Advertisement

ಮುಧೋಳ: ಉದ್ಘಾಟನೆಗೆ ಕಾದಿದೆ ಇಂದಿರಾ ಕ್ಯಾಂಟೀನ್‌

06:02 PM May 19, 2023 | Team Udayavani |

ಮುಧೋಳ: ಬಡಜನರಿಗೆ ಕಡಿಮೆ ದರದಲ್ಲಿ ಉಪಹಾರ ಹಾಗೂ ಊಟ ನೀಡುವ ಉದ್ದೇಶದಿಂದ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಆರಂಭಗೊಂಡಿದ್ದ ಇಂದಿರಾ ಕ್ಯಾಂಟೀನ್‌ಗೆ ನಗರದಲ್ಲಿ ಮಾತ್ರ ಉದ್ಘಾಟನೆ ಭಾಗ್ಯ ದೊರೆತಿರಲಿಲ್ಲ. ಸದ್ಯ ಎರಡು ದಶಕದ ಬಳಿಕ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಸಾಧಿಸಿರುವುದರಿಂದ ಇನ್ನಾದರೂ ಕ್ಯಾಂಟೀನ್‌ ಉದ್ಘಾಟನೆಯಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Advertisement

ಭವ್ಯವಾದ ಕಟ್ಟಡ: ನಗರದಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ವಹಣೆಗೆ ಯಾವುದೇ ರೀತಿಯ ಅಡೆತಡೆಗಳಿರಲಿಲ್ಲ. 5-6 ವರ್ಷಗಳ ಮುಂಚೆಯೇ ಹಳೆಯ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಇಂದಿರಾ ಕ್ಯಾಂಟೀನ್‌ ಕಟ್ಟಡ ನಿರ್ಮಾಣ ಮಾಡಲಾಗಿದೆ. ಅಡುಗೆ ತಯಾರಿಕೆಗೆ ಬೇಕಾದ ಎಲ್ಲ ಅಗತ್ಯ ವಸ್ತುಗಳ ಜೋಡಣೆ ಪೂರ್ಣಗೊಂಡಿತ್ತು. ಆದರೆ ಹಿಂದಿನ ಶಾಸಕರ ಇಚ್ಛಾಶಕ್ತಿ ಕೊರತೆಯಿಂದಾಗಿ ಕ್ಯಾಂಟೀನ್‌ ಕಾರ್ಯಾರಂಭ ಮಾಡಿಲ್ಲವೆಂಬುದು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿರುವ ಮಾತು.

ಸದ್ಯ ಮುಧೋಳ ಮತಕ್ಷೇತ್ರ ಕೈ ವಶವಾಗಿದ್ದು, ಮುಂದಿನ ದಿನಗಳಲ್ಲಿ ಕ್ಯಾಂಟೀನ್‌ನಿಂದ ಹಸಿದವರ ಹೊಟ್ಟೆ ತುಂಬಬಹುದು ಎಂಬ ನಿರೀಕ್ಷೆ ಗರಿಗೆದರಿದೆ.

ಸ್ವಚ್ಛತೆ ಕೈಗೊಂಡ ಸಿಬ್ಬಂದಿ: ಹಲವು ವರ್ಷಗಳಿಂದ ಇಂದಿರಾ ಕ್ಯಾಂಟೀನ್‌ ನಿರ್ಮಾಣಗೊಂಡಿದ್ದರೂ ಕಾರ್ಯಾರಂಭ ಮಾಡದ ಹಿನ್ನೆಲೆಯಲ್ಲಿ ಕಟ್ಟಡದಲ್ಲಿ ಅಡುಗೆ ಸಾಮಾನುಗಳು ಧೂಳು ಹಿಡಿದಿವೆ. ಸುಸಜ್ಜಿತ ಕಟ್ಟಡವಿದ್ದರೂ ಬಳಕೆಯಾಗದೆ ಬಣ್ಣ ಮಾಸಿದೆ. ಕ್ಷೇತ್ರದಲ್ಲಿನ ಆಡಳಿತ ಬದಲಾವಣೆ ಅರಿತ ಅ ಧಿಕಾರಿಗಳು ಇತ್ತೀಚೆಗೆ ಕ್ಯಾಂಟೀನ್‌ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದು, ಶೀಘ್ರದಲ್ಲಿಯೇ ಕ್ಯಾಂಟೀನ್‌ ಆರಂಭವಾಗುತ್ತದೆ ಎಂಬ ಮಾತುಗಳು ಜನರಲ್ಲಿ ಹರಿದಾಡುತ್ತಿವೆ.

ಬಡವರಿಗೆ ಅನುಕೂಲ: ಕ್ಯಾಂಟೀನ್‌ನಲ್ಲಿ ಅತಿ ಕಡಿಮೆ ದರ ಅಂದರೆ 5ರೂ.ಗೆ ಉಪಹಾರ ಹಾಗೂ 10ರೂ.ಗೆ ಊಟ ದೊರೆಯುವುದರಿಂದ ವಿವಿಧ ಕೆಲಸಕ್ಕಾಗಿ ನಗರಕ್ಕೆ ಆಗಮಿಸುವ ಗ್ರಾಮೀಣ ಭಾಗದ ಜನರಿಗೆ, ಕೂಲಿ ಕಾರ್ಮಿಕರಿಗೆ, ಬಡ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಬೇಗ ಕ್ಯಾಂಟೀನ್‌ ತೆರೆಯಲಿ ಎಂಬುದು ಬಡಜನರ ಅಭಿಲಾಷೆಯಾಗಿದೆ.

