ಮುದ್ದೇಬಿಹಾಳ: ಬೇಜವಾಬ್ದಾರಿ ಅಧಿಕಾರಿಗಳು ಮತ್ತು ತಹಶೀಲ್ದಾರ್ ಕಚೇರಿ ಸಿಬ್ಬಂದಿಯನ್ನು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ತೀವ್ರ ತರಾಟೆಗೆ ತೆಗೆದುಕೊಂಡು ಬೆವರಿಳಿಸಿದ ಘಟನೆ ಗುರುವಾರ ನಡೆಯಿತು.
ಇಲ್ಲಿನ ತಾಪಂ ಸಭಾ ಭವನದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ನಾನು ಶಾಸಕನಾಗಿ ಒಂದೂವರೆ ವರ್ಷ ಆದರೂ ಅಧಿಕಾರಿಗಳಲ್ಲಿ ಚುರುಕುತನ ಕಂಡುಬರುತ್ತಿಲ್ಲ. ಹಳೇ ಚಾಳಿ ಮುಂದುವರಿದಿದೆ. ವಸೀಲಿ ಮತ್ತು ಬೇರೆ ಯಾರಧ್ದೋ ಪ್ರಭಾವಕ್ಕೆ ಒಳಗಾಗಿ ಕೆಲಸ ಮಾಡುತ್ತಿರುವುದು ಕಂಡು ಬರುತ್ತಿದೆ. ಇನ್ನು ಮೇಲೆ ಹಳೆ ಚಾಳಿ ಬಿಟ್ಟು ಬಿಡಿ. ಪ್ರಭಾವಕ್ಕೊಳಗಾಗದೇ ಕೆಲಸ ಮಾಡಿ. ಸರ್ಕಾರ ಕೊಟ್ಟಿರುವ ಸೌಲಭ್ಯಗಳನ್ನು ಸಾಮಾನ್ಯ ಜನರಿಗೆ ತಲುಪಿಸಿ. ಹೀಗೆ ಮಾಡುವುದರಿಂದ ಯಾರಪ್ಪನ ಗಂಟೂ ಹೋಗುವುದಿಲ್ಲ. ಒಟ್ಟಾರೆ ಬಡವರಿಗೆ ಸೌಲಭ್ಯ ಸಿಗಬೇಕು ಅಷ್ಟೆ ಎಂದು ಹೇಳಿದರು.
ಕಂದಾಯ, ಗ್ರಾಮೀಣಾಭಿವೃದ್ಧಿ, ಕೃಷಿ, ವಿದ್ಯುತ್ ಇಲಾಖೆಗಳು ಜನರ ನಿತ್ಯದ ಬದುಕಿಗೆ ಅಗತ್ಯ ಇರುವಂಥವುಗಳು. ಇಲ್ಲಿರುವ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಿ ಸಾಮಾನ್ಯ ಜನರಿಗೆ ಸರ್ಕಾರದ ಯೋಜನೆ ತಲುಪಿಸಿ ಅನುಕೂಲ ಮಾಡಿಕೊಡಬೇಕು. ನಮಗೆ ಪ್ರಗತಿಯ ಗ್ರೌಂಡ ರಿಯಾಲಿಟಿ ಬೇಕು. ಪೇಪರ್‌ನಲ್ಲಿ ಪ್ರಗತಿ ಬೇಡ ಎಂದು ಹೇಳಿದರು.
ಜನರಿಗೆ ಸೌಲಭ್ಯ ದೊರಕಿಸಲು ಕ್ರಮ ಕೆೃಕೊಳ್ಳುವಂತೆ ಎಲ್ಲ ಪಿಡಿಒಗಳಿಗೆ ಸೂಚಿಸಬೇಕು. ಗ್ರಾಮಸಭೆಯಿಂದ ಏನೂ ಪ್ರಯೋಜನ ಆಗುತ್ತಿಲ್ಲ. ಹೀಗಾಗಿ ವಾರದಲ್ಲಿ ಒಂದು ದಿನ ಒಂದು ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿ ಸೌಲಭ್ಯ ವಂಚಿತರ ಅಂಕಿ ಸಂಖ್ಯೆ ಸಂಗ್ರಹಿಸಲಾಗುತ್ತದೆ. ಈ ವೇಳೆ ಪಿಡಿಒ ಮತ್ತು ಸಂಬಂಧಿಸಿದ ಇಲಾಖೆಗಳ ಪ್ರತಿನಿಧಿ ಕಡ್ಡಾಯವಾಗಿ ಹಾಜರು ಇರುವಂತೆ ನೋಡಿಕೊಳ್ಳಬೇಕು. ಪ್ರತಿ ವಾರ ಒಂದು ಹಳ್ಳಿಗೆ ಭೇಟಿ ನೀಡಿ ಅಲ್ಲಿ ಸೌಲಭ್ಯವಂಚಿತರ ಅಂಕಿ ಸಂಖ್ಯೆ ಸಂಗ್ರಹಿಸುವ ಕಾರ್ಯವನ್ನು ನಾನು ನಡೆಸುತ್ತೇನೆ. ಸಂಬಂಧಿಸಿದ ಪಿಡಿಒ, ಕಚೇರಿ ಸಿಬ್ಬಂದಿಗಳು ನನ್ನ ಜೊತೆ ಇರಬೇಕು ಎಂದು ಶಾಸಕರು ಸೂಚಿಸಿದರು.
