Advertisement

ತಾಪಂ ಸಾಮಾನ್ಯ ಸಭೆಯಲ್ಲಿ ಗದ್ದಲ

04:10 PM Oct 12, 2019 | |

ಮುದ್ದೇಬಿಹಾಳ: ಉಪಾಧ್ಯಕ್ಷರೇ ಇಲ್ಲಿ ಗುಂಡಾಗಿರಿ ಮಾಡಲು ಬಂದೀರೇನು? ತಾಪಂ ಯಾರಪ್ಪನ ಆಸ್ತಿ ಅಲ್ಲ. ಇದು ಸರ್ಕಾರದ ಆಸ್ತಿ. ಇಲ್ಲಿ ಎಲ್ಲಾರಿಗೂ ಸಮಾನ ಅವಕಾಶ ಇದೆ. ಹಿಂದಿನ ಅವಧಿಯಲ್ಲಿ ಬಂದಿರುವ ಅನುದಾನವನ್ನೆಲ್ಲ ಆಡಳಿತ ಪಕ್ಷದವರಾದ ನೀವೇ ಎತ್ತಿ ಹಾಕೀರಿ. ಈ ವರ್ಷ ಎರಡು ಕೋಟಿ ಬಂದಿದೆ. ಅದನ್ನೂ ಎತ್ತಿ ಹಾಕಲು ಕಾನೂನು ಬಾಹಿರವಾಗಿ ಸಾಮಾನ್ಯ ಸಭೆ ನಡೆಸುವ ಸಂಚು ನಡೆಸಿದ್ದೀರೇನು? ವಿರೋಧ ಪಕ್ಷದವರಾದ ನಾವು ಇದಕ್ಕೆಲ್ಲ ಅವಕಾಶ ಕೊಡುವುದಿಲ್ಲ. ಅಧಿಕಾರಿಗಳೇ ನೀವೆಲ್ಲ ಮರ್ಯಾದೆಯಿಂದ ಸಭೆಯಿಂದ ಹೊರಗೆ ಹೋಗಿ. ಸಭೆ ನಡೆಸಿದ್ದೇ ಆದಲ್ಲಿ ನಾವು ಸತ್ಯಾಗ್ರಹ ನಡೆಸ್ತೇವೆ, ಕೋರ್ಟ್‌ಗೆ ಹೋಗ್ತೀವೆ. ಇಒ ವಿರುದ್ಧ ಜಿಪಂ ಸಿಇಒಗೆ ದೂರು ಸಲ್ಲಿಸ್ತೇವೆ.

Advertisement

ಇವೆಲ್ಲ ಮಾತುಗಳು ಕೇಳಿ ಬಂದಿದ್ದು ಶುಕ್ರವಾರ ಇಲ್ಲಿನ ತಾಪಂ ಸಭಾ ಭವನದಲ್ಲಿ ನಡೆದ 14ನೇ ಸಾಮಾನ್ಯ ಸಭೆ ಅಧಿಕೃತ ಪ್ರಾರಂಭಕ್ಕೂ ಮೊದಲು. ಮಾತಿನ ಬಾಣ ಬಿಟ್ಟವರು ವಿರೋಧ ಪಕ್ಷ ಕಾಂಗ್ರೆಸ್‌ನ ನಾಯಕ ಪ್ರೇಮಸಿಂಗ್‌ ಚವ್ಹಾಣ ಹಾಗೂ ಮಾತಿನ
ಬಾಣಕ್ಕೆ ಸಿಕ್ಕು ಪರದಾಡಿದವರು ಆಡಳಿತ ಪಕ್ಷದ ಅಧ್ಯಕ್ಷೆ ಚನ್ನಮ್ಮ ತಂಗಡಗಿ, ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ ಹಾಗೂ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಶಶಿಕಾಂತ ಶಿವಪುರೆ.

