ಮದ್ದೂರು: ಸರ್ಕಾರದಿಂದ ಮಂಜೂರಾಗಿರುವ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ನೀಡುವ ಸಂಬಂಧ ವಿಶೇಷ ಗ್ರಾಮಸಭೆ ನಡೆಸುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಗ್ರಾಪಂ ಸದಸ್ಯರು ಹಾಗೂ ಅಧ್ಯಕ್ಷರ ನಡುವೆ ಮಾತಿನ ಚಕಮಕಿ ನಡೆದು ನಿಗದಿಯಾಗಿದ್ದ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದ ಘಟನೆ ಜರುಗಿದೆ.
ಅಸಮರ್ಪಕ ಮಾಹಿತಿ: ತಾಲೂಕಿನ ಬೆಸಗರಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಗ್ರಾಪಂ ಅಧ್ಯಕ್ಷೆ ರೇಖಾ ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಿಗದಿಯಾಗಿದ್ದ ಸಾಮಾನ್ಯ ಸಭೆ ಆರಂಭಕ್ಕೂ ಮುನ್ನ ಸದಸ್ಯರು ಹಾಗೂ ಅಧ್ಯಕ್ಷರ ನಡುವೆ ಗ್ರಾಮಗಳ ಅಭಿವೃದ್ಧಿ ವಿಚಾರವಾಗಿ ನಡೆದ ಚರ್ಚೆ ವೇಳೆ ಸಮರ್ಪಕ ಮಾಹಿತಿ ಒದಗಿಸದ ಅಧಿಕಾರಿಗಳು ಹಾಗೂ ಗ್ರಾಪಂ ಅಧ್ಯಕ್ಷರ ನಡೆಯಿಂದ ಬೇಸತ್ತು ಸಾಮಾನ್ಯ ಸಭೆಯಿಂದ ಹೊರನಡೆದರು.
ಕ್ರಮ ಕೈಗೊಳ್ಳಿ: ಕಳೆದ ನಾಲ್ಕು ತಿಂಗಳಿಂದಲೂ ಸಭೆ ನಡೆಯದೆ ಸಾರ್ವಜನಿಕರ ಕೆಲಸ ಕಾರ್ಯಗಳು ತ್ವರಿತಗತಿಯಲ್ಲಿ ಸಾಗದೆ ವಿಳಂಬ ಧೋರಣೆ ಅನು ಸರಿಸುತ್ತಿದ್ದು, ಕುಂದುಕೊರತೆ ಅರ್ಜಿಗಳು ಸಮ ರ್ಪಕವಾಗಿ ವಿಲೇವಾರಿಯಾಗದ ಕಾರಣ ಹಲ ವಾರು ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದು, ಕೂಡಲೇ ಕ್ರಮ ವಹಿಸಬೇಕೆಂದು ಕೆಲ ಗ್ರಾಪಂ ಸದಸ್ಯರು ಅಧ್ಯಕ್ಷರನ್ನು ಒತ್ತಾಯಿಸಿದರು. ಸರ್ಕಾರದಿಂದ ಮಂಜೂರಾಗಿರುವ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲು ವಿಶೇಷ ಗ್ರಾಮಸಭೆ ನಡೆಸುವ ಜತೆಗೆ ಬಿಡುಗಡೆಯಾಗಿರುವ ಅನುದಾನವನ್ನು ಇತರೆ ಗ್ರಾಮಗಳಿಗೆ ಹಂಚಿಕೆ ಮಾಡುವ ಸಂಬಂಧ ಕ್ರಮ ವಹಿಸದ ಅಧಿಕಾರಿಗಳ ವಿರುದ್ಧ ಕೆಲ ಗ್ರಾಪಂ ಸದಸ್ಯರು ಕಿಡಿಕಾರಿದರಲ್ಲದೇ, ಸಮರ್ಪಕ ಮಾಹಿತಿ ನೀಡುವವರೆಗೂ ಸಾಮಾನ್ಯ ಸಭೆಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.
ಗ್ರಾಮಾಭಿವೃದ್ಧಿಗೆ ಒತ್ತು ನೀಡಿ: ಗ್ರಾಪಂ ಸದಸ್ಯರ ಮಾತಿಗೆ ಅಧ್ಯಕ್ಷರು ಯಾವುದೇ ಪ್ರತಿಕ್ರಿಯೆ ನೀಡು ವುದಿಲ್ಲವೆಂದು ಆರೋಪಿಸಿದ ಕೆಲ ಸದಸ್ಯರು, ಕಳೆದ ಬಾರಿಯೂ ಹಲವಾರು ಕಾರಣಗಳನ್ನು ನೀಡಿ ಸಭೆಯನ್ನು ಬಹಿಷ್ಕರಿಸಿದ್ದು, ಇದನ್ನರಿತು ಅಧ್ಯಕ್ಷರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮಾಭಿವೃದ್ಧಿಗೆ ಒತ್ತು ನೀಡುವಂತೆ ಹಿರಿಯ ಸದಸ್ಯರು ಸೂಚಿ ಸಿದರು. ಬಳಿಕ ಮಾತನಾಡಿದ ಗ್ರಾಪಂ ಅಧ್ಯಕ್ಷೆ ರೇಖಾ ವೆಂಕಟೇಶ್, ಬೆಸಗರಹಳ್ಳಿ ಗ್ರಾಮಾಭಿವೃದ್ಧಿಗೆ ಪ್ರತಿ ಯೊಬ್ಬ ಸದಸ್ಯರು ಪಕ್ಷಾತೀತವಾಗಿ ಕೈ ಜೋಡಿಸುವಂತೆ ಕೆಲ ವಿಚಾರಗಳನ್ನು ಮುಂದಿಟ್ಟು
ಸಾಮಾನ್ಯ ಸಭೆಯಿಂದ ಹೊರನಡೆಯುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ ಎಂದರು.
ಮುಂದಿನ ದಿನಗಳಲ್ಲಿ ಸರ್ಕಾರದಿಂದ ಮಂಜೂರಾಗಿರುವ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದು, ಕೆಲ ಗ್ರಾಮಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಮತ್ತು ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಕ್ರಮ ವಹಿಸಿರುವುದಾಗಿ ವಿವರಿಸಿದರು. ಗ್ರಾಪಂ ಉಪಾಧ್ಯಕ್ಷೆ ಅನಿತಾ, ಸದಸ್ಯರಾದ ಲೋಕೇಶ್, ಪ್ರಸನ್ನ, ಬಾಬು ಜ್ಯೋತಿ, ಶ್ರಾವ್ಯ, ಸೌಮ್ಯ ಇದ್ದರು.