Advertisement

ವ್ಯರ್ಥವಾಗಿದ್ದ ಹೋರಾಟಗಳು
ಇಂದಿರಾ ಕ್ಯಾಂಟೀನ್‌ ಉದ್ಘಾಟನೆ ಮಾಡಿ ಕಾರ್ಯಾರಂಭ ಮಾಡಬೇಕು ಎಂದು ಕೆಲ ವರ್ಷಗಳ ಹಿಂದೆ ಕಾಂಗ್ರೆಸ್‌ ನಾಯಕರು ವಿವಿಧ ರೀತಿಯ ಹೋರಾಟ ಮಾಡಿದ್ದರು. ಆದರೆ ಅವರ ಹೋರಾಟಗಳು ಆಡಳಿತದಲ್ಲಿರುವವರ ಕಿವಿಗೆ ಬೀಳಲಿಲ್ಲ. ಹೋರಾಟಗಳು ವ್ಯರ್ಥವಾಗಿದ್ದವು. ಸದ್ಯ ಸ್ಥಳೀಯ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಆಡಳಿತ ಬಂದಿರುವುದರಿಂದ ಕ್ಯಾಂಟೀನ್‌ ಉದ್ಘಾಟನೆಗೆ ಇದ್ದ ವಿಘ್ನಗಳೆಲ್ಲ ದೂರವಾಗುವ ನಿರೀಕ್ಷೆಯಿದೆ.

ಇಂದಿರಾ ಕ್ಯಾಂಟೀನ್‌ ನಿರ್ಮಾಣಗೊಂಡು ಹಲವಾರು ವರ್ಷಗಳೇ ಕಳೆದಿದ್ದರೂ ಇದುವರೆಗೂ ಉದ್ಘಾಟನೆ ಭಾಗ್ಯ ದೊರೆತಿಲ್ಲ.
ಈಗ ಕ್ಷೇತ್ರದ ಜನರು ನನಗೆ ಅಧಿಕಾರ ನೀಡಿ ಕೈ ಬಲಪಡಿಸಿದ್ದಾರೆ. ಶೀಘ್ರದಲ್ಲಿಯೇ ಕ್ಯಾಂಟೀನ್‌ ಆರಂಭಿಸಿ ಬಡವರಿಗೆ ಅನುಕೂಲ ಮಾಡಿಕೊಡುತ್ತೇನೆ.
ಆರ್‌.ಬಿ. ತಿಮ್ಮಾಪುರ,
ನೂತನ ಶಾಸಕರು, ಮುಧೋಳ ಕ್ಷೇತ್ರ

ಮುಧೋಳ ನಗರಕ್ಕೆ ಆಗಮಿಸಿದಾಗೊಮ್ಮೆ ಇಂದಿರಾ ಕ್ಯಾಂಟೀನ್‌ ಆರಂಭವಾಗದ ಕಾರಣ ಹೆಚ್ಚಿನ ದುಡ್ಡು ಕೊಟ್ಟು ಹೋಟೆಲ್‌ನಲ್ಲಿ ತಿಂಡಿ ತಿನ್ನುವ ಪರಿಸ್ಥಿತಿ ಇದೆ. ಇನ್ನಾದರೂ ಕ್ಯಾಂಟೀನ್‌ ಉದ್ಘಾಟನೆ ಮಾಡಿದರೆ ನಮ್ಮಂತ ಬಡವರಿಗೆ ಹೆಚ್ಚು ಅನುಕೂಲವಾಗಲಿದೆ.
ಮಲ್ಲಿಕಾರ್ಜುನ ಹೊಸಮನಿ,
ಗ್ರಾಮೀಣ ಭಾಗದ ಕೂಲಿ ಕಾರ್ಮಿಕ

ಇಂದಿರಾ ಕ್ಯಾಂಟೀನ್‌ ಸಿದ್ಧಗೊಳಿಸುವಂತೆ ಮೇಲಿನಿಂದ ಸೂಚನೆ ಬಂದಿದೆ. ಅದರಂತೆ ಈಗಾಗಲೇ ಕ್ಯಾಂಟೀನ್‌ ಸ್ವತ್ಛತೆಗೆ ಎಲ್ಲ ರೀತಿಯ ಕ್ರಮ ಕೈಗೊಂಡಿದ್ದೇವೆ. ಮೇಲಧಿಕಾರಿಗಳು ಆದೇಶ ನೀಡಿದ ಕೂಡಲೇ ಕ್ಯಾಂಟೀನ್‌ ಉದ್ಘಾಟನೆ ಮಾಡಲಿದ್ದೇವೆ.
ಶಿವಪ್ಪ ಅಂಬಿಗೇರ, ನಗರಸಭೆ ಪೌರಾಯುಕ್ತ

*ಗೋವಿಂದಪ್ಪ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next