ಮುಧೋಳ: ಘಟಪ್ರಭಾ ಪ್ರವಾಹಕ್ಕೆ ಸಿಲುಕಿರುವ ಸಂತ್ರಸ್ಥರಿಗೆ ನೆರವಾಗಬೇಕಿದ್ದ ಕಾಳಜಿ ಕೇಂದ್ರಗಳು ಸಂತ್ರಸ್ಥರ ಹೊಟ್ಟೆ ತುಂಬಿಸುತ್ತಿಲ್ಲ. ಅರೆಹೊಟ್ಟೆ ಊಟ ತಡೆಯದೆ ಸಂತ್ರಸ್ಥರು ಕಾಳಜಿ ಕೇಂದ್ರದಲ್ಲಿಯೇ ಗ್ಯಾಸ್ ಬಳಕೆ ಮಾಡಿ ಹಚ್ಚಿನ ಆಹಾರ ತಯಾರಿಸುತ್ತಿದ್ದಾರೆ.
ಮುಧೋಳ ತಾಲೂಕಿನ ಮಿರ್ಜಿ ಗ್ರಾಮದಲ್ಲಿ ಆರಂಭಿಸಿರುವ ಬಿ.ಬಿ. ಮುಧೋಳ ಶಾಲೆಯಲ್ಲಿನ ಸಂತ್ರಸ್ಥರು ತಮ್ಮ ಅಗತ್ಯ ಅಡುಗೆಗಾಗಿ ಕಾಳಜಿ ಕೇಂದ್ರದಲ್ಲಿಯೇ ಗ್ಯಾಸ್ ಒಲೆ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಎರಡು ಚಪಾತಿ ಸಾಲಲ್ಲ : ಹಳ್ಳಿಗಾಡಿನ ರೈತಾಪಿ ವರ್ಗಕ್ಕೆ ಹೊಟ್ಟೆ ತುಂಬಾ ರೊಟ್ಟಿ ತಿಂದಾಗ ಮಾತ್ರ ರಟ್ಟಿಗಟ್ಟಿಯಾಗುತ್ತದೆ. ಆದರೆ ಸದ್ಯ ಕಾಳಜಿ ಕೇಂದ್ರದಲ್ಲಿ ಉದಯವಾಣಿ ತಂಡ ರಿಯಾಲಿಟಿ ಚೆಕ್ ಗಾಗಿ ತೆರಳಿದಾಗ ಕೇವಲ ಎರಡು ಚಪಾತಿ ನೀಡುತ್ತದ್ದಾರೆ ಎಂಬ ಸಂತ್ರಸ್ಥರು ಅಸಾಹಯಕತೆಯ ಮಾತುಗಳು ಕೇಳಿಬಂದವು.
ಎರಡು ಚಾಪತಿಯೊಂದಿಗೆ ಹೊಟ್ಟೆ ತುಂಬಾ ಅನ್ನ ನೀಡುತ್ತಾರೆ ಆದರೆ ನಮಗೆ ಅನ್ನ ಒಗ್ಗಲ್ಲ. ಕೃಷಿ ಕಾರ್ಯದಲ್ಲಿ ತೊಡಗುವುದರಿಂದ ಮತ್ತೆ ಹಸಿವಾಗುತ್ತದೆ. ಅದಕ್ಕೆ ಗ್ಯಾಸ್ ನಲ್ಲಿ ನಮಗೆ ನೇಕಾದ ಆಹಾರ ತಯಾರಿಸಿಕೊಳ್ಳುತ್ತೇವೆ ಎನ್ನುತ್ತಾರೆ ಸಂತ್ರಸ್ಥರು.
ಬೆಳಗ್ಗೆ ಉಪಹಾರ, ಮಧ್ಯಾಹ್ನ ಎರಡು ಚಪಾತಿ ಅನ್ನ ಸಾಂಬರ್ ನೀಡುತ್ತಿದ್ದಾರೆ ಸಂಜೆಯೂ ಅದೇ ರೀತಿಯ ಆಹಾರ ಕೊಡುತ್ತಾರೆ. ಹೊಲಮನೆಯಲ್ಲಿ ಕೃಷಿಕಾರ್ಯ ಮಾಡುವ ನಮಗೆ ಇಲ್ಲಿನ ಆಹಾರ ಹೊಟ್ಟೆ ತುಂಬಿಸುತ್ತಿಲ್ಲ ಆದ್ದರಿಂದ ನಮಗೆ ನೀಡಿರುವ ಕೊಠಡಿಯಲ್ಲಿಯೇ ಗ್ಯಾಸ್ ನಿಂದ ನಮಗೆ ಬೇಕಾದ ಹೆಚ್ಚಿನ ಆಹಾರ ತಯಾರಿಸಿಕೊಳ್ಳುತ್ತೇವೆ ಎಂದು ಧೈರ್ಯದಿಂದ ನುಡಿಯುತ್ತಾರೆ ಸಂತ್ರಸ್ಥರು.
ಮಕ್ಕಳಿಗಾಗಿ ವಿಷೇಶ ಆಹಾರ ಪದ್ದತಿ : ಇನ್ನು ಕಾಳಜಿ ಕೇಂದ್ರದಲ್ಲಿನ ಎಲ್ಲ ಜನರಿಗೂ ಏಕರೂಪದ ಆಹಾರ ನೀಡಲಾಗುತ್ತಿದೆ. ಆದರೆ ಅಲ್ಲಿನ ಮಕ್ಕಳು ಹಾಗೂ ಕೂಸುಗಳಿಗೆ ಇಂತಹ ಆಹಾರ ಒಗ್ಗುತ್ತಿಲ್ಲ. ಇದರಿಂದ ಮಕ್ಕಳ ತರಹೇವಾರಿ ಅಡುಗೆಗಾಗಿ ಒಲೆ ಬಳಕೆ ಮಾಡಿಕೊಳ್ಳುತ್ತೇವೆ ಎನ್ನುತಾರೆ ಅಲ್ಲಿನ ಜನರು.