ಸಭೆ ಪ್ರಾರಂಭದಲ್ಲೇ ಅಧ್ಯಕ್ಷೆ, ಉಪಾಧ್ಯಕ್ಷ ಮತ್ತು ವಿಪಕ್ಷ ನಾಯಕರ ನಡುವೆ ಕಾವೇರಿದ ಚರ್ಚೆಗೆ, ಆರೋಪ ಪ್ರತ್ಯಾರೋಪಕ್ಕೆ, ಏಕ ವಚನ ಬಳಕೆಗೆ ದಾರಿ ಮಾಡಿಕೊಟ್ಟು ಕೊನೆಗೂ ವಿಪಕ್ಷ ಸದಸ್ಯರ ಒತ್ತಡದಿಂದ ಅ. 23ಕ್ಕೆ ಸಭೆ ಮುಂದೂಡಲ್ಪಟ್ಟಿತು.

ಬೆಳಗ್ಗೆ 10:30ಕ್ಕೆ ನಿಗದಿಯಾಗಿದ್ದ ಸಭೆ ಪ್ರಾರಂಭಗೊಂಡಿದ್ದು ಮಧ್ಯಾಹ್ನ 12ಕ್ಕೆ. ಸಭೆ ಪ್ರಾರಂಭಕ್ಕೂ ಮೊದಲೇ ವಿಪಕ್ಷ ಕಾಂಗ್ರೆಸ್‌ನ ನಾಯಕ ಪ್ರೇಮಸಿಂಗ್‌ ಚವ್ಹಾಣ, ಸದಸ್ಯ ಎಸ್‌.ಎಂ. ಮರೋಳ ಅವರು ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಸ್ಥಾಯಿ ಸಮಿತಿ ಸಭೆ ನಡೆದಿಲ್ಲ. ಖರ್ಚು ವೆಚ್ಚದ ಲೆಕ್ಕಪತ್ರದ ಒಪ್ಪಿಗೆ ಪಡೆದುಕೊಂಡಿಲ್ಲ. ಎರಡು ಬಾರಿ ಸಭೆ ಕರೆದಿದ್ದರೂ ಸದಸ್ಯರು ಗೈರಾಗಿದ್ದಾರೆ. ಹೀಗಾಗಿ ತಾಪಂನ ಸ್ಥಾಯಿ ಸಮಿತಿ ಸಭೆ ನಡೆಸದೆ ಸಾಮಾನ್ಯ ಸಭೆ ನಡೆಸುವುದು ಸರಿ ಅಲ್ಲ. ಇಂದಿನ ಸಭೆ ಮುಂದೂಡಿ ಇನ್ನೊಮ್ಮೆ ಸ್ಥಾಯಿ ಸಮಿತಿ ಸಭೆ ಕರೆದು ಹಣಕಾಸಿನ ಲೆಕ್ಕಪತ್ರದ ಕುರಿತು ಚರ್ಚಿಸಿದ ನಂತರವೇ ಸಾಮಾನ್ಯ ಸಭೆ ಕರೆಯಬೇಕು. ಈಗಿನ ಸಭೆಯನ್ನು ಅಲ್ಲಿವರೆಗೂ ಮುಂದೂಡಬೇಕು ಎಂದು ಪಟ್ಟು ಹಿಡಿದರು.

ಆದರೆ ಇದನ್ನು ಒಪ್ಪದ ಅಧ್ಯಕ್ಷೆ ಚನ್ನಮ್ಮ ತಂಗಡಗಿ, ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ ಅವರು ಕೋರಂ ಇರುವುದರಿಂದ ಸಾಮಾನ್ಯ ಸಭೆ ನಡೆಸೋಣ, ಸ್ಥಾಯಿ ಸಮಿತಿ ಸಭೆಗಳನ್ನು ನಂತರ ನಡೆಸಿದರಾಯಿತು.

