Advertisement

ಪರ-ವಿರೋಧ ಎನ್ನದೆ ಅಭಿವೃದ್ಧಿ ಕೆಲಸ ಮಾಡೋಣ: ನಡಹಳ್ಳಿ

04:25 PM Jul 04, 2020 | Naveen |

ಮುದ್ದೇಬಿಹಾಳ: ಚುನಾವಣೆ ಬಂದಾಗ ಮಾತ್ರ ಪಕ್ಷ, ಪಂಗಡ ಎನ್ನಬೇಕು. ಉಳಿದೆಲ್ಲ ದಿನಗಳಲ್ಲಿ ಜನರ ಏಳಿಗೆಗೋಸ್ಕರ, ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಕೆಲಸ ಮಾಡಬೇಕು ಎಂದು ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಹೇಳಿದ್ದಾರೆ.

Advertisement

ಪಟ್ಟಣದ ಪುರಸಭೆ ಆವರಣದಲ್ಲಿ ಫಲಾನುಭವಿಗಳಿಗೆ ವಿವಿಧ ಸೌಲಭ್ಯ ಹಸ್ತಾಂತರಿಸುವ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು. ಪಟ್ಟಣ ಪ್ರದೇಶದ ಅಭಿವೃದ್ಧಿ ಜವಾಬ್ದಾರಿ ನನ್ನ ತಲೆ ಮೇಲಿದೆ. ಅಭಿವೃದ್ಧಿ ವಿಷಯದಲ್ಲಿ ಯಾರೂ ಪೂರ್ವಾಗ್ರಹ ಪೀಡಿತರಾಗಬಾರದು. ಶಾಸಕರು ಬಿಜೆಪಿಯವರು ನಾವು, ಕಾಂಗ್ರೆಸ್‌, ಜೆಡಿಎಸ್‌ ನವರು. ನಮಗೆ ಮಹತ್ವ ಕೊಡ್ತಾರೋ, ಇಲ್ವೋ ಅನ್ನೋ ಶಂಕೆ, ಅಪನಂಬಿಕೆ ಬೇಡ. ನಾವೆಲ್ಲರೂ ಜನರ ಸೇವಕರು ಅನ್ನೋದನ್ನ ಅರಿತುಕೊಳ್ಳಬೇಕು. ಸಂದರ್ಭ ಬಂದಾಗ ಮಾನವೀಯತೆ ದೃಷ್ಟಿಯಿಂದ ನಾವೆಲ್ಲ ಒಂದಾಗಿ ಕೆಲಸ ಮಾಡಬೇಕು. ಪುರಸಭೆ ಅನುದಾನದಲ್ಲಿ ಶಾಸಕನಾಗಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಅದು ಪುರಸಭೆ ಸದಸ್ಯರ ಹಕ್ಕು. ಅದೇ ರೀತಿ ಶಾಸಕರ ಅನುದಾನ ಪ್ರಶ್ನಿಸುವ ಹಕ್ಕು ಬೇರೆಯವರಿಗೆ ಇಲ್ಲ. ಇಲ್ಲಿ ಪರಸ್ಪರ ಒಬ್ಬರಿಗೊಬ್ಬರು ಸಹಕಾರ ನೀಡಿ ಕೆಲಸ ಮಾಡಬೇಕಾಗುತ್ತದೆ. ಪರ, ವಿರೋಧ ಎನ್ನದೆ ಎಲ್ಲರೂ ಸೇರಿ ಅಭಿವೃದ್ಧಿ ಕೆಲಸ ಮಾಡೋಣ ಎಂದರು.

ಒಟ್ಟು 13 ಕೋಟಿ ರೂ. ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಿಸಿದ್ದೇನೆ. ಇನ್ನೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸುತ್ತೇನೆ. ಎಲ್ಲ 23 ವಾರ್ಡ್‌ಗಳೂ ಅಭಿವೃದ್ಧಿ ಹೊಂದಬೇಕು. ಎಲ್ಲವನ್ನೂ ಹಂತ ಹಂತವಾಗಿ ಅಭಿವೃದ್ಧಿ ಮಾಡಲಾಗುತ್ತದೆ. ಶಾಸಕನಾದ ಕೆಲವೇ ತಿಂಗಳಲ್ಲಿ ಸಾಕಷ್ಟು ಸವಾಲು ಎದುರಿಸಿ 13 ಕೋಟಿ ರೂ. ಮಂಜೂರು ಮಾಡಿಸಿದ್ದು ಸಾಧನೆ. ಇನ್ನೂ ಹೆಚ್ಚು ಸಾಧನೆ ಮಾಡಿ ತೋರಿಸಬೇಕಿದೆ. ಪಟ್ಟಣದಲ್ಲಿ ಹಾಯ್ದು ಹೋಗುವ ರಾಜ್ಯ ಹೆದ್ದಾರಿಯನ್ನು ಸುಂದರವಾಗಿ ಕಾಣುವಂತೆ ಮಾಡಲು ಸಾಕಷ್ಟು ಕಷ್ಟಪಟ್ಟಿದ್ದೇನೆ. ತಾಲೂಕಿನಲ್ಲಿ ವಿದ್ಯುತ್‌ ಸಮಸ್ಯೆ ಹೋಗಲಾಡಿಸಲು 5 ಕಡೆ ಸಬ್‌ ಸ್ಟೇಷನ್‌ ಮಂಜೂರಿಸಲಾಗಿದೆ. ತೆರಿಗೆ ಸಂಗ್ರಹಿಸಿ ಪುರಸಭೆಯನ್ನು ಬಲಗೊಳಿಸಲು ಸದಸ್ಯರೆಲ್ಲರೂ ಸಹಕರಿಸಬೇಕು ಎಂದರು.

