ಮುದ್ದೇಬಿಹಾಳ : ಬೈಕಿಗೆ ಹಿಂಬದಿಯಿಂದ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ರಸ್ತೆ ವಿಭಾಜಕಕ್ಕೆ ಅಪ್ಪಳಿಸಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಭಾನುವಾರ ಸಂಜೆ ಪಟ್ಟಣದ ಹೆಸ್ಕಾಂ ಕಚೇರಿ ಎದುರಿಗೆ ನಡೆದಿದೆ.
ತಾಲೂಕಿನ ಮುದ್ನಾಳ ತಾಂಡಾದ ಸಚಿನ್ ಬಸವರಾಜ ಲಮಾಣಿ(22)ಮೃತಪಟ್ಟಿರುವ ಯುವಕ ಎಂದು ಗುರುತಿಸಲಾಗಿದೆ.
ಸಚಿನ್ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಏಕಾಏಕಿ ಅಪರಿಚಿತ ಕಾರೊಂದು ಹಿಂಬದಿಯಿಂದ ಢಿಕ್ಕಿ ಹೊಡೆದಿದೆ ಎನ್ನಲಾಗಿದ್ದು ಅದರ ರಭಸಕ್ಕೆ ಮುಂದೆ ಕಬ್ಬಿಣದ ಗ್ರಿಲ್ ಅಳವಡಿಸಿದ್ದ ಡಿವೈಡರ್‌ಗೆ ಬೈಕ್ ಸಮೇತ ಸವಾರ ಢಿಕ್ಕಿ ಹೊಡೆದಿದ್ದಾನೆ. ಈ ಸಮಯದಲ್ಲಿ ತಲೆಗೆ ಗಂಭೀರ ಪೆಟ್ಟಾಗಿದ್ದರಿಂದ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಬೈಕ್‌ಗೆ ಢಿಕ್ಕಿ ಹೊಡೆದ ಕಾರು ಯಾವುದೆಂದು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಸಿಟಿವಿ ಬಂದ್ : ಪಟ್ಟಣದ ಪಿಲೇಕೆಮ್ಮ ದೇವಸ್ಥಾನದ ಬಳಿ ಪೊಲೀಸ್ ಇಲಾಖೆಯು ಸಾರ್ವಜನಿಕರ ಸಹಭಾಗಿತ್ವದಲ್ಲಿ ಸಿಸಿಟಿವಿ ಅಳವಡಿಸಿದೆ.ಆದರೆ ಅವುಗಳು ಬಂದ್ ಆಗಿದ್ದರಿಂದ ಅಪಘಾತದ ದೃಶ್ಯ ಸಿಗದಂತಾಗಿದೆ.ಸಾರ್ವಜನಿಕರಿAದ ಲಕ್ಷಾಂತರ ರೂ.ದೇಣಿಗೆ ಸಂಗ್ರಹಿಸಿದ್ದರೂ ಸಿಸಿ ಕ್ಯಾಮೆರಾ ಚಾಲನೆಯಲ್ಲಿ ಇರದೇ ಇರುವುದು ಇಂತಹ ಅಪಘಾತಗಳಲ್ಲಿ ಅಪರಾಧಿಗಳನ್ನು ಪತ್ತೆ ಹಚ್ಚಲು ಕಷ್ಟಕರ ಎಂಬ ಮಾತಗಳು ಕೇಳಿ ಬಂದಿವೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಪಿಐ ಆನಂದ ವಾಘ್ಮೋಡೆ ಅವರು ಸಿಸಿ ಕ್ಯಾಮೆರಾ ದುರಸ್ತಿಯಲ್ಲಿದ್ದು ರಿಪೇರಿ ಮಾಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಭಟ್ಕಳ: ಕಾರು ಸೇತುವೆಗೆ ಢಿಕ್ಕಿ; ತಂದೆ ಸಾವು, ಮಗಳಿಗೆ ಗಾಯ