Advertisement

ಅಧಿಕಾರಿಗಳು ಸಭೆಗೆ ಬಂದಿದ್ದಾರೆ. ಉತ್ತಮ ಮಳೆ ಆಗತೊಡಗಿದ್ದು ಕೃಷಿ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಬೇಕಿದೆ ಎಂದು ಎಲ್ಲರ ಮನವೊಲಿಸುವ ಪ್ರಯತ್ನಕ್ಕೆ ಮುಂದಾದರು. ಆದರೆ ಪಟ್ಟು ಬಿಡದ ಪ್ರೇಮಸಿಂಗ್‌ ಅವರು ಸ್ಥಾಯಿ ಸಮಿತಿ ಸಭೆ ನಡೆಸದೆ ಸಾಮಾನ್ಯ ಸಭೆ ನಡೆಸಬಾರದು ಎನ್ನುವ ನಿಯಮ ಇದೆ. ಇದನ್ನು ಉಲ್ಲಂಘಿಸುವುದಾದರೆ ಕಾರ್ಯ ನಿರ್ವಾಹಕ ಅಧಿಕಾರಿ ಲಿಖೀತವಾಗಿ ಬರೆದು ಕೊಡಬೇಕು. ಇಲ್ಲದಿದ್ದರೆ ಸಭೆ ನಡೆಸಲು ಬಿಡುವುದಿಲ್ಲ. ಬಲವಂತವಾಗಿ ಸಭೆ ನಡೆಸಲು ಮುಂದಾದರೆ ಸತ್ಯಾಗ್ರಹ ನಡೆಸುತ್ತೇವೆ. ನಿಯಮ ಉಲ್ಲಂಘಿಸಿ ಸಭೆ ನಡೆಸಿದ್ದೇ ಆದಲ್ಲಿ ಜಿಪಂ ಸಿಇಒ ಮತ್ತು ಸರ್ಕಾರದ ಗಮನಕ್ಕೆ ತರುವುದರ ಜೊತೆಗೆ ಕೋರ್ಟ್‌ ಮೊರೆ ಹೋಗಬೇಕಾಗುತ್ತದೆ ಎಂದು ಕಿಡಿ ಕಾರಿದರು.

ಈ ವೇಳೆ ಮಂಜುನಾಥಗೌಡ ಮತ್ತು ಪ್ರೇಮಸಿಂಗ್‌ ನಡುವೆ ಮಾತಿನ ಚಕಮಕಿ, ಏಕ ವಚನ ಶಬ್ದಗಳ ಬಳಕೆ ಯಥೇತ್ಛವಾಗಿ ನಡೆದವು. ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಅಧ್ಯಕ್ಷೆ ಚನ್ನಮ್ಮ ನಿಮಗೆ ಇಷ್ಟ ಇರದಿದ್ದರೆ ಸಭೆಯಿಂದ ಹೊರಗೆ ಹೋಗಿ, ಉಳಿದವರೊಂದಿಗೆ ಸಭೆ ನಡೆಸುತ್ತೇವೆ ಎಂದು ವಿರೋಧ ಪಕ್ಷದವರಿಗೆ ಹೇಳಿ ಮಾತಿನ ಬಿರುಸು ಹೆಚ್ಚಾಗುವಂತೆ ಮಾಡಿದರು.

ಈ ಹಂತದಲ್ಲಿ ತಾಪಂ ಇಒ ಶಶಿಕಾಂತ ಶಿವಪುರೆ ಅವರು ಮಧ್ಯೆಪ್ರವೇಶಿಸಿ ಸ್ಥಾಯಿ ಸಮಿತಿ ಸಭೆ ನಡೆಸಿದ ನಂತರವೇ ಸಾಮಾನ್ಯ ಸಭೆ ನಡೆಸಬೇಕು. ಆದರೆ ಸ್ಥಾಯಿ ಸಮಿತಿ ಸಭೆ ನಡೆಯದಿದ್ದರೂ ಸರ್ವ ಸದಸ್ಯರ ಒಪ್ಪಿಗೆ ಪಡೆದು ಸಾಮಾನ್ಯ ಸಭೆ ನಡೆಸಿದರೆ ತಪ್ಪಿಲ್ಲ ಎನ್ನುವ ಬಗ್ಗೆ ಸಮಜಾಯಿಷಿ ನೀಡಲು ಮುಂದಾದಾಗ ಪ್ರೇಮಸಿಂಗ್‌ ಅವರು ಹರಿಹಾಯ್ದು ನೀವು ಅಧ್ಯಕ್ಷ,
ಉಪಾಧ್ಯಕ್ಷರ ಜೊತೆ ಶಾಮೀಲಾಗಿದ್ದೀರೇನು? ಅವರ ಪರ ಮಾತಾಡ್ತೀರಲ್ಲ. ಅಧಿಕಾರಿಯಾದ ನೀವು ಸರ್ಕಾರದ ನಿಯಮದಂತೆ ನಡೆದುಕೊಳ್ಳಬೇಕು. ಆದರೆ ನೀವೇನು ರಾಜಕೀಯ ಮಾಡ್ತಿದ್ದೀರಾ? ನಿಮ್ಮ ವಿರುದ್ಧವೇ ಸಿಇಒಗೆ ಏಕೆ ದೂರು ಸಲ್ಲಿಸಬಾರದು ಎಂದು ತರಾಟೆಗೆ ತೆಗೆದುಕೊಂಡರು.

