ಮುದ್ದೇಬಿಹಾಳ: ಪಟ್ಟಣದಲ್ಲಿ ಬೇಕಾಬಿಟ್ಟಿ ತಲೆ ಎತ್ತಿರುವ ಕಾನೂನು ಪಾಲನೆ ಮಾಡದ ಎನ್‌ಎ (ಬಿನ್‌ಶೇತ್ಕಿ) ಪ್ಲಾಟ್ ಗಳ ಮಾಲೀಕರು, ರಿಯಲ್ ಎಸ್ಟೇಟ್ ವ್ಯವಹಾರಸ್ಥರು ಮತ್ತು ಪುರಸಭೆ ಮುಖ್ಯಾಧಿಕಾರಿ ನಡುವೆ ಮಾತಿನ ಜಟಾಪಟಿ ನಡೆದ ಘಟನೆ ಮಂಗಳವಾರ ಸಂಜೆ ಇಲ್ಲಿನ ಪುರಸಭೆ ಸಭಾ ಭವನದಲ್ಲಿ ನಡೆಯಿತು.
ನಿಯಮ ಪಾಲನೆ ಮಾಡದ ಎನ್‌ಎ ಪ್ಲಾಟ್ ಗಳ ಮಾಲೀಕರಿಗೆ ಪುರಸಭೆ ವತಿಯಿಂದ ಶೋಕಾಸ್ ನೋಟಿಸ್ ನೀಡಿ ಸರಿಪಡಿಸಿಕೊಳ್ಳಲು ಕಾಲಾವಕಾಶ ಕೊಡಲಾಗಿತ್ತು. ಆದರೂ ಕಾನೂನು ಪಾಲನೆ ಮಾಡದ ಹಲವರಿಗೆ ಅಂತಿಮ ನೋಟಿಸ್ ನೀಡಿ ಎನ್‌ಎ ಆದೇಶವನ್ನೇ ರದ್ದುಪಡಿಸುವಂತೆ ಜಿಲ್ಲಾಧಿ =ಕಾರಿಗೆ ಶಿಫಾರಸು ಮಾಡುವ ಅಂತಿಮ ಎಚ್ಚರಿಕೆ ಕೊಡಲಾಗಿತ್ತು. ಇದರಿಂದ ಆತಂಕಕ್ಕೀಡಾಗಿದ್ದ ಹಲವರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಎನ್‌ಎ ಆದೇಶ ಬಂದ ನಂತರ ಕಾಲಾವಕಾಶ ಕೊಟ್ಟಿದ್ದರೂ ನಿಯಮಾನುಸಾರ ರಸ್ತೆ, ಚರಂಡಿ, ವಿದ್ಯುತ್, ನೀರು ಸೇರಿದಂತೆ ಮೂಲಸೌಕರ್ಯ ಕಲ್ಪಿಸಿಲ್ಲ. ಉದ್ಯಾನವನ, ಸಾರ್ವಜನಿಕ ಉದ್ದೇಶಕ್ಕೆ ನಿಗದಿಪಡಿಸಿದ ಜಾಗ ಅಭಿವೃದ್ಧಿಪಡಿಸಿಲ್ಲ. ಹೀಗಾಗಿ ಇಂಥ ಜಾಗಗಳನ್ನು ಹಲವರು ಅತಿಕ್ರಮಣ ಮಾಡಿ ಪುರಸಭೆಗೆ, ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ. ಮೇಲಾಗಿ ಮೂಲಸೌಕರ್ಯ ಒದಗಿಸದೆ ನಿಯಮ ಉಲ್ಲಂಘಿಸಿ ಪ್ಲಾಟ್‌ಗಳನ್ನು ಮಾರಾಟ ಮಾಡಿದ್ದು ಪ್ಲಾಟ್ ಖರೀದಿಸಿದವರು ಉತಾರಿ ಕೊಡುವಂತೆ ಪುರಸಭೆಗೆ ದುಂಬಾಲು ಬೀಳುತ್ತಿದ್ದಾರೆ. ನಿಯಮ ಪಾಲನೆ ಆಗದೇ ಇದ್ದಾಗ ಉತಾರಿ ಕೊಡುವುದು ಹೇಗೆ ಸಾಧ್ಯ ಎಂದು ಮುಖ್ಯಾಧಿಕಾರಿ ಗೋಪಾಲ ಕಾಸೆ ಹರಿಹಾಯ್ದರು.
ಇನ್ನೂ ಸ್ವಲ್ಪ ಕಾಲಾವಕಾಶ ಕೊಡಲಾಗುತ್ತದೆ. ನಿಯಮ ಪಾಲಿಸದ ಎನ್‌ಎ ಪ್ಲಾಟ್‌ಗಳ ಮಾಲೀಕರು ಈಗಲಾದರೂ ಎಚ್ಚೆತ್ತುಕೊಂಡು ಎನ್‌ಎ ಆದೇಶದಲ್ಲಿ ವಿಧಿಸಿರುವ ಶರತ್ತುಗಳು, ನಿಯಮಗಳನ್ನು ಪಾಲಿಸಬೇಕು. ಇದು ಅಂತಿಮ ಅವಕಾಶ. ಇದಕ್ಕೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಎನ್‌ಎ ಆದೇಶ ರದ್ದುಪಡಿಸುವುದು ಅನಿವಾರ್ಯವಾಗುತ್ತದೆ. ಆಗ ಉಂಟಾಗುವ ಸಮಸ್ಯೆಗಳಿಗೆ ಎನ್‌ಎ ಪ್ಲಾಟ್‌ಗಳ ಮಾಲೀಕರೇ ಹೊಣೆಗಾರರಾಗಬೇಕಾಗುತ್ತದೆ ಎಂದು ಕಾಸೆ ಎಚ್ಚರಿಸಿದರು.
ಈ ವೇಳೆ ಮಾತನಾಡಿದ ರಿಯಲ್ ಎಸ್ಟೇಟ್ ಉದ್ಯಮಿ ಅಯ್ಯೂಬ ಮನಿಯಾರ, ಹಿಂದೆ ಪುರಸಭೆಯಲ್ಲಿ ಇದ್ದ ಕೆಲವರು ಎನ್‌ಎ ಪ್ಲಾಟ್‌ಗಳ ಮಾಲೀಕರಿಂದ ಸಾಕಷ್ಟು ಹಣ ವಸೂಲಿ ಮಾಡಿದ್ದಾರೆ. 1 ಲಕ್ಷ ರೂ. ಅಭಿವೃದ್ಧಿ ಕರ ಎಂದು ಪಡೆದು ಕಡಿಮೆ ಹಣಕ್ಕೆ ರಸೀದಿ ಕೊಟ್ಟಿದ್ದಾರೆ. ಪ್ರತಿ ಪ್ಲಾಟ್‌ಗೆ 18 ಸಾವಿರ ರೂ. ಕರ ವಸೂಲಿ ಮಾಡಿ ಕೇವಲ 8 ಸಾವಿರಕ್ಕೆ ರಸೀದಿ ಕೊಟ್ಟಿದ್ದಾರೆ. ಹೀಗೆ ಪಡೆದ ಹಣ ಎಲ್ಲಿ ಹೋಯಿತು. ಒಂದು ವೇಳೆ ನಿಯಮ ಪಾಲಿಸುವಂತೆ ಆವಾಗಲೇ ಹೇಳಿದ್ದರೆ ನಾವು ಅಭಿವೃದ್ಧಿ ಕರ ತುಂಬುವ ಅವಶ್ಯಕತೆ ಏನಿತ್ತು. ಅಂದಾಜು 200ಕ್ಕೂ ಹೆಚ್ಚು ಎನ್‌ಎ ಲೇಔಟ್‌ಗಳು ಇವೆ. ಎಲ್ಲರಿಗೂ ನೋಟಿಸ್ ಕೊಡದೇ ಕೆಲವರನ್ನು ಮಾತ್ರ ಟಾರ್ಗೆಟ್ ಮಾಡಿ ನೋಟಿಸ್ ಕೊಟ್ಟಿದ್ದೀರಿ. ಹೀಗೆ ಮಾಡುವಂತೆ ನಿಮಗೆ ಶಾಸಕರು ಹೇಳಿದ್ದಾರೆಯೇ? ಹಾಗೆ ಹೇಳಿದ್ದರೆ ನಮಗೆ ತಿಳಿಸಿ. ನಾವು ಶಾಸಕರನ್ನು ಭೇಟಿಯಾಗಿ ಮಾತನಾಡುತ್ತೇವೆ ಎಂದು ಆಕ್ರೋಶ ಹೊರಹಾಕಿದರು.
ಪುರಸಭೆ ಎಫ್‌ಡಿಸಿ ರಮೇಶ ಮಾಡಬಾಳ ಮಾತನಾಡಿ, ಪಟ್ಟಣಕ್ಕೆ ಹೊಂದಿಕೊಂಡಿರುವ ಕುಂಟೋಜಿ, ಬಿದರಕುಂದಿ, ಹಡಲಗೇರಿ, ಕವಡಿಮಟ್ಟಿ ಗ್ರಾಮ ವ್ಯಾಪ್ತಿಯ ಜಮೀನು ಖರೀದಿಗೆ ಪುರಸಭೆ ಉತಾರಿ ಕೊಡು ಎಂದರೆ ಹೇಗೆ ಸಾಧ್ಯ? ಇವು ಪುರಸಭೆ ವ್ಯಾಪ್ತಿಗೆ ಬರುತ್ತವೆ ಎಂದು ಗೊತ್ತಿದ್ದರೂ ಪಂಚಾಯಿತಿಯಲ್ಲಿ ನೋಂದಾಯಿಸಿಕೊಂಡು ಈಗ ಪುರಸಭೆಗೆ ಬಂದರೆ ಏನು ಮಾಡಬೇಕು ಎಂದು ಪ್ರಶ್ನಿಸಿದರು. ಬಹಳ ಹೊತ್ತು ಚರ್ಚೆ, ಜಟಾಪಟಿ ನಡೆದು ಅಂತಿಮವಾಗಿ ಎಲ್ಲ ಎನ್‌ಎ ಲೇಔಟ್‌ಗಳ ಮಾಲೀಕರಿಗೆ ನೋಟಿಸ್ ನೀಡಬೇಕೆಂದು ತೀರ್ಮಾನಿಸಿ ಈ ಬಗ್ಗೆ ಕಾರ್ಯಪ್ರವೃತ್ತರಾಗುವಂತೆ ಸಿಬ್ಬಂದಿಗೆ ಸೂಚಿಸಿದರು. ಏನೇ ಆದರೂ ಎನ್‌ಎ ನಿಯಮ ಎಲ್ಲರೂ ಕಡ್ಡಾಯವಾಗಿ ಪಾಲಿಸಲೇಬೇಕು. ಇದರಲ್ಲಿ ಹೊಂದಾಣಿಕೆ ಪ್ರಶ್ನೆಯೇ ಇಲ್ಲ ಎಂದು ಮುಖ್ಯಾ ಧಿಕಾರಿ ಸ್ಪಷ್ಟಪಡಿಸಿದರು. ಕಂದಾಯ ಅಧಿಕಾರಿ ಭಾರತಿ ಮಾಡಗಿ, 15-20 ಲೇಔಟ್‌ಗಳ ಮಾಲೀಕರು ಇದ್ದರು.