ಮುದಗಲ್ಲ: ಹಿಂಗಾರು ಹಂಗಾಮಿನ ಕಡಲೆ, ಜೋಳ ಬೆಳೆ ಉತ್ತಮ ಇಳುವರಿ ಬಂದಿದೆ. ರಾಶಿ ಮಾಡಿ ಬೆಳೆ ಮನೆ ಸೇರಿಸೋಣ ಎನ್ನುವ ಲೆಕ್ಕಾಚಾರದಲ್ಲಿರುವ ರೈತರಿಗೆ ಕೂಲಿಕಾರರ ಸಮಸ್ಯೆ ಎದುರಾಗಿದೆ.
ಮತ್ತೊಂದಡೆ ಹಸಿ ಕಡಲೆಗೆ ಕಳ್ಳರ ಕಾಟ ರೈತರ ನಿದ್ದೆಗೆಡಿಸಿದೆ. ಮುಂಗಾರಿಗೆ ಸಜ್ಜೆ, ತೊಗರಿ ಬೆಳೆದರೂ ಸಜ್ಜೆ ಕಟಾವು ಸಮಯದಲ್ಲಿ ಮಳೆ ಹಾಳು ಮಾಡಿತ್ತು. ಹಿಂಗಾರಿಗೆ ಉತ್ತಮ ಮಳೆ ಸುರಿದ ಕಾರಣ ಸಕಾಲಕ್ಕೆ ಬಿತ್ತನೆ ಕೈಗೊಂಡ ರೈತರು ಕಡಲೆ, ಜೋಳ ಬೆಳೆಗೆ ಔಷಧಿ, ರಸಗೊಬ್ಬರ ಉಪಯೋಗಿಸಿ ಬೆಳೆ ರಕ್ಷಿಸಿಕೊಂಡಿದ್ದಾರೆ. ಆದರೆ ಈಗ ರೈತರ ಜಮೀನಿನಲ್ಲಿರುವ ಹಸಿಕಡಲೆ ಬೆಳೆ (ಸುಲಗಾಯಿ) ಕಳ್ಳರಿಂದ ಉಳಿಸಿಕೊಳ್ಳುವುದು ಚಿಂತೆಯಾಗಿದೆ. ಸಾಮಾನ್ಯವಾಗಿ ಎಲ್ಲೆಡೆ ಕಡಲೆ ಬೆಳೆದಿದ್ದು ಲಿಂಗಸುಗೂರ ರಸ್ತೆ, ಇಲಕಲ್ಲ ರಸ್ತೆ, ಗಂಗಾವತಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಯ ಅಕ್ಕಪಕ್ಕದಲ್ಲಿನ ಹೊಲಗಳಲ್ಲಿ ಬೆಳೆದ ಕಡಲೆಯನ್ನು ಪ್ರಯಾಣಿಕರು ಕಿತ್ತಿಕೊಂಡು ಹೋಗುತ್ತಿದ್ದಾರೆ.
ರೈತರು ಜಮೀನಿನಲ್ಲಿ ಇರದೇ ಇರುವುದನ್ನು ಗಮನಿಸಿ ಹಸಿ ಕಡಲೆ ಕಿತ್ತುಕೊಂಡು ಹೋಗುತ್ತಿದ್ದಾರೆ. ಕೀಟ, ಪ್ರಾಣಿ ಹಾಗೂ ಪಕ್ಷಿಗಳಿಂದ ಬೆಳೆ ರಕ್ಷಣೆ ಮಾಡಲೂ ಹೈರಾಣಾಗುತ್ತಿದ್ದ ರೈತರು ಈಗ ಕಳ್ಳರಿಂದ, ಪ್ರಯಾಣಿಕರಿಂದ ಬೆಳೆ ರಕ್ಷಿಸಿಕೊಳ್ಳಲು ಪರದಾಡಬೇಕಿದೆ ಎನ್ನುತ್ತಾರೆ ರೈತ ಸಂಗಪ್ಪ.
ಬೇಡಿಕೆ: ಬಹುತೇಕ ಕಡಲೆ, ಜೋಳ ಕಟಾವಿಗೆ ಬಂದಿದ್ದು, ಕೂಲಿಕಾರರ ಕೊರತೆಯಿಂದಾಗಿ ಕಟಾವು ಕಾರ್ಯ ಕುಂಟುತ್ತ ಸಾಗಿದೆ. ದಿನಕ್ಕೆ 150ರಿಂದ 200 ರೂ. ಕೂಲಿ ನೀಡುತ್ತಿದ್ದರು ಮಹಿಳಾ ಕೂಲಿಕಾರರು ಸಿಗುತ್ತಿಲ್ಲ, ಒಂದು ಊರಿಂದ ಮತ್ತೂಂದು ಊರಿಗೆ ಹೋಗುವ ಕೂಲಿಕಾರರಿಗೆ ಡಿಮ್ಯಾಂಡ್ ಬಂದಿದೆ. ಸಾರಿಗೆ ವೆಚ್ಚ, ಊಟದ ಖರ್ಚಿನ ಬೇಡಿಕೆ ಇಡುತ್ತಾರೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ದರ ಕುಸಿತ: ಮಾರುಕಟ್ಟೆಯಲ್ಲಿ ಕಡಲೆ ದರ ಕುಸಿದಿದೆ. ಈ ವರ್ಷ ರೈತರು ಬೆಳೆದ ಯಾವುದೇ ಫಸಲಿಗೆ ಉತ್ತಮ ದರ ಸಿಗುತ್ತಿಲ್ಲ. ಕಡಲೆಗೆ ಸರಕಾರ ಬೆಂಬಲ ಬೆಲೆ ನಿಗದಿ ಮಾಡಿ ಖರೀದಿ ಕೇಂದ್ರ ತೆರೆದು ರೈತರಿಂದ ಕಡಲೆ ಖರೀದಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ಮನೆಯಲ್ಲಿ ಖಾಲಿ ಹರಟೆ ಹೊಡೆಯುವ ಗ್ರಾಮೀಣ ಯುವಕರು ಬೆಂಗಳೂರು, ಪುಣೆ ಸೇರಿ ಮಹಾನಗರಗಳಿಗೆ ದುಡಿಯಲು ಹೋಗುತ್ತಾರೆ. ಆದರೆ ಹೊಲದಲ್ಲಿ ಕೂಲಿ ಕೆಲಸಕ್ಕೆ ಬರುತ್ತಿಲ್ಲ.
ಗ್ಯಾನಪ್ಪ,
ಬುದ್ದಿನ್ನಿ ಗ್ರಾಮದ ರೈತ
ದೇವಪ್ಪ ರಾಠೊಡ