ಚರ್ಚೆ ತೀವ್ರಗೊಂಡಾಗ ಪ್ರೇಮಸಿಂಗ್‌ರು ಉಪಾಧ್ಯಕ್ಷರನ್ನುದ್ದೇಶಿಸಿ ನೀವೇನು ಗುಂಡಾಗಿರಿ ಮಾಡ್ತೀದ್ದೀರೇನು. ಹಿಂದಿನ ಅವಧಿಯಲ್ಲಿ ಬಂದ ಅನುದಾನವನ್ನೆಲ್ಲ ಆಡಳಿತ ಪಕ್ಷದವರೇ ತಿಂದು ಹಾಕಿದ್ರಿ. ಅದರ ಬಗ್ಗೆ ಲೆಕ್ಕ ಕೊಟ್ಟಿಲ್ಲ. ಈಗ ಮತ್ತೇ 2 ಕೋಟಿ ಬಂದಿದೆ. ಅದನ್ನೂ ತಿಂದು ಹಾಕಲು ತರಾತುರಿಯಲ್ಲಿ, ಕಾನೂನು ಬಾಹಿರವಾಗಿ ಸಭೆ ನಡೆಸಲು ಮುಂದಾಗಿದ್ದೀರಿ. ಇದಕ್ಕೆ ಅವಕಾಶ ಕೊಡುವುದಿಲ್ಲ. ಅಧಿಕಾರಿಗಳೆ ಸಭೆಯಿಂದ ಹೊರಗೆ ಹೋಗಿ ಎಂದು ಅಬ್ಬರಿಸಿದರು.

ಬಹಳ ಹೊತ್ತಿನವರೆಗೆ ಇದೇ ವಿಷಯಕ್ಕೆ ಕಾವೇರಿದ ಚರ್ಚೆ ನಡೆದು ಕೊನೆಗೆ ಈಗಿನ ಸಾಮಾನ್ಯ ಸಭೆ ಮುಂದೂಡಲು, ಅ. 22ರಂದು ಬೆಳಗ್ಗೆ 11ರಿಂದ ಸಂಜೆ 5ರವರೆಗೆ 3 ಸ್ಥಾಯಿ ಸಮಿತಿಗಳ ಸಭೆ ನಡೆಸಬೇಕು. ಅಂದಿನದ್ದು 3ನೇ ಸಭೆಯಾಗಿದ್ದು ಸಭೆಗೆ ಗೈರು ಉಳಿಯುವ ಸದಸ್ಯರ ವಿರುದ್ಧ ಸಿಇಒಗೆ ಪತ್ರ ಬರೆಯಬೇಕು ಮತ್ತು ಅ. 23ರಂದು ಬೆಳಗ್ಗೆ 10:30ಕ್ಕೆ ಮುಂದುವರಿದ ಸಾಮಾನ್ಯ ಸಭೆ ನಡೆಸಬೇಕು ಎಂದು ನಿರ್ಣಯಿಸಿದ್ದಾಗಿ ಇಒ ಘೋಷಿಸಿ ಸಭೆಯನ್ನು
ಮುಂದೂಡಿರುವುದಾಗಿ ಘೋಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next