ಯುಪಿಐ ವಹಿವಾಟಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ
ಸಾರಿಗೆ ನಿಗಮದಲ್ಲಿ ಗುರುತಿಸಿರುವ ಟಾಪ್‌ 10ರಲ್ಲಿ ಜಿಲ್ಲೆಯ ಮುಧೋಳ, ಬಾಗಲಕೋಟೆ ಹಾಗೂ ಗುಳೇದಗುಡ್ಡ ಘಟಕಗಳು ಸ್ಥಾನ ಪಡೆದುಕೊಂಡಿವೆ. ಮೊದಲ ಹತ್ತರ ಸ್ಥಾನದಲ್ಲಿ ಕ್ರಮವಾಗಿ ಗೋಕಾಕ, ಹುಬ್ಬಳ್ಳಿ-1, ಬೆಳಗಾವಿ, ಮುಧೋಳ, ಹುಬ್ಬಳ್ಳಿ-2, ಬಾಗಲಕೋಟೆ, ಬೆಟಗೇರಿ, ಗುಳೇದಗುಡ್ಡ, ಅಥಣಿ, ಸಂಕೇಶ್ವರ ಘಟಕಗಳು ಸ್ಥಾನ ಪಡೆದುಕೊಂಡಿವೆ.

ಮುಧೋಳ 4, ಬಾಗಲಕೋಟೆ 6 ಹಾಗೂ ಗುಳೇದಗುಡ್ಡ ಘಟಕ 8ನೇ ಸ್ಥಾನ ಪಡೆದುಕೊಂಡಿವೆ. ನಾಲ್ಕನೇ ಸ್ಥಾನದಲ್ಲಿರುವ
ಮುಧೋಳ ಘಟಕದ ವತಿಯಿಂದ ಒಟ್ಟು 11534 ಯುಪಿಐ ವಹಿವಾಟು ನಡೆದಿದೆ. ಒಟ್ಟು 7,67,431 ರೂ. ಸಂಗ್ರಹವಾಗಿದೆ.

ನಿರ್ವಾಹಕನ ಸಾಧನೆ: ಇನ್ನು ಯುಪಿಐ ವಹಿವಾಟಿನಲ್ಲಿ ವಾಯವ್ಯ ರಸ್ತೆ ಸಾರಿಗೆ ನಿಗಮದಲ್ಲಿಯೇ ಅತಿ ಹೆಚ್ಚು ವಹಿವಾಟು
ನಡೆಸುವ ಮೂಲಕ ಮುಧೋಳ ಘಟಕದ ಡಿ.ಆರ್‌. ಬಾಗೇವಾಡಿ ವಿಶೇಷ ಸನ್ಮಾನಕ್ಕೆ ಪಾತ್ರರಾಗಿದ್ದಾರೆ. ಬಾಗೇವಾಡಿ ಮಾ. 6ರಂದು ಒಟ್ಟು 157 ಪ್ರಯಾಣಿಕರಿಂದ ಯುಪಿಐ ವಹಿವಾಟು ನಡೆಸುವ ಮೂಲಕ ಉತ್ತಮ ಕಾರ್ಯನಿರ್ವಹಿಸಿದ್ದಾರೆ.

Advertisement

ನಿರ್ವಾಹಕನ ಕಾರ್ಯವೈಖರಿ ಮೆಚ್ಚಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಭರತ್‌ ಎಸ್‌.
ಪ್ರಶಂಸನಾ ಪತ್ರ ನೀಡುವ ಮೂಲಕ ನಿರ್ವಾಹಕನ ಬೆನ್ನುತಟ್ಟುವ ಕೆಲಸ ಮಾಡಿದ್ದಾರೆ.

ಚಿಲ್ಲರೆ ಸಮಸ್ಯೆ ಹಾಗೂ ಕ್ಯಾಶ್‌ಲೆಸ್‌ ವ್ಯವಹಾರದ ಉದ್ದೇಶದಿಂದ ಜಾರಿಗೆ ತಂದಿರುವ ಯುಪಿಐ ವ್ಯವಸ್ಥೆ ಇಂದು ಹೆಚ್ಚು ಜನಪ್ರಿಯವಾಗಿದೆ. ಈ ವಿಭಾಗದಲ್ಲಿ ಮುಧೋಳ ಘಟಕ ಸಲ್ಲಿಸುತ್ತಿರುವ ಸೇವೆ ನಮಗೆ ತೃಪ್ತಿ ತಂದಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕರು ಯುಪಿಐ ವಹಿವಾಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಕೊಳ್ಳುವ ಮೂಲಕ ವ್ಯವಹಾರ ಸರಳೀಕರಣ
ಮಾಡಿಕೊಳ್ಳಬೇಕು.
ಸಂಗಮೇಶ ಮಾಟೊಳ್ಳಿ, ಮುಧೋಳ ಘಟಕ ವ್ಯವಸ್ಥಾಪಕ 

ಯುಪಿಐನಿಂದ ಚಿಲ್ಲರೆ ಸಮಸ್ಯೆಗೆ ಮುಕ್ತಿ ದೊರೆತಿದೆ. ಸಾರಿಗೆ ಬಸ್‌ನಲ್ಲಿ ಆನ್‌ಲೈನ್‌ ಪೇಮೆಂಟ್‌ ಮಾಡುವ ಮೂಲಕ ಕ್ಯಾಶ್‌ಲೆಸ್‌
ವ್ಯವಹಾರವೂ ಸರಳವಾಗಿದೆ. ಬಸ್‌ನಲ್ಲಿ ಮೊದಲಿಗಿಂತ ಈಗಿನ ಪ್ರಯಾಣ ಹೆಚ್ಚು ಅನುಕೂಲವಾಗಿದೆ.
ಬಸವರಾಜ ಕೋಲೂರ,ಪ್ರಯಾಣಿಕ

*ಗೋವಿಂದಪ್ಪ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next