ಮುಧೋಳ: ಕಳೆದ 15 ದಿನದಿಂದ ನಿರಂತರವಾಗಿ ಏರುಗತಿಯಲ್ಲಿದ್ದ ಘಟಪ್ರಭಾ ನದಿ ನೀರು ಜು.30ರ ಮಂಗಳವಾರ ಮಧ್ಯಾಹ್ನದಿಂದ ಇಳಿಮುಖದತ್ತ ಸಾಗಿದೆ.
ಮುಧೋಳ ನಗರದ ಹೊರವಲಯದಲ್ಲಿರುವ ಯಾದವಾಡ ಸೇತುವೆ ಬಳಿ ಜು.31 ರ ಬುಧವಾರ ಬೆಳಗ್ಗೆ 2-3 ಅಡಿ ನೀರು ಕಡಿಮೆಯಾಗಿದ್ದು, ತಾಲೂಕಿನ ಬಹುತೇಕ ಭಾಗಗಳಲ್ಲಿಯೂ ಇಳಿಕೆಯಾಗಿದೆ.
ಮಿರ್ಜಿ ಗ್ರಾಮದಲ್ಲಿ ಜಲಾವೃತಗೊಂಡಿದ್ದ ಆಯುರ್ವೇದ ಚಿಕಿತ್ಸಾಲಯ, ಬಸವೇಶ್ವರ ವೃತ್ತದಲ್ಲಿ ನೀರು ಸಂಪೂರ್ಣ ಕಡಿಮೆಯಾಗಿದ್ದು, ಮಹಾಲಿಂಗಪುರ ರಸ್ತೆಯಲ್ಲಿರುವ ಬ್ಯಾರೇಜ್ ಹಾಗೂ ಮಲ್ಲಾಪುರ ಪಿ.ಜೆ. ಗ್ರಾಮಗಳ ಸಂಪರ್ಕ ರಸ್ತೆಯಲ್ಲಿ ಇನ್ನೂ ನೀರಿದ್ದು, ಸಂಚಾರ ಆರಂಭಕ್ಕೆ ಇನ್ನು ಕೆಲ ದಿನ ಕಾಲಾವಕಾಶ ಬೇಕಾಗುತ್ತದೆ.
ಒಂಟಗೋಡಿಯ ಲಕ್ಕಮ್ಮ ದೇವಾಲಯದ ಆವರಣಕ್ಕೆ ನುಗ್ಗಿದ್ದ ನೀರು ಇಳಿಕೆಯಾಗಿದ್ದು ದೇವಸ್ಥಾನದ ಪ್ರಾಂಗಣ ನೀರು ಮುಕ್ತವಾಗಿದೆ.
ಜಮಖಂಡಿ ಧಾರವಾಡ ರಾಜ್ಯ ಹೆದ್ದಾರಿಯಲ್ಲಿ 1 ಅಡಿ ನೀರು ಕಡಿಮೆಗೊಂಡಿದ್ದು ಬಹುತೇಕ ಇಂದು (ಜು.31) ಸಂಚಾರಕ್ಕೆ ಮುಕ್ತವಾಗುವ ಸಂಭವವಿದೆ.