ಮುಧೋಳ : ಸಾಮಾಜಿಕ ಹೋರಾಟಗಾರ ಯಲ್ಲಪ್ಪ ಹೆಗಡೆ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಹಿಂದಿರುವ ಸೂತ್ರದಾರರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ರೈತ ಮುಖಂಡರು ಶುಕ್ರವಾರ ನಗರದ ಸಿಪಿಐ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಗರದ ಜಿಎಲ್ಬಿಸಿ ಐಬಿಯಿಂದ ಸಿಪಿಐ ಕಚೇರಿವರೆಗೆ ಬೈಕ್ ರ‍್ಯಾಲಿ ಮೂಲಕ ಸಿಪಿಐ ಕಚೇರಿಗೆ ಆಗಮಿಸಿದ ರೈತರು ಪ್ರಕರಣದಲ್ಲಿ ಮೂಲ ಆರೋಪಿಗಳ ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಳಂಬ ನೀತಿ ಅನುಸರಿಸುತ್ತಿದೆ. ಇದು ಸರಿಯಾದ ಕ್ರಮವಲ್ಲ ಹೋರಾಟಗಾರರಿಗೆ ಜೀವಕ್ಕೆ ಧಕ್ಕೆಯುಂಟಾದಾಗ ಪೊಲೀಸ್ ಇಲಾಖೆ ಅವರೊಂದಿಗೆ ನಿಲ್ಲಬೇಕು ಎಂದು ಒತ್ತಾಯಿಸಿದರು.
ಹಲ್ಲೆ ಪ್ರಕರಣ ನಡೆದು ಮೂರ್ನಾಲ್ಕು ದಿನ ಕಳೆದರೂ ಕೇವಲ ಹಲ್ಲೆ ಮಾಡಿದವರನ್ನು ಮಾತ್ರ ಬಂಧಿಸಲಾಗಿದೆ. ಘಟನೆಯ ಮೂಲ ಸೂತ್ರದಾರರಾಗಿರುವ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಕೂಡಲೇ ಪ್ರಕರಣದ ಪ್ರಮುಖ ಆರೋಪಿಗಳನ್ನು ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಆರಕ್ಷಕ ವೃತ್ತ ನಿರೀಕ್ಷಕ ಮಹಾದೇವ ಶಿರಹಟ್ಟಿ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತವಾದ ತನಿಖೆ ನಡೆಯುತ್ತಿದೆ. ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸಿಪಿಐ ಅವರ ಮನವರಿಕೆಯ ಮಾಹಿತಿ ಅರಿತ ರೈತ ಮುಖಂಡರು ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆದರು.
ರೈತ ಮುಖಂಡರಾದ ಬಸವಂತಪ್ಪ ಕಾಂಬಳೆ, ಸುಭಾಷ ಶಿರಬೂರ, ಹನಮಂತಪ್ಪ ನಬಾಬ, ವಿಶ್ವನಾಥ ಉದಗಟ್ಟಿ, ಸುರೇಶ ಚಿಂಚಲಿ ಸೇರಿದಂತೆ ಇತರರು ಇದ್ದರು.