Advertisement

ಪುರಸಭೆಯಲ್ಲಿ ಅರಳುತ್ತಾ ಕಮಲ?

01:05 PM Jan 23, 2020 | Naveen |

ಮುದ್ದೇಬಿಹಾಳ: ಇಲ್ಲಿನ ಪುರಸಭೆ ಆಡಳಿತ ಕಾಂಗ್ರೆಸ್‌ ಕೈ ತಪ್ಪಿ ಬಿಜೆಪಿಗೆ ದೊರಕುವುದೇ! ಇಂಥದ್ದೊಂದು ಸಾಧ್ಯತೆಯ ಹೊಸ ಚರ್ಚೆ ಪಟ್ಟಣದಲ್ಲಿ ಸಂಚಲನವೊಡ್ಡಿ ಕಾಂಗ್ರೆಸ್‌, ಜೆಡಿಎಸ್‌ನವರನ್ನು ಚಿಂತೆಗೀಡು ಮಾಡಿದೆ. ಸ್ಥಳೀಯ ಬಿಜೆಪಿ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಅವರು ಪುರಸಭೆ ಆಡಳಿತ ಬಿಜೆಪಿಗೇ ದಕ್ಕುತ್ತದೆ ಎಂದು ಖಚಿತವಾಗಿ ಹೇಳಿರುವುದು ಇದಕ್ಕೆ ಪುಷ್ಠಿ ನೀಡಿದಂತಾಗಿದೆ.

Advertisement

1973ರಲ್ಲಿ ಅಸ್ತಿತ್ವಕ್ಕೆ ಬಂದ ಇಲ್ಲಿನ ಪುರಸಭೆ 23 ವಾರ್ಡ್‌ ಹೊಂದಿದೆ. 31-8-2018ರಂದು ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ತಲಾ 8, ಜೆಡಿಎಸ್‌ 2, ಪಕ್ಷೇತರರು 5 ಸ್ಥಾನ ಗೆದ್ದುಕೊಂಡಿದ್ದರು. ಅಧಿಕಾರ ಹಿಡಿಯಲು ಬೇಕಿದ್ದ ಮ್ಯಾಜಿಕ್‌ ಸಂಖ್ಯೆ 12 ಯಾರ ಬಳಿಯೂ ಇಲ್ಲದ್ದರಿಂದ ಅತಂತ್ರ ಸ್ಥಿತಿ ನಿರ್ಮಾಣಗೊಂಡಿತ್ತು. ಆಗ ಶಾಸಕ ನಡಹಳ್ಳಿ ಜೆಡಿಎಸ್‌ ಜೊತೆ ಪುರಸಭೆ ಅ ಧಿಕಾರ ಹಂಚಿಕೊಳ್ಳುವ ದಾಳ ಉರುಳಿಸಿದ್ದರು. ಅದನ್ನರಿತ ಕಾಂಗ್ರೆಸ್‌ನ ಮಾಜಿ ಶಾಸಕ ಸಿ.ಎಸ್‌. ನಾಡಗೌಡರು ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ, ಜೆಡಿಎಸ್‌ ಬಳಿ ಇರದ, ಕಾಂಗ್ರೆಸ್‌ ಬಳಿ ಮಾತ್ರ ಇದ್ದ ಮಹಿಳಾ ಎಸ್ಸಿ ಮೀಸಲಾತಿಗೆ ಸರ್ಕಾರದಿಂದ ಆದೇಶ ಹೊರಡಿಸಿ ಶಾಕ್‌ ಕೊಟ್ಟಿದ್ದರು.

ಜೆಡಿಎಸ್‌, ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಇರುವವರೆಗೂ ಇಲ್ಲಿನ ಪುರಸಭೆ ಆಡಳಿತ
ಚುಕ್ಕಾಣಿ ಕಾಂಗ್ರೆಸ್‌ಗೆ ಒಲಿಯುವುದು ಬಹುತೇಕ ಖಚಿತವಾಗಿತ್ತು. ಆದರೆ ಯಾವಾಗ ಬಿಜೆಪಿ ಸರ್ಕಾರ ಪೂರ್ಣ ಬಹುಮತದೊಂದಿಗೆ ಅ ಧಿಕಾರಕ್ಕೆ ಬಂತೋ ಆವಾಗಿಂದ ಈ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ನಿಗದಿಪಡಿಸಿದ್ದ ಎಸ್ಸಿ ಮಹಿಳೆ ಮೀಸಲಾತಿ ಬದಲಾಗುತ್ತದೆ ಎಂದೇ ಹೇಳಿಕೊಂಡು ಬರಲಾಗಿತ್ತು. ಇದೀಗ ಬದಲಾದ ರಾಜಕೀಯ ಸನ್ನಿವೇಶ, ಮೀಸಲಾತಿ ವಿಷಯದಲ್ಲಿ ಹೈಕೋರ್ಟ್‌ ನೀಡಿದ ಆದೇಶ ಬಿಜೆಪಿಗೆ ವರವಾಗಿ ಪರಿಣಮಿಸಿದೆ. ಶಾಸಕ ನಡಹಳ್ಳಿ ಮುಖ್ಯಮಂತ್ರಿ ಮೇಲೆ ತೀವ್ರ ಒತ್ತಡ ತಂದು ಅಧ್ಯಕ್ಷ ಸ್ಥಾನಕ್ಕೆ ಹೊಸದಾಗಿ ಮೀಸಲಾತಿ ನಿಗದಿಪಡಿಸಲು ಪಟ್ಟು ಹಿಡಿದು ಶತಾಯಗತಾಯ ಬಿಜೆಪಿಗೆ ಅಧಿಕಾರ ಕೊಡಿಸಲು ಕಾರ್ಯಪ್ರವೃತ್ತರಾಗಿದ್ದು ಹೊಸ ಚರ್ಚೆ ಹುಟ್ಟು ಹಾಕಿದಂತಾಗಿದೆ.

ಹಿಂಗಿದೆ ಮೀಸಲಾತಿ ಆಟ: ಮೀಸಲಾತಿಗನುಗುಣವಾಗಿ ಬಿಜೆಪಿಯ 1 ಸಾಮಾನ್ಯ, 2 ಸಾಮಾನ್ಯ ಮಹಿಳೆ, 2 ಬಿಸಿಎಂ ಎ, 1 ಬಿಸಿಎಂ ಎ ಮಹಿಳೆ, 2 ಪರಿಶಿಷ್ಟ ಜಾತಿ (ಎಸ್ಸಿ) ಸೇರಿ 8, ಕಾಂಗ್ರೆಸ್‌ನ 4 ಸಾಮಾನ್ಯ, 2 ಸಾಮಾನ್ಯ ಮಹಿಳೆ, 1 ಎಸ್ಸಿ ಮಹಿಳೆ, 1 ಬಿಸಿಎಂ ಎ ಸೇರಿ 8, ಜೆಡಿಎಸ್‌ನ 1 ಸಾಮಾನ್ಯ ಮಹಿಳೆ, 1 ಬಿಸಿಎಂ ಎ ಮಹಿಳೆ ಸೇರಿ 2, ಪಕ್ಷೇತರರು 5 (ತಲಾ 1 ಸಾಮಾನ್ಯ, ಸಾಮಾನ್ಯ ಮಹಿಳೆ, ಬಿಸಿಎಂ ಬಿ, ಬಿಸಿಎಂ ಎ ಮಹಿಳೆ, ಪರಿಶಿಷ್ಟ ಪಂಗಡ (ಎಸ್ಟಿ)) ಸೇರಿ 23 ವಾರ್ಡ್‌ಗೆ ಸದಸ್ಯರು ಆಯ್ಕೆಗೊಂಡಿದ್ದರು.

ಆಗ ಉಂಟಾಗಿದ್ದ ಪೈಪೋಟಿ ತಪ್ಪಿಸಲು ಮಾಜಿ ಶಾಸಕ ನಾಡಗೌಡರು ಬಿಜೆಪಿ, ಜೆಡಿಎಸ್‌ನವರ ಬಳಿ ಇಲ್ಲದ ಎಸ್ಸಿ ಮಹಿಳೆ ಮೀಸಲಾತಿ ತಮ್ಮ (ಕಾಂಗ್ರೆಸ್‌) ಬಳಿ ಇರುವುದನ್ನು ಅರಿತೇ ಅಧ್ಯಕ್ಷ ಸ್ಥಾನಕ್ಕೆ ಎಸ್ಸಿ ಮಹಿಳೆ ