Advertisement

ಸಮಾಜ ಸೇವೆಯಲ್ಲಿ ತೊಡಗಿ

05:13 PM Jan 05, 2020 | Naveen |

ಮುದ್ದೇಬಿಹಾಳ: ಇಂದಿನ ಕಲುಷಿತ ಪರಿಸರದಲ್ಲಿ 75 ವರ್ಷ ಬದುಕುವುದು ಪುಣ್ಯದ ಫಲ. ನೌಕರಿ ಮಾಡುವವರಿಗೆ ಸೇವಾ ನಿವೃತ್ತಿ ಎನ್ನುವುದು ಕಡ್ಡಾಯವಾದರೂ ನಿವೃತ್ತಿ ನಂತರವೂ ನೆಮ್ಮದಿ ಬದುಕು ನಡೆಸುವುದು ಸವಾಲೇ ಸರಿ. ಇಂಥ ಸವಾಲು ಎದುರಿಸಿ 75 ವರ್ಷ ಪೂರೈಸಿದವರು ಸಮಾಜಕ್ಕೆ ಮಾದರಿ ಆಗುತ್ತಾರೆ ಎಂದು ಹಿರಿಯ ಸಾಹಿತಿ ಪ್ರೊ| ಬಿ.ಎಂ. ಹಿರೇಮಠ ಹೇಳಿದ್ದಾರೆ.

Advertisement

ಇಲ್ಲಿನ ಕೆಬಿಎಂಪಿ ಶಾಲೆಯ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಮುದ್ದೇಬಿಹಾಳ ತಾಲೂಕು ಘಟಕ ವತಿಯಿಂದ ಶನಿವಾರ ಏರ್ಪಡಿಸಿದ್ದ 75 ವಸಂತ ಕಂಡ ನಿವೃತ್ತ ನೌಕರರ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ನಿವೃತ್ತರ ಜೀವನ ಮುದುಡುತ್ತದೆ. ವೇದನೆ ಹೇಳಿಕೊಳ್ಳಲಾಗೊಲ್ಲ. ಹೆಣ್ಣಿಂದ ಬಂದದ್ದು ಒಂದು ವೈರಿ ಆದರೆ ಮಕ್ಕಳಿಂದ ಬಂದದ್ದು ಇನ್ನೊಂದು ವೈರಿ ಎನ್ನುವಂತೆ ಅವರ ಬದುಕು ಇರುತ್ತದೆ. ಉರಿ ಬಿಸಿಲಲ್ಲಿ ತಲೆ ಮೇಲೆ ಕೆಂಡ ಹಾಕೋ ಮಕ್ಕಳು ಇರುವ ಈ ದಿನಗಳಲ್ಲಿ ವಯೋವೃದ್ಧರು ಅನೇಕರಿಗೆ ಬೇಡದವರಾಗಿದ್ದಾರೆ. ಇಂಥವರ ಸ್ವಾವಲಂಬಿ ಬದುಕಿಗೆಂದೇ ಸರ್ಕಾರ ನಿವೃತ್ತಿ ನಂತರ ಪೆನ್ಶನ್‌ ಕೊಟ್ಟು ಉತ್ತಮ ಕೆಲಸ ಮಾಡಿದೆ. ವಯೋವೃದ್ಧರು ಆರೋಗ್ಯ ರಕ್ಷಣೆಗೆ ಹೆಚ್ಚು ಮಹತ್ವ ಕೊಡಬೇಕು. ದುಷcಟಗಳಿಗೆ
ಬಲಿಯಾಗಬಾರದು. ಬಿಡುವಿನ ಸಮಯವನ್ನು ಸಮಾಜ ಸೇವೆಗೆ ಬಳಸಿಕೊಳ್ಳಬೇಕು. ಕಿರಿಯರಿಗೆ ಮಾರ್ಗದರ್ಶನ ನೀಡುತ್ತ ಕಾಲ ಕಳೆಯಬೇಕು ಎಂದು ಕಿವಿಮಾತು ಹೇಳಿದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ ಮಾತನಾಡಿ, ನಿವೃತ್ತಿ ಆದ ಮೇಲೆ ಜೀವನ ಮುಗಿತು ಎಂದು ಕೊರಗದೆ ನಿವೃತ್ತಿ ನಂತರದ ಜೀವನವನ್ನು ಸಾರ್ಥಕಗೊಳಿಸುವಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ನಿವೃತ್ತ ನೌಕರರು ಒಂದೆಡೆ ಸೇರಿ ಚಟುವಟಿಕೆ ನಡೆಸಲು ಅಗತ್ಯ ಇರುವ ಭವನವೊಂದನ್ನು ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಅವರ ಗಮನಕ್ಕೆ ತಂದು ಈಡೇರಿಸಲು ಪ್ರಯತ್ನಿಸುತ್ತೇನೆ ಎಂದರು.