ಶಿಕ್ಷಣ ಇಲಾಖೆಯವರು ತಾಲೂಕಿನಲ್ಲಿ ಬರುವ ಒಟ್ಟು ಸರ್ಕಾರಿ ಶಾಲೆಗಳು, ಕೊಠಡಿಗಳು, ಅಲ್ಲಿ ಲಭ್ಯವಿರುವ ಸೌಲಭ್ಯ, ಶಿಕ್ಷಕರು ಮತ್ತು ಮಕ್ಕಳ ಸಂಖ್ಯೆ, ಕೊರತೆ ಇರುವ ಶಿಕ್ಷಕರ ಸಂಖ್ಯೆ, ಸೌಲಭ್ಯಗಳಿಲ್ಲದ, ದುರಸ್ತಿಗೆ ಬಂದಿರುವ ಶಾಲೆಗಳ ಸಂಖ್ಯೆ, ಸರ್ಕಾರ ಮತ್ತು ದಾನರೂಪದಲ್ಲಿ ಬಂದ ಜಾಗೆ ಮಾಹಿತಿ ಪ್ರತ್ಯೇಕವಾಗಿ ಬರೆದು ಕೊಡಬೇಕು. ಇದರಿಂದ ಹೇಗೆ ಅಭಿವೃದ್ಧಿ ಮಾಡಬೇಕು ಎನ್ನುವ ಸ್ಪಷ್ಟತೆ ಮೂಡುತ್ತದೆ. ಜನರಿಗೆ ಆರೋಗ್ಯ ಭಾಗ್ಯ ಒದಗಿಸುವ ಆರೋಗ್ಯ ಇಲಾಖೆಯೇ ಅನಾರೋಗ್ಯಕ್ಕೀಡಾಗಿದೆ. ಸರ್ಕಾರಿ ಆಸ್ಪತ್ರೆ, ಸಮುದಾಯ ಕೇಂದ್ರಗಳಲ್ಲಿ ಸ್ವಚ್ಛತೆ ಕಂಡುಬರುತ್ತಿಲ್ಲ. ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಶ್ರಮದಾನ ಮಾಡಿಯಾದರೂ ಸರಿ ಸ್ವಚ್ಛತೆ ಕಾಪಾಡಲು ಮುಂದಾಗಬೇಕು. ಕೃಷಿ ಇಲಾಖೆ ಸೌಲಭ್ಯಗಳು ಅನರ್ಹರ ಪಾಲಾಗುತ್ತಿವೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಇದನ್ನು ಸರಿಪಡಿಸಿಕೊಳ್ಳಬೇಕು. ಸಮಾಜ ಕಲ್ಯಾಣ ಮತ್ತು ಹಿಂದುಳಿದ ಇಲಾಖೆಯಡಿ ನಡೆಯುವ ಹಾಸ್ಟೆಲ್ಗಳಲ್ಲಿ ಸ್ವಚ್ಛತೆ ಇಲ್ಲವಾಗಿದೆ. ನಾಲತವಾಡದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಾಕಷ್ಟು ಅವ್ಯವಸ್ಥೆ ಇದೆ. ಕೆಲವು ವಾರ್ಡ್‌ನ್‌ಗಳು ಮದ್ಯ ಸೇವಿಸಿ ಬರುವ ಮಾತು ಕೇಳಿ ಬರುತ್ತಿದೆ. ಇವೆಲ್ಲ ಸುಧಾರಿಸಬೇಕು ಎಂದು ಶಾಸಕರು ಸಲಹೆ ನೀಡಿದರು.
ಕಂದಾಯ ಇಲಾಖೆಯಿಂದ ಬಡವರಿಗೆ ರೇಷನ್ ಕಾರ್ಡ್ ದೊರಕುತ್ತಿಲ್ಲ. ಜನರು ನನ್ನ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ನೀವು ಮಾಡುವ ತಪ್ಪುಗಳಿಗೆ ನಾನು ಜನರಿಂದ ಅನ್ನಿಸಿಕೊಳ್ಳಬೇಕಿದೆ. ಇಂಥ ಪರಿಸ್ಥಿತಿ ಮುಂದುವರಿದರೆ ಇನ್ನು ಮುಂದೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ತಾಪಂ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ದೇಸಾಯಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ರೈತರು ಸರ್ಕಾರದ ಸೌಲಭ್ಯ ಪಡೆಯಲು ತಮ್ಮ ಹೆಸರುಗಳನ್ನು ಉತಾರೆ, ಆಧಾರ ಕಾರ್ಡ್, ಬ್ಯಾಂಕ್ ಖಾತೆಗಳಲ್ಲಿ ಒಂದೇ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಈ ಮೂರರಲ್ಲಿ ಒಂದೇ ಒಂದು ದಾಖಲೆಯಲ್ಲಿ ಹೆಸರಿನ ಸ್ಪೆಲ್ಲಿಂಗ್ ವ್ಯತ್ಯಾಸ ಆದರೂ ಸೌಲಭ್ಯ ದೊರಕುವುದಿಲ್ಲ ಎನ್ನುವುದನ್ನು ಗಮನಿಸಬೇಕು. ಈಗಾಗಲೇ ಹಲವರು ಸೌಲಭ್ಯ ವಂಚಿತರಾಗಲು ದಾಖಲೆಗಳಲ್ಲಿ ಈ ಸಮಸ್ಯೆ ಕಾರಣವಾಗಿದೆ. ತಕ್ಷಣವೇ ಈ ಮೂರೂ ದಾಖಲೆಗಳನ್ನು ರೈತರು ಗಂಭೀರವಾಗಿ ಪರಿಗಣಿಸಿ ವ್ಯತ್ಯಾಸ ಇದ್ದಲ್ಲಿ ತಿದ್ದುಪಡಿ ಮಾಡಿಸಬೇಕು ಎಂದು ಶಾಸಕ ನಡಹಳ್ಳಿ, ಕೃಷಿ ಸಹಾಯಕ ನಿರ್ದೇಶಕ ಯರಝರಿ ಮನವಿ ಮಾಡಿದ್ದಾರೆ.