ಮುಧೋಳ : ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ನೀಡಬೇಕು ಎಂದು ಒತ್ತಾಯಿಸಿ ತಾಲೂಕಿನ ಮೆಳ್ಳಿಗೇರಿ ಗ್ರಾಮದ ಕೂಲಿ ಕಾರ್ಮಿಕರು ಶುಕ್ರವಾರ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಹಲವಾರು ದಿನಗಳಿಂದ ಕೂಲಿ ಕೆಲಸಕ್ಕಾಗಿ ಗ್ರಾಮ ಪಂಚಾಯಿತಿಗೆ ಎಡತಾಕುತ್ತಿದ್ದರೂ ಅಧಿಕಾರಿಗಳು ಕೆಲಸ ನೀಡುತ್ತಿಲ್ಲ. ಸರಿಯಾದ ರೀತಿಯಲ್ಲಿ ಜಾಬ್ ಕಾರ್ಡ್ ನೀಡುತ್ತಿಲ್ಲ. ಕೂಡಲೇ ನಮಗೆ ಕೂಲಿ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.
ದಿನಗೂಲಿ ಸಿಗದೆ ಬೇರೆ ಊರಿಗೆ ಕೆಲಸ ಅರಸಿ ಹೋಗಬೇಕಾದ ಪರಿಸ್ಥಿತಿ ಇದೆ. ಇದ್ದ ಊರಿನಲ್ಲಿಯೇ ಕೆಲಸ ಮಾಡಬೇಕು ಎಂದರೆ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಅಧಿಕಾರಿ ವರ್ಗದವರು ನರೇಗಾ ಕೆಲಸ ನೀಡುತ್ತಿಲ್ಲ. ಇನ್ನುಮುಂದೆ ಕೂಲಿ ಕೆಲಸ ನೀಡದೆ ಹೋದರೆ ಮುಂದಿನ ದಿನದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಏಕವಚನ, ಏರುಧ್ವನಿಯಲ್ಲಿ ಮಾತು ಬೆಳೆಸಿದ ಇಒ : ಗ್ರಾಮಸ್ಥರು ಕೆಲಸ ಕೇಳಿಕೊಂಡು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆಗೆ ಕುಳಿತ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ತಾಲೂಕು ಪಂಚಾಯಿತಿ ಇಒ ಪ್ರತಿಭಟನೆ ನೇತೃತ್ವ ಹೊತ್ತಿದ್ದ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಸಂಚಾಲಕ ಶಂಕರ ಅವರೊಂದಿಗೆ ಏಕವಚನದಲ್ಲಿ ಏರುಧ್ವನಿಯಲ್ಲಿ ಮಾತು ಬೆಳೆಸಿದರು. ಘಟನೆಯನ್ನು ವಿಡಿಯೋ ಮಾಡುತ್ತಿದ್ದ ಮಹಿಳೆಯೋರ್ವಳಿಗೆ ವಿಡಿಯೋ ಮಾಡದಂತೆ ತಾಕೀತು ಮಾಡಿರುವುದು ಕಂಡುಬಂದಿತು. ಇಒ ಸಿದ್ನಾಳ ನಡೆಗೆ ಕೋಪಗೊಂಡ ಗ್ರಾಮಸ್ಥರು ನೀವು ಬಡವರಿಗೆ ಕೆಲಸ ಕೊಡಿಸಲು ಬಂದಿದ್ದೀರೋ ? ಅಥವಾ ನಮ್ಮನ್ನು ಹೆದರಿಸಲು ಬಂದಿದ್ದೀರೋ ಎಂದು ಇಒ ಉಮೇಶ ಸಿದ್ನಾಳಗೆ ಪ್ರಶ್ನಿಸಿದರು. ಮೊದಲು ನಮಗೆ ಕೆಲಸ ನೀಡುವಂತೆ ಪಟ್ಟು ಹಿಡಿದರು. ಆಗ ಗ್ರಾಮಸ್ಥರೊಂದಿಗೆ ಮಾತನಾಡಿದ ಇಒ ಶೀಘ್ರದಲ್ಲಿಯೇ ಗ್ರಾಮಸ್ಥರಿಗೆ ಕೂಲಿ ಕೆಲಸ ನೀಡುವುದಾಗಿ ಭರವಸೆ ನೀಡಿದರು.
12ಗಂಟೆಯಾದರೂ ಆಗಮಿಸದ ಪಿಡಿಒ : ಗ್ರಾಮದ ಜನತೆ ಕೆಲಸಕ್ಕಾಗಿ ಒತ್ತಾಯಿಸಿ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸುತ್ತಿದ್ದರೆ ಅಲ್ಲಿನ ಪಿಡಿಒ 12ಗಂಟೆಯಾದರೂ ಕಚೇರಿಗೆ ಆಗಮಿಸಿದ್ದಿಲ್ಲ. ಈ ಬಗ್ಗೆ ಅಸಮಾಧಾನ ಹೊರಹಾಕಿದ ಪ್ರತಿಭಟನಾಕಾರರು ಅಭಿವೃದ್ದಿ ಅಧಿಕಾರಿಗಳು ಸರಿಯಾದ ಸಮಯಕ್ಕೆ ಕಚೇರಿಗೆ ಆಗಮಿಸುವುದಿಲ್ಲ ಎಂದು ದೂರಿದರು.
ಗ್ರಾಮಸ್ಥರಾದ ಈರಮ್ಮ, ಶ್ರೀದೇವಿ, ಸಿದ್ದವ್ವ, ಗೀತಾ, ರಾಧಿಕಾ, ಸಿದ್ದಪ್ಪ, ಶಿವು, ಸವಿತಾ, ಶಿಲ್ಪಾ, ರವಿ, ಬಸವರಾಜು ಗ್ರಾಕೂಸ್ ಜಿಲ್ಲಾ ಸಂಚಾಲಕ ಶಂಕರ ಸೇರಿದಂತೆ ಇತರರು ಇದ್ದರು.
ಮೆಳ್ಳಿಗೇರಿ ಗ್ರಾಮದಲ್ಲಿ ಸದ್ಯ ಜಾಬ್ ಕಾರ್ಡ್ ಇರುವ ಜನರಿಗೆ ಶೀಘ್ರವೇ ಉದ್ಯೋಗ ನೀಡಲಾಗುವುದು. ಜಾಬ್ ಕಾರ್ಡ್ ಇಲ್ಲದಿರುವ ಜನರನ್ನು ಗುರುತಿಸಿ ಅವರಿಗೆ ಜಾಬ್ ಕಾರ್ಡ್ ವ್ಯವಸ್ಥೆ ಮಾಡಿ ಆ ನಂತರದಲ್ಲಿ ಕೆಲಸ ನೀಡಲಾಗುವುದು.
-ಉಮೇಶ ಸಿದ್ನಾಳ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುಧೋಳ