Advertisement
ಪ್ರತಿನಿತ್ಯ ಬೆಳಗ್ಗೆ ಮಕ್ಕಳನ್ನು ಶಾಲೆಗಳಿಗೆ ಕರೆತರಲು ಶಾಲಾ ವಾಹನ ಉಪಯೋಗಿಸುವ ತಾಲೂಕಿನ ಬಹುತೇಕ ಶಿಕ್ಷಣ ಸಂಸ್ಥೆಗಳು ವಾಹನಗಳ ಬೇಕಾಬಿಟ್ಟಿ ಬಳಕೆಯಿಂದಾಗಿ ಮಕ್ಕಳ ಪ್ರಾಣಕ್ಕೆ ಗ್ಯಾರಂಟಿಯಿಲ್ಲದಂತಾಗಿದೆ. ಪ್ರತಿನಿತ್ಯ ಮನೆಯಿಂದ ಶಾಲೆಗೆ ಹೊರಡುವ ಮಕ್ಕಳನ್ನು ಕರೆದ್ಯೊಯಲು ಆಗಮಿಸುವ ಹಲವಾರು ವಾಹನಗಳು ಸುಸಜ್ಜಿತವಾಗಿಲ್ಲ ಹಳೆಯ ಗುಜರಿಗೆ ಹಾಕುವಂತಹ ವಾಹನಗಳನ್ನು ಶಿಕ್ಷಣ ಸಂಸ್ಥೆಯವರು ಕಳುಹಿಸುತ್ತಿರುವುದರಿಂದ ಮಕ್ಕಳು ಅನಿವಾರ್ಯವಾಗಿ ಅವುಗಳಲ್ಲಿ ತೆರಳುವಂತಾಗಿದೆ.
Related Articles
Advertisement
ಟಂಟಂ, ಕ್ರೂಸರ್ ಗಳಲ್ಲಿ ಚಾಲಕರೊಬ್ಬರೆ ಕಾರ್ಯ ನಿರ್ವಹಿಸುತ್ತಾರೆ. ಇದರಿಂದ ಮಕ್ಕಳು ವಾಹನ ಹತ್ತುವಾಗ ಹಾಗೂ ಇಳಿಯುವಾಗ ಹಲವಾರು ಬಿದ್ದು ಗಾಯಗೊಂಡಿರುವ ಘಟನೆಗಳೂ ನಡೆದಿವೆ. ಹಲವಾರು ವರ್ಷಗಳ ಹಳೆಯದಾದ ಟಂಟಂಗಳನ್ನು ಬಳಸುತ್ತಿರುವುದರಿಂದ ಮಕ್ಕಳಿಗೆ ಸರಿಯಾಗಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ, ಮ್ಯಾಕ್ಸಿ ಕ್ಯಾಬ್ ಗಳಲ್ಲಿ ಕುರಿ ಹಿಂಡಿನಂತೆ ಮಕ್ಕಳನ್ನು ಕರೆದ್ಯೊಯಲಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.
ವೈಟ್ ಬೋರ್ಡ್ ವಾಹನ ಬಳಕೆ: ಶಿಕ್ಷಣ ಸಂಸ್ಥೆಗಳು ವೈಟ್ ಬೋರ್ಡ್ ವಾಹನ ಬಳಕೆಗೆ ಅವಕಾಶವಿರದಿದ್ದರು ಬಹುತೇಕ ಸಂಸ್ಥೆಗಳು ವೈಟ್ ಬೋರ್ಡ್ ಗಳನ್ನೆ ಬಳಕೆ ಮಾಡಿಕೊಳ್ಳುತ್ತಿವೆ. ಶಿಕ್ಷಣ ಸಂಸ್ಥೆಗಳು ಆಡುತ್ತಿರುವ ಅವಾಂತರವನ್ನು ಕಂಡೂ ಕಾಣದಂತೆ ಅಧಿಕಾರಿಗಳು ವರ್ತಿಸುತ್ತಿರುವುದರಿಂದ ಸಂಸ್ಥೆಗಳ ಆಟಾಟೋಪಕ್ಕೆ ಬ್ರೇಕ್ ಬೀಳದಾಗಿದೆ.
