ಮುದ್ದೇಬಿಹಾಳ: ರಸ್ತೆ ಅಪಘಾತದಲ್ಲಿ ಚಿಕಿತ್ಸೆ ಫಲಿಸದೆ ಬುಧವಾರ ಸಾವನ್ನಪ್ಪಿದ ಬಿಎಸ್ಎಫ್ ಯೋಧ ಬಸವರಾಜ ಸಿದ್ದಪ್ಪ ಡೊಂಗರಗಾಂವಿ ಅವರ ಅಂತ್ಯಕ್ರಿಯೆ ಕುಟುಂಬದವರು ಸೇರಿ ಸಾವಿರಾರು ಜನರ ಶೋಕ ಸಾಗರದ ಮದ್ಯೆ ಸೇನಾ ಗೌರವದೊಂದಿಗೆ ಗುರುವಾರ ಮದ್ಯಾಹ್ನ ಸ್ವಗ್ರಾಮ ತಂಗಡಗಿಯ ಗ್ರಾಮ ಪಂಚಾಯಿತಿ ಆವರಣದಲ್ಲಿ ನೆರವೇರಿತು.
ಮಹಾರಾಷ್ಟ್ರದ ಸಾತಾರ ಕ್ಯಾಂಪ್ ನಿಂದ ಆಗಮಿಸಿದ್ದ ಯೋಧರ ತಂಡ ಸವ ಪೆಟ್ಟಿಗೆಯ ಮೇಲೆ ರಾಷ್ಟ್ರಧ್ವಜ ಹೊದಿಸಿ ಸೇನಾ ಗೌರವ ಅರ್ಪಿಸಿತು. ಯೋಧನ ಪಾರ್ಥೀವ ಶರೀರವನ್ನು ಗ್ರಾಮದ ತುಂಬೆಲ್ಲ ಮೆರವಣಿಗೆ ನಡೆಸಲಾಯಿತು. ಬುಧವಾರ ರಾತ್ರಿ ಮುದ್ದೇಬಿಹಾಳದಿಂದ ತಂಗಡಗಿಗೆ ಆಗಮಿಸಿದ ಪಾರ್ಥೀವ ಶರೀರಕ್ಕೆ ಭಾವಪೂರ್ಣ ಸ್ವಾಗತ ನೀಡಿ ಪಂಚಾಯಿತಿ ಆವರಣದಲ್ಲೆ ರಾತ್ರಿ ಇಡೀ ಸಾರ್ವಜನಿಕರ ದರ್ಶನಕ್ಕಿರಿಸಲಾಗಿತ್ತು.
ಬೆಳಿಗ್ಗೆ ಅಂತಿಮ ಕ್ರಿಯಾವಿಧಿಗಳನ್ನು ನೆರವೇರಿಸಲಾಯಿತು. ಈ ವೇಳೆ ಯೋಧನ ತಾಯಿ, ಪತ್ನಿ, ಸಹೋದರ, ಪುಟ್ಟ ಮಕ್ಕಳು, ಬಂಧುಗಳು ಮತ್ತು ಅಪಾರ ಜನರ ಶೋಕದ ಕಟ್ಟೆ ಒಡೆದಿತ್ತು. ಬಸವರಾಜ್ ಅಮರ್ ರಹೆ ಘೋಷಣೆಗಳು ಮೊಳಗುತ್ತಿದ್ದವು.
ಅಂತಿಮ ಸಂಸ್ಕಾರಕ್ಕು ಮುನ್ನ ಶವ ಪೆಟ್ಟಿಗೆಯ ಮೇಲೆ ಹೊದಿಸಿದ್ದ ರಾಷ್ಟ್ರದ್ವಜವನ್ನು ಯೋಧರು ಮೃತ ಯೋಧನ ತಾಯಿ, ಪತ್ನಿಗೆ ಹಸ್ತಾಂತರಿಸಿದರು. ಯೋಧ ಬಸವರಾಜ ಸೇವೆಯಲ್ಲಿದ್ದ ರೆಜಿಮೆಂಟಿನಿಂದ ಕಳಿಸಲಾಗಿದ್ದ ಶವ ಸಂಸ್ಕಾರದ ಸಹಾಯಧನದ ಮೊತ್ತವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ತಂಗಡಗಿ ಮತ್ತು ಸುತ್ತಲಿನ ಹಳ್ಳಿಗಳ ಸಾವಿರಾರು ಜನ ಪಾಲ್ಗೊಂಡಿದ್ದರು.
ಇದನ್ನೂ ಓದಿ : ಶ್ರೀರಂಗಪಟ್ಟಣದ ಈ ಅಧಿಕಾರಿಗೆ ಪ್ರತಿ ಕೆಲಸದಲ್ಲೂ ಪರ್ಸಂಟೇಜ್ ಕೊಡಬೇಕಂತೆ