ಮುದ್ದೇಬಿಹಾಳ: ಪಟ್ಟಣದಲ್ಲಿ ಪ್ರಮುಖ ವೃತ್ತಗಳಲ್ಲಿ ವಾಹನಕಾರರು ರಸ್ತೆ ನಿಯಮ ಪಾಲನೆ ಮಾಡದೇ ಸಂಚಾರ ನಡೆಸಿದ್ದರ ಪರಿಣಾಮ ಸಾರ್ವಜನಿಕರು ಪರದಾಡುವಂತಾಗಿದೆ. ಇದಕ್ಕಾಗಿ ಸ್ಥಳೀಯ ಪಟ್ಟಣದ ಅಧಿಕಾರಿಗಳು ಯಾವುದೇ ರೀತಿ ಕ್ರಮ ಕೈಗೊಳ್ಳಲು ಮುಂದಾಗದಿರುವುದು ಕಾರಣ ಎಂದು ಸಾರ್ವಜನಿಕರ ವಲಯದಲ್ಲಿ ದೂರುಗಳು ಕೇಳಿ ಬರುತ್ತಿವೆ.
ಹೌದು, ವಿಜಯಪುರ, ನಿಡಗುಂದಿ ಹಾಗೂ ತಂಗಡಗಿ ಗ್ರಾಮದಲ್ಲಿ ಸಂಪರ್ಕಕ್ಕೆ ಇಲ್ಲಿನ ಬಸವೇಶ್ವರ ವೃತ್ತ ಪ್ರಮುಖವಾಗಿದೆ. ನಿತ್ಯವೂ ಟಿಪ್ಪರ್‌ದಿಂದ ಹಿಡಿದು ದ್ವಿಚಕ್ರ ವಾಹನಕಾರರ ಸಂಚಾರ ದಟ್ಟವಾಗಿರುತ್ತದೆ. ಆದರೆ ವೃತ್ತದಲ್ಲಿ ರಸ್ತೆ ಸಂಚಾರಿ ನಿಯಮ ಪಾಲಸದ ಕಾರಣ ಕೆಲವು ಅನಾಹುತಗಳೂ ನಡೆದಿವೆ.
ಪೊಲೀಸ್ ಸಿಬ್ಬಂದಿ ಕೊರತೆ: ದಟ್ಟನೆ ವಾಹನ ಸಂಚಾರವಿದ್ದರೂ ಬಸವೇಶ್ವರ ವೃತ್ತದಲ್ಲಿ ಕೇವಲ ಸಂತೆ ದಿನಗಳಾದ ಗುರುವಾರ ಹಾಗೂ ಸೋಮವಾರ ಮಾತ್ರ ಪೊಲೀಸರು ವೃತ್ತದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ವೃತ್ತದಲ್ಲಿ ಪೊಲೀಸ್ ಸಿಬ್ಬಂದಿಯ ಕೊರತೆಯಿಂದಲೇ ವಾಹನಕಾರರು ರಸ್ತೆ ಸಂಚಾರಿ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬುವುದು ಜನರ ಆರೋಪವಾಗಿದೆ.
ಬೇಕಾಬಿಟ್ಟಿ ಪಾರ್ಕಿಂಗ್: ಬಸವೇಶ್ವರ ವೃತ್ತದಲ್ಲಿ ಪೊಲೀಸ್ ಸಿಬ್ಬಂದಿಗಳು ಇಲ್ಲದ ಕಾರಣ ಕೆಲ ಗೂಡ್ಸ್ ವಾಹನಕಾರರು ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಇದು ಟ್ರಾಫಿಕ್ ಜಾಮ್‌ಗೆ ಪ್ರಮುಖ ಕಾರಣವಾಗಿದೆ. ಇದಕ್ಕಾಗಿ ಪೊಲೀಸ್ ಸಿಬ್ಬಂದಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.
ಫುಟ್ಪಾತ್ ಅತಿಕ್ರಮಣ: ಬಸವೇಶ್ವರ ವೃತ್ತದಿಂದ ಪಶು ಸಂಗೋಪನಾ ಇಲಾಖೆಯವರೆಗೂ ಪುರಸಭೆಯಿಂದ ನಿರ್ಮಿಸಿರುವ ಫುಟ್ಪಾತ್‌ನ್ನು ಕೆಲ ಅಂಗಡಿಕಾರರು ಅತಿಕ್ರಮಣಗೊಳಿಸಿದ್ದ ಪಾದಚಾರಿಗಳಿಗೂ ತೊಂದರೆಯಾಗಿದೆ. ಅತಿಕ್ರಮಣದಿಂದ ಪಾದಚಾರಿಗಳೂ ರಸ್ತೆಯಲ್ಲಿ ನಡೆದಾಡುವ ದುಸ್ಥಿತಿ ಎದುರಾಗಿದೆ. ಆದರೆ ಇದರ ಬಗ್ಗೆ ಪುರಸಭೆ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಕೂಡಲೇ ಫುಟ್ಪಾತ್ ಅತಿಕ್ರಮಣ ತೆರವುಗೊಳಿಸಿ ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಬೇಕಾಗಿದೆ.
ಬಸವೇಶ್ವರ ವೃತ್ತದಲ್ಲಿ ಟ್ರಾಫಿಕ್ ಜಾಮ್ ಆಗಲು ವೃತ್ತದಲ್ಲಿ ನಿಲ್ಲುವ ಕಾರ್ಮಿಕ ಜನರಿಂದ. ಇದಕ್ಕಾಗಿ ನಾವು ಸಾಕಷ್ಟು ಬಾರಿ ಹೇಳಿದರೂ ಕೇಳುತ್ತಿಲ್ಲ. ಅಲ್ಲದೇ ಬಜಾರ್ ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲ್ಲುಸುತ್ತಿದ್ದು ಇದರ ಬಗ್ಗೆ ಈಗಾಗಲೇ ನಮ್ಮ ಇಲಾಖೆಯಲ್ಲಿ ವ್ಹೀಲ್ಲಾಕರ್ ಬಂದಿದ್ದು ಅದರಿಂದ ಅಂತಹ ವಾಹನಕಾರರಿಗೆ ದಂಡ ವಿಧಿಸುವ ಕಾರ್ಯ ಪ್ರಾರಂಭಿಸಲಾಗುತ್ತದೆ. ವೃತ್ತದಲ್ಲಿ ಕೆಲ ಕಾರಣಾಂತರದಿಂದ ಪ್ರತಿ ದಿನ ನಮ್ಮ ಸಿಬ್ಬಂದಿಯನ್ನು ಬಿಡಲು ಆಗುತ್ತಿಲ್ಲ. ಶೀಘ್ರದಲ್ಲಿಯೇ ಇದರ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ.
•ರವಿಕುಮಾರ ಕಪತ್ತನವರ ಸಿಪಿಐ,
ಮುದ್ದೇಬಿಹಾಳ
ಬಸವೇಶ್ವರ ವೃತ್ತದಲ್ಲಿರುವ ಫುಟ್ಪಾತ್‌ನಲ್ಲಿ ಆಗಿರುವ ಅತಿಕ್ರಮಣ ತೆಗೆಸಲು ಎಲ್ಲ ಸಿದ್ಧತೆ ಮಾಡಲಾಗಿದೆ. ಚುನಾವಣೆ ನೀತಿ ಸಂಹಿತೆ ಮುಗಿದ ತಕ್ಷಣ ಅತಿಕ್ರಮಣ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು.
•ಎಸ್.ಎಫ್. ಈಳಗೇರ,
ಮುಖ್ಯಾಧಿಕಾರಿ, ಮುದ್ದೇಬಿಹಾಳ ಪುರಸಭೆ
ಶಿವಕುಮಾರ ಶಾರದಳ್ಳಿ