ಕಣ್ಮುಚ್ಚಿ ಕುಳಿತ ಅಧಿಕಾರಿ ವರ್ಗ : ಶಿಕ್ಷಣ ಸಂಸ್ಥೆಗಳು ಬೇಕಾಬಿಟ್ಟಿಯಾಗಿ ವಾಹನ ಬಳಕೆ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ. ಇಂತಹ ವಾಹನಗಳನ್ನು ಬಳಕೆ ಮಾಡಿ ಮಕ್ಕಳ ಜೀವದ ಜತೆ ಆಟವಾಡುವ ಶಿಕ್ಷಣ ಸಂಸ್ಥೆಗಳಿಗೆ ಕಡಿವಾಣ ಹಾಕಬೇಕು ಎಂಬುದು ಪ್ರಜ್ಞಾವಂತರ ಕೂಗಾಗಿದೆ.
ಮಕ್ಕಳ ಸುರಕ್ಷತೆ ದೃಷ್ಠಿಯಿಂದ ಈ ಹಿಂದೆ ವಿವಿಧ ಇಲಾಖೆಗಳ ಸಂಯೋಜನೆಯಲ್ಲಿ ಶಾಲಾ ವಾಹನ ಮಾರ್ಗದರ್ಶಿ ಕುರಿತು ಎಲ್ಲ ಶಾಲೆಗಳಿಗೆ ಸುತ್ತೋಲೆ ಹೊರಡಿಸಲಾಗಿತ್ತು. ಇದೀಗ ಮತ್ತೊಮ್ಮೆ ಎಲ್ಲ ಶಾಲೆಗಳಿಗೆ ಮನವರಿಕೆ ಮಾಡಿಕೊಡಲಾಗುವುದು ಮುಂದಿನ ದಿನಗಳಲ್ಲಿ ಸರ್ಕಾರಿ ಆದೇಶದಂತೆ ವಾಹನ ನಿರ್ವಹಣೆ ಮಾಡದ ಶಾಲಾ ಆಡಳಿತ ಮಂಡಳಿ ವಿರುದ್ದ ಕ್ರಮಕೈಗೊಳ್ಳಲಾಗುವುದು.-ಎಸ್.ಎಂ. ಮುಲ್ಲಾ ಕ್ಷೇತ್ರಶಿಕ್ಷಾಧಿಕಾರಿ ಮುಧೋಳ ಮಕ್ಕಳ ಶಿಕ್ಷಣಕ್ಕೆ ಸ್ಪರ್ಧಾತ್ಮಕ ರೀತಿಯಲ್ಲಿಒತ್ತು ನೀಡುವ ಶಿಕ್ಷಣ ಸಂಸ್ಥೆಗಳು ಅದೇ ರೀತಿಯಾಗಿ ಅವರ ಸುರಕ್ಷತೆಗೂ ಮನ್ನಣೆ ನೀಡಬೇಕು. ಹಳೆಯ ವಾಹನ ಕಳುಹಿಸುವುದರಿಂದ ಪುಟ್ಟ ಪುಟ್ಟ ಮಕ್ಕಳನ್ನು ಕರೆತರಲು ಹೆಚ್ಚಿನ ತೊಂದರೆಯಾಗುತ್ತದೆ. ಅನಾಹುತಗಳು ಸಂಭವಿಸುವ ಮುನ್ನ ಶಿಕ್ಷಣ ಸಂಸ್ಥೆಯವರು ಎಚ್ಚೆತ್ತು ಸರ್ಕಾರದ ಹೊರಡಿಸಿರುವ ಮಾರ್ಗಸೂಚಿಯಂತೆ ವಾಹನ ಬಳಕೆಗೆ ಮುಂದಾಗಬೇಕು.
-ಸುನೀಲ ಕಂಬೋಗಿ ಭೀಮ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ಕರ್ನಾಟಕ ಸಂಸ್ಥಾಪಕರು ಮುಧೋಳ