ಕೃತಜ್ಞಾಭಾವದಲ್ಲಿ ಸಂತ್ರಸ್ಥರು : ಇಷ್ಟೆಲ್ಲ ಸಮಸ್ಯೆಗಳ ನಡುವೆಯೂ ಕಾಳಜಿ ಕೇಂದ್ರದಲ್ಲಿ ವಾಸಿಸುವ ಜನರು ಮಾತ್ರ ಅಧಿಕಾರಿಗಳಿಗೆ ಕೃತಜ್ಞತೆಭಾವದಿಂದ ನೋಡುತ್ತಿದ್ದಾರೆ. ಮುಳುಗುವವನಿಗೆ ಹುಲ್ಲುಕಡ್ಡಿ ಆಸರೆಯೆಂಬಂತೆ ನಾವು ಅಸಹಾಯಕರಾಗದಾಗ ನಮಗೆ ಆಸರೆ ನೀಡಿದ್ದಾರೆ. ಇರುವುದರಲ್ಲಿಯೇ ತೃಪ್ತರಾಗುತ್ತೇವೆ ಎನ್ನುವ ಮಾತುಗಳನ್ನಾಡುತ್ತಾರೆ. ಆದರೆ ಕೆಲ ಅಧಿಕಾರಿ ವರ್ಗ ಮಾತ್ರ ಸಂತ್ರಸ್ಥರ ಅಸಹಾಯಕತೆಯನ್ನೆ ಬಂಡವಾಳವನ್ನಾಗಿಸಿಕೊಂಡಂತೆ ಕಾಣುತ್ತಿದೆ.
ಹಸುಗೂಸು ಎರೆಯಲು ನೆರೆಮನೆಯ ನೆರವು : ಮಿರ್ಜಿಯ ಒಂದು ಕಾಳಜಿ ಕೇಂದ್ರಲ್ಲಿರುವ ನಾಲ್ಕು ತಿಂಗಳ ಹಸುಗೂಸು ಎರೆಯಲು ಬಿಸಿ ನೀರು ಸಿಗದೆ ಪಕ್ಕದ ಹೊಲದಲ್ಲಿನ ನೆರೆ ಮನೆಯಲ್ಲಿನ ನೀರು ಬಳಸುವಂತಾಗಿದೆ. ಕಾಳಜಿ ಕೇಂದ್ರಲ್ಲಿನ ಸಂತ್ರಸ್ಥರಿಗೆ ಸಣ್ಣಮಟ್ಟದ ಅನಾರೋಗ್ಯ ಬಂದರೂ ಕುಡಿಯಲು ಬಿಸಿ ನೀರು ದೊರೆಯುವುದಿಲ್ಲ. ಅದಕ್ಕಾಗಿಯೂ ಗ್ಯಾಸ್ ಒಲೆ ಬಳಕೆ ಮಾಡುವುದಾಗಿ ಹೇಳುತ್ತಾರೆ ಸಂತ್ರಸ್ಥರು.
ಪ್ರವಾಹದ ಪ್ರಕೋಪಕ್ಕೆ ಸಿಲುಕಿ ಮನೆಮಠ ಕಳೆದುಕೊಂಡು ತಮ್ಮ ಸ್ವಾಭಿಮಾನವನ್ನು ಬದಿಗೊತ್ತಿ ಸರ್ಕಾರದ ನೆರವು ಅರಸಿ ಬಂದವರಿಗೆ ಅಷ್ಟೇ ಅಕ್ಕರೆಯಿಂದ ನೋಡಿಕೊಳ್ಳುವುದು ಅಧಿಕಾರಿ ವರ್ಗದ ಕರ್ತವ್ಯ ಕೂಡಲೇ ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಸಂತ್ರಸ್ಥರಿಗೆ ಅಗತ್ಯ ನೆರವು ನೀಡಬೇಕು ಎಂಬುದು ಪ್ರಜ್ಞಾವಂತರ ಆಗ್ರಹವಾಗಿದೆ.
ಕಾಳಜಿ ಕೇಂದ್ರದಲ್ಲಿ ಸಂತ್ರಸ್ಥರಿಗೆ ಇಂತಿಷ್ಟೆ ಪ್ರಮಾಣದಲ್ಲಿ ಆಹಾರ ನೀಡಬೇಕು ಎನ್ನುವ ಮಾರ್ಗೋಪಾಯಗಳಿವೆ. ಆದರೂ ಹೆಚ್ಚಿನ ಚಪಾತಿ ಬೇಕಾದರೆ ಕೇಳಿ ಪಡೆದುಕೊಳ್ಳಬಹದು. ಮಿರ್ಜಿ ಕಾಳಜಿ ಕೇಂದ್ರದಲ್ಲಿ ಆಹಾರ ಕ್ರಮದ ಬಗ್ಗೆ ನನ್ನ ಗಮನಕ್ಕಿಲ್ಲ ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ.
– ಶ್ವೇತಾ ಬೀಡಿಕರ ಉಪವಿಭಾಗಾಧಿಕಾರಿ ಜಮಖಂಡಿ