ಮುಧೋಳ: ವಿವಿಧ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ನಗರದ ಪೊಲೀಸರು ಬರೋಬ್ಬರಿ 24,58,400 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಡಿವೈಎಸ್ಪಿ ಶಾಂತವೀರ ಈ. ತಿಳಿಸಿದರು.
ನಗರದ ಆರಕ್ಷಕ ವೃತ್ತ ನಿರೀಕ್ಷಕ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾಹಿತಿ ಹಂಚಿಕೊಂಡರು.
ಸಕ್ಕರೆ ಲಾರಿ ವಶ: ನಿರಾಣಿ ಕಾರ್ಖಾನೆಯಲ್ಲಿನ ಸಕ್ಕರೆ ತುಂಬಿಕೊಂಡು ನಿಗದಿತ ಸ್ಥಳಕ್ಕೆ ಸಾಗಿಸದೆ ಚಾಲಕ ಸಕ್ಕರೆಯನ್ನು ಬೇರೆಡೆ ಸಾಗಿಸಿದ್ದ. ಈ ಬಗ್ಗೆ ಕೆಲ ದಿನಗಳ ಹಿಂದೆ ನಗರದ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರು ಹಾವೇರಿ ಜಿಲ್ಲೆಯ ಶಿಶುವಿನಾಳ ಗ್ರಾಮದ ವಿಜಯ ದಳವಾಯಿ, ಧಾರವಾಡ ಜಿಲ್ಲೆಯ ಯಲಿವಾಳ ಗ್ರಾಮದ ಸತೀಶ ಚಂದ್ರಶೇಖರಗೌಡ ಪಾಟೀಲ, ಹಾವೇರಿ ಜಿಲ್ಲೆಯ ದೇವಗಿರಿಯ ದೇವರಾಜ ಕಟ್ಲಾವರ ಹಾಗೂ ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ಮಹ್ಮದಅಲಿ ಅಗಸಿಬಾಗಿಲ ಅವರನ್ನು ಬಂ ಧಿಸಿದ್ದಾರೆ. ಬಂಧಿತರಿಂದ ಅಂದಾಜು 10,83,600 ಮೌಲ್ಯದ 600 ಸಕ್ಕರೆ ತುಂಬಿದ ಬ್ಯಾಗ್ ಹಾಗೂ 10 ಲಕ್ಷ ರೂ. ಮೌಲ್ಯದ ಲಾರಿ ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಚಿನ್ನಾಭರಣ ವಶ: ತಾಲೂಕಿನ ಸೋರಗಾಂವ ಗ್ರಾಮದ ಭಾಗವ್ವ ಯರಗುದ್ರಿ ಅವರ ಮನೆಯಲ್ಲಿ ನಡೆದ ಕಳ್ಳತನದ ಬಗ್ಗೆ ಕೇವಲ 24 ಗಂಟೆಗಳ ಹಿಂದೆ ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ್ದ ಪೊಲೀಸರು ಪ್ರಕರಣಕ್ಕೆ ಸಂಬಂ ಧಿಸಿದಂತೆ ಪದ್ಮಾ ಹುಲಗನ್ನವರ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 2,54,800 ರೂ. ಮೌಲ್ಯದ 67 ಗ್ರಾಂ. ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
14 ಮೊಬೈಲ್ ಪತ್ತೆ: ಪೊಲೀಸ್ ಇಲಾಖೆ ಇತ್ತೀಚೆಗೆ ಪರಿಚಯಿಸಿದ ಸಿಈಐ ಪೋರ್ಟಲ್ ನೆರವಿನಿಂದ 1,20,000 ರೂ. ಮೌಲ್ಯದ ಒಟ್ಟು 14 ಮೊಬೈಲ್ ವಶಪಡಿಸಿಕೊಂಡು ಮೊಬೈಲ್ ಕಳೆದುಕೊಂಡವರಿಗೆ ಹಸ್ತಾಂತರಿಸಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪ್ರಸನ್ನ ದೇಸಾಯಿ, ಡಿವೈಎಸ್ಪಿ ಶಾಂತವೀರ ಈ. ಮಾರ್ಗದರ್ಶನದಲ್ಲಿ ಸಿಪಿಐ ಮಹಾದೇವ ಶಿರಹಟ್ಟಿ ನೇತೃತ್ವದ ತನಿಖಾ ತಂಡದಲ್ಲಿ ಪಿಎಸೈಗಳಾದ ಅಜಿತಕುಮಾರ ಹೊಸಮನಿ, ಕೆ.ಬಿ. ಮಾಂಗ ಪೊಲೀಸ್ ಸಿಬ್ಬಂದಿ ರಂಗನಾಥ ಕಟಗೇರಿ, ಶ್ರೀಶೈಲ ಕೆಸರಗೊಪ್ಪ, ಮನೋಹರ ಕುರಿ, ಭೀರಪ್ಪ ಕುರಿ, ಹನಮಂತ ಮಾದರ, ಮಾರುತಿ ದಳವಾಯಿ, ದಾದಾಪೀರ ಅತ್ರಾವತ, ಸುನೀಲ ಐದಮನಿ, ಶ್ರೀಕಾಂತ ಬೆನಕಟ್ಟಿ, ಸುರೇಶ ಭದ್ರಶೆಟ್ಟಿ ಭಾಗಿಯಾಗಿದ್ದರು. ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಡಿವೈಎಸ್ಪಿ ಸಿಬ್ಬಂದಿಗೆ ಬಹುಮಾನ ಘೋಷಿಸಿದರು.