ಮುಧೋಳ: ಶುದ್ದ ಕುಡಿಯುವ ನೀರಿಗಾಗಿ ಲೋಕಾಪುರ ಪಟ್ಟಣ ಪಂಚಾಯತ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆಗೆ ಮುಂದಾದ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿದ ಪಪಂ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ ಸಮಸ್ಯೆ ಸರಿಪಡಿಸಲು ಎರಡು ದಿನ ಕಾಲಾವಕಾಶ ಪಡೆದರು.
ಪ್ರತಿಭಟನಾಕಾರರ ಮನವೊಲಿಸಿದ ಮುಖ್ಯಾಧಿಕಾರಿ, ಶುದ್ದ ಕುಡಿಯುವ ನೀರಿಗಾಗಿ ಎರಡು ಬೋರ್ ವೆಲ್ ಕೊರೆಯಿಸಲಾಗಿದೆ. ಅವುಗಳ ಮೂಲಕ ನೀರು ಪೂರೈಕೆಗೆ 2 ದಿನ ಕಾಲಾವಕಾಶ ಬೇಕು ಅಲ್ಲಿಯವರೆಗೆ ಸಹಕರಿಸಿ ಎಂದು ಪ್ರತಿಭಟನಾಕಾರರ ಮನವೊಲಿಸಿದರು.
ಮುಖ್ಯಾಧಿಕಾರಿ ಮಾತಿಗೆ ಮನ್ನಣೆ ನೀಡಿದ ಪ್ರತಿಭಟನಾಕಾರರು ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದರು. 2 ದಿನದಲ್ಲಿ ಶುದ್ದ ಕುಡಿವ ನೀರು ಪೂರೈಕೆ ಮಾಡದಿದ್ದರೆ ಮತ್ತೆ ಹೋರಾಟ ಮಾಡುವುದಾಗಿ ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.
ಇಂಜಿನಿಯರ್ ಪ್ರಶಾಂತ ವಿರುದ್ಧ ಆಕ್ರೋಶ: ಪಟ್ಟಣ ಪಂಚಾಯತ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಜಿನಿಯರ್ ಪ್ರಶಾಂತ ಪಾಟೀಲ ಅವರು ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ನೀರಿನ ಸಮಸ್ಯೆ ಬಗ್ಗೆ ಹಲವು ದಿನಗಳಿಂದ ಇಂಜಿನಿಯರ್ ಗಮನಕ್ಕೆ ತಂದಿದ್ದರೂ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ. ಮೇಲಧಿಕಾರಿಗಳು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಕೃಷ್ಣಪ್ಪ ಕತ್ತಿ, ಲೋಕಣ್ಣ ಉಳ್ಳಾಗಡ್ಡಿ, ಲೋಕಣ್ಣ ಬಟುಕುರ್ಕಿ, ರಮೇಶ ಗಸ್ತಿ, ಕುಡುಚಿ, ಭೀಮಸಿ ಗಸ್ತಿ, ಮಂಜು ಗಸ್ತಿ, ದುರ್ಗಪ್ಪ ಗಸ್ತಿ, ರಮೇಶ ನಾವಲಗಿ, ನಾಗಪ್ಪ ಗಸ್ತಿ, ರೇಣುಕಾ ನ್ಯಾಮಗೌಡ, ಲಕ್ಷ್ಮವ್ವ ಗಸ್ತಿ ಸೇರದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪಿಎಸ್ಐ ಕೆ.ಬಿ. ಜಕ್ಕಣ್ಣವರ ಸೂಕ್ತ ಬಂದೋ ಬಸ್ತ್ ಏರ್ಪಡಿಸಿದ್ದರು.