ಕಾರ್ಯಕ್ರಮವನ್ನು ಬಿಜೆಪಿ ಧುರೀಣ ಸೋಮನಗೌಡ ಪಾಟೀಲ ನಡಹಳ್ಳಿ ಉದ್ಘಾಟಿಸಿದರು. ಅತಿಥಿಯಾಗಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಂ.ಬಿ. ನಾವದಗಿ, ಸಂಘದ ಜಿಲ್ಲಾ ಕಾರ್ಯದರ್ಶಿ ಪಿ.ಜಿ. ಬಿರಾದಾರ, ಪಿಎಚ್‌ಡಿ ಸಾಧನೆಗೆ ವಿಶೇಷವಾಗಿ ಸನ್ಮಾನಿತರಾದ ಇಳಕಲ್ಲ ಡೈಟ್‌ ಉಪನ್ಯಾಸಕ ಡಾ| ಎಂ.ಎಂ.ಬೆಳಗಲ್ಲ, ನಾಲತವಾಡ ಎಸ್‌ವಿವಿ ಕಾಲೇಜು ಉಪನ್ಯಾಸಕ ಡಾ| ಆರ್‌.ಸಿ. ಗೂಳಿ, 75 ವಸಂತ ಕಂಡ ಸನ್ಮಾನಿತರ ಪರವಾಗಿ ಸಾಬಣ್ಣ ಹೂಗಾರ, ಬಿ.ಎಸ್‌. ಕಣಕಾಲಮಠ, ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಎಸ್‌.ಪಿ. ಬಿರಾದಾರ ಕಡ್ಲೇವಾಡ ಮಾತನಾಡಿದರು. ಸಂಘದ ತಾಲೂಕು ಘಟಕದ ಅಧ್ಯಕ್ಷ ಎಸ್‌.ಆರ್‌. ಕುಂಬಾರ, ಸಂಘದ ಗೌರವಾಧ್ಯಕ್ಷ ಎಂ.ಜಿ.ಮೋಟಗಿ ಮತ್ತಿತರರು ವೇದಿಕೆಯಲ್ಲಿದ್ದರು.

Advertisement

ಡಿ.ಬಿ.ಬೇಲಾಳ ಪ್ರಾರ್ಥಿಸಿದರು. ಸಂಗಮೇಶ ಶಿವಣಗಿ ಸಂಗಡಿಗರು ನಾಡಗೀತೆ ಹಾಡಿ ಸಂಗೀತ ಸೇವೆ ನೀಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಎ.ಬಿ.ಮಳಗೌಡರ ಸ್ವಾಗತಿಸಿದರು. ವೈ.ವನಹಳ್ಳಿ ಅತಿಥಿ ಪರಿಚಯ ಮಾಡಿಕೊಟ್ಟರು. ಎಸ್‌.ಬಿ.ಬಂಗಾರಿ ಪ್ರಾಸ್ತಾವಿಕ ಮಾತನಾಡಿದರು. ಬಿ.ಎಂ.ಪಲ್ಲೇದ ವರದಿ ವಾಚಿಸಿದರು. ಬಿ.ಪಿ.ಪಾಟೀಲ ನಿರೂಪಿಸಿದರು. ಬಿ.ವೈ.ಲಿಂಗದಳ್ಳಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.