ಕೋವಿಡ್ ಹೊಡೆದೋಡಿಸಲು ಮಾಸ್ಕ್ ಧರಿಸಿ, ಸ್ಯಾನಿಟೈಸರ್‌ ಬಳಸಲು ಪ್ರತಿಯೊಬ್ಬ ಸದಸ್ಯ ತಮ್ಮ ವಾರ್ಡ್‌ಗಳಲ್ಲಿ ಜಾಗೃತಿ ಅಭಿಯಾನ ನಡೆಸಬೇಕು. ಆರೋಗ್ಯ ಇಲಾಖೆ ಪ್ರಯತ್ನಗಳಿಗೆ ಸಾರ್ವಜನಿಕರೆಲ್ಲರೂ ಸಹಕರಿಸಬೇಕು ಎಂದರು. ಪುರಸಭೆ ಎಲ್ಲ ಸದಸ್ಯರು, ಮುಖ್ಯಾಧಿಕಾರಿ ಗೋಪಾಲ ಕಾಸೆ ಅವರು ಶಾಸಕರ ಜೊತೆ ಜಂಟಿಯಾಗಿ 2017ರಿಂದ 2020ನೇ ಸಾಲಿನವರೆಗೆ ಎಸ್‌ಎಫ್‌ಸಿ, ಪುರಸಭೆ ಅನುದಾನದಲ್ಲಿ ವಿಕಲಚೇತನರಿಗೆ ತ್ರಿಚಕ್ರ ವಾಹನ, ಎಸ್ಸಿ-ಎಸ್ಟಿ ಅರ್ಹರಿಗೆ ಹೊಲಿಗೆ ಯಂತ್ರ ವಿತರಿಸಿದರು.

ಶಿಷ್ಟಾಚಾರ ಪಾಲಿಸಿ: ಕಾರ್ಯಕ್ರಮ ವೇದಿಕೆಯಲ್ಲಿ ಶಾಸಕರ ಜೊತೆ ಬಿಜೆಪಿ ಮುಖಂಡರನ್ನು ಕೂಡಿಸಲಾಗಿತ್ತು. ಇದಕ್ಕೆ ತಕರಾರು ತೆಗೆದ ಕಾಂಗ್ರೆಸ್‌ ಸದಸ್ಯರು ನೆಲದ ಮೇಲೆ ಕುಳಿತು ಅಸಮಾಧಾನ ತೋಡಿಕೊಂಡರು. ಕೆಲವರು ಮುಖ್ಯಾಧಿಕಾರಿ ಜೊತೆ ವಾಗ್ವಾದ ನಡೆಸಿ ಸದಸ್ಯರನ್ನು ವೇದಿಕೆಗೆ ಕರೆಯದೆ ಅಗೌರವ ತೋರಿಸಲಾಗಿದೆ. ಸರ್ಕಾರಿ ಕಾರ್ಯಕ್ರಮವಾಗಿದ್ದು ಶಿಷ್ಟಾಚಾರ ಪಾಲನೆ ಆಗಿಲ್ಲ ಎಂದು ತಕರಾರು ತೆಗೆದು ಗೊಂದಲ ಮೂಡಿಸಿದರು. ಕೊನೆಗೆ ಶಾಸಕರೇ ಎಲ್ಲರನ್ನೂ ಸಮಾಧಾನಪಡಿಸಿ ಕಾರ್ಯಕ್ರಮ ಸುಲಲಿತವಾಗಿ ನಡೆಯಲು ಸಹಕರಿಸಿದರು.

Advertisement

ಭೂಮಿಪೂಜೆ: ಇದಕ್ಕೂ ಮುನ್ನ ಶಾಸಕರು ಸರ್ಕಾರಿ ಪಪೂ ಕಾಲೇಜಿಗೆ 2019-20ನೇ ಸಾಲಿನಲ್ಲಿ ರಾಜ್ಯ ಬಂಡವಾಳ ವೆಚ್ಚದಡಿ ಮಂಜೂರಾದ ಹೆಚ್ಚುವರಿ ಕೊಠಡಿ, ಶೌಚಾಲಯ ಕಾಮಗಾರಿಗೆ ಭೂಮಿಪೂಜೆ ನಡೆಸಿದರು. ಪುರಸಭೆ ಸದಸ್ಯರಾದ ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಸದಾಶಿವ ಮಾಗಿ, ಪಪೂ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಆರ್‌.ಎ. ಜಹಾಗಿರದಾರ, ಪಪೂ ಕಾಲೇಜುಗಳ ಪ್ರಾಂಶುಪಾಲರ ಮಹಾಮಂಡಳದ ಅಧ್ಯಕ್ಷ ಪ್ರಾ| ಎಸ್‌.ಎಸ್‌. ಹೊಸಮನಿ, ಪ್ರಾ| ಎಸ್‌. ಎಸ್‌. ಅಂಗಡಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next