Advertisement
ನಾಗಬೇನಾಳ ತಾಂಡಾದ ಸರ್ವೇ ನಂ. 84ರಲ್ಲಿರುವ ಜಮೀನಿನಲ್ಲಿ ಕಾಮಗಾರಿಗಾಗಿ ಭೂಮಿ ಸಮತಟ್ಟು ಮಾಡುವ ಕೆಲಸಕ್ಕೆ ಯುಕೆಪಿಯವರು ಚಾಲನೆ ನೀಡಿದ್ದರು. ಈ ಜಮೀನು ಯಮನಪ್ಪ ಲಮಾಣಿ, ಸೋಮಪ್ಪ ಲಮಾಣಿ, ನಾಗಪ್ಪ ಲಮಾಣಿ, ಮಲ್ಲಿಕಾರ್ಜುನ ಲಮಾಣಿ ಎನ್ನುವವರಿಗೆ ಸೇರಿದ್ದು ಯುಕೆಪಿಯವರು ಖೊಟ್ಟಿ ದಾಖಲೆ ಸೃಷ್ಟಿಸಿ ಯೋಜನೆಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ನೊಂದ ರೈತರಿಗೆ ನ್ಯಾಯ ಒದಗಿಸಲು ಆ ರೈತ ಕುಟುಂಬಗಳೊಂದಿಗೆ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನೂರಾರು ರೈತರು ಚಕ್‌ಪೋಸ್ಟ್ ಬಳಿ ಇರುವ ನಾರಾಯಣಪುರ ಎಡದಂಡೆ ಕಾಲುವೆ ಪಕ್ಕದ ರಸ್ತೆಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಫಾರ್ಮ್ 10 ಸೃಜಿಸಿ, 2024 ರೂ. ಪಟ್ಟಿನ ಹಣವನ್ನು ತುಂಬಿಸಿಕೊಳ್ಳಲಾಗಿತ್ತು. ಆದರೆ 1997ರ ನಂತರ ಆ ಜಮೀನಿಗೆ ಸಂಬಂಧಿಸಿದ ಸರ್ಕಾರಿ ದಾಖಲೆಗಳಲ್ಲಿ ಯುಕೆಪಿ ಹೆಸರು ಸೇರ್ಪಡೆ ಮಾಡಲಾಯಿತು. ಇದು ಅನ್ಯಾಯಕ್ಕೆ ಹಿಡಿದ ಕನ್ನಡಿ. ಯುಕೆಪಿಯವರು ರೈತನ ಜಮೀನನ್ನು ಲಪಟಾಯಿಸುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು. ಜೆಡಿಎಸ್ ಧುರೀಣ ಪಾವಡೆಪ್ಪಗೌಡ ಹವಾಲ್ದಾರ್ ಮಾತನಾಡಿ, 1972ರಲ್ಲಿ ಭೂಸ್ವಾಧೀನಕ್ಕೊಳಗಾದ ಜಮೀನನ್ನು 1997ರಲ್ಲಿ ಯುಕೆಪಿಯವರು ತಮ್ಮ
ಹೆಸರಿಗೆ ಮಾಡಿಕೊಂಡಿದ್ದಾಗಿ ಹೇಳುತ್ತಾರೆ. 27 ವರ್ಷ ಏಕೆ ಸುಮ್ಮನಿದ್ದರು? ಕಾಲುವೆಗೆ ಬಳಸಲು ಮಣ್ಣು ಬೇಕು ಎಂದು ಜಮೀನನ್ನು ಪಡೆದು ಈಗ ಅದನ್ನು ವಿದ್ಯುತ್ ಸ್ಥಾವರಕ್ಕೆ ಬಳಕೆ ಮಾಡುವ ಹುನ್ನಾರ ಸರಿಯೇ? ರೈತರು ಸರ್ಕಾರಿ ಗೋಮಾಳ ಜಾಗ ನುಂಗಿಲ್ಲ. ಇವರ ಜಮೀನನ್ನು ಕಾನೂನು ಬಾಹಿರವಾಗಿ ವಶಪಡಿಸಿಕೊಳ್ಳಲು ಮುಂದಾಗಿರುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಈ ವೇಳೆ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಜಿ.ಎಸ್. ಮಳಗಿ ಅವರು ರೈತರು ಮತ್ತು ಯುಕೆಪಿ ಅಧಿಕಾರಿಗಳ ವಾದ ಆಲಿಸಿ, ದಾಖಲೆ ಪರಿಶೀಲಿಸಿದರು. ಆದರೆ ಯಾವುದೇ ಅಂತಿಮ ತೀರ್ಮಾನ ಕೈಗೊಳ್ಳುವುದು ಸಾಧ್ಯವಾಗಲಿಲ್ಲ. ದಾಖಲೆ ಇದ್ದರೆ ಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತಂದು ಕೆಲಸ ಸ್ಥಗಿತಗೊಳಿಸಬಹುದು. ಆದರೆ ಸರ್ಕಾರಿ ಕಾಮಗಾರಿಗೆ ತಡೆ ಒಡ್ಡುವುದು ತಮ್ಮ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಅಸಹಾಯಕತೆ ತೋಡಿಕೊಂಡರು.ಈ ಹಂತದಲ್ಲಿ ರೈತರು ಪ್ರತಿಭಟನೆಯನ್ನು ಉಗ್ರಗೊಳಿಸಲು ಮುಂದಾದರು. ಕೆಪಿಯವರು ಕೆಲಸ ಮಾಡುತ್ತಿರುವ ಜಮೀನಿಗೆ ನುಗ್ಗಿ ಕಾಮಗಾರಿ ತಡೆಯುವ ಮಾತುಗಳನ್ನಾಡತೊಡಗಿದರು. ಕೆಲವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡತೊಡಗಿದರು. ಅಷ್ಟರಲ್ಲಾಗಲೇ ಸ್ಥಳಕ್ಕೆ ಆಗಮಿಸಿದ್ದ ಬಸವನಬಾಗೇವಾಡಿ ಡಿವೈಎಸ್ಪಿ ಈ.ಶಾಂತವೀರ ಅವರು ಎಲ್ಲವನ್ನೂ ವಿಚಾರಿಸಿ ರೈತರ ಬಳಿ ಬಂದು ಪ್ರತಿಭಟನೆ ತಾತ್ಕಾಲಿಕವಾಗಿ ನಿಲ್ಲಿಸಿ ಸಹಕರಿಸುವಂತೆ, ಸೋಮವಾರ ಇಲ್ಲವೇ ಮಂಗಳವಾರ ಕೆಬಿಜೆಎನ್ನೆಲ್ ಅಧಿಕಾರಿ, ತಹಶೀಲ್ದಾರ್ ಮತ್ತು ರೈತರ ಮಧ್ಯೆ ಸಭೆ ನಡೆಸಿ ಎರಡೂ ಕಡೆಯವರ ದಾಖಲಾತಿ ಪರಿಶೀಲಿಸಿ ಅಂತಿಮ ತೀರ್ಮಾನ ಕೈಗೊಳ್ಳುವವರೆಗೂ ಸಮಾಧಾನದಿಂದ ಇರುವಂತೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ರೈತರು ಸದ್ಯ ಯುಕೆಪಿಯವರು ತಮ್ಮದೆಂದು ವಾದಿಸುತ್ತಿರುವ ರೈತನ ಜಮೀನಿನಲ್ಲಿ ನಡೆಸುತ್ತಿರುವ ಭೂಮಿ ಸಮತಟ್ಟುಗೊಳಿಸುವ ಕಾಮಗಾರಿ ನಿಲ್ಲಿಸಿ ಯಂತ್ರಗಳನ್ನು ಮರಳಿ ಕಳಿಸುವಂತೆ ಪಟ್ಟುಹಿಡಿದರು. ಇದಕ್ಕೊಪ್ಪಿದ ಪೊಲೀಸರು ಗುತ್ತಿಗೆದಾರರು, ಕೆಬಿಜೆಎನ್ನೆಲ್ ಅಧಿ ಕಾರಿಗಳ ಮನವೊಲಿಸಿ ವಿವಾದಿತ ಜಮೀನಿನಿಂದ ಯಂತ್ರಗಳನ್ನು ಮರಳಿ ಕಳಿಸಿ ಕೆಲಸ ಸ್ಥಗಿತಗೊಳಿಸುವಂತೆ ನೋಡಿಕೊಂಡರು. ಪ್ರತಿಭಟನೆಗೂ ಮುನ್ನ ಟ್ರಾಫಿಕ್ಸ್ ವಾಹನಗಳಲ್ಲಿ ಆಗಮಿಸಿದ ನೂರಾರು ರೈತರು ಸ್ಥಳೀಯ ರೈತರ ಜೊತೆ ಸೇರಿ ಪ್ರತಿಭಟನಾ ಸ್ಥಳದಲ್ಲೇ ಸಂತ ಸೇವಾಲಾಲ್ ಮತ್ತು ಡಾ| ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸೇವಾಲಾಲ್ ಜಯಂತಿ ಆಚರಿಸಿ ಗಮನ ಸೆಳೆದರು.
ಸಂಘದ ಪ್ರಧಾನ ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ, ತಾಲೂಕಾಧ್ಯಕ್ಷ ಅಯ್ಯಪ್ಪ ಬಿದರಕುಂದಿ, ತಾಲೂಕು ಪ್ರಧಾನ ಕಾರ್ಯದರ್ಶಿ ವೈ.ಎಲ್. ಬಿರಾದಾರ ಸೇರಿದಂತೆ ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ಮತ್ತು ಸ್ಥಳೀಯ ರೈತರು ಹಾಗೂ ವಿವಾದಕ್ಕೀಡಾದ ಜಮೀನಿನ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು. ಸಿಪಿಐ ಆನಂದ ವಾಗಮೋಡೆ, ಪಿಎಸೈಗಳಾದ ಮಲ್ಲಪ್ಪ ಮಡ್ಡಿ, ವಸಂತ ಬಂಡಗಾರ ನೇತೃತ್ವದಲ್ಲಿ 30-40 ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು. ಈ ವೇಳೆ ನಾರಾಯಣಪುರ ಮುಖ್ಯರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಳ್ಳದಂತೆ ನೋಡಿಕೊಳ್ಳಲು
ಪೊಲೀಸರು ಹರಸಾಹಸಪಟ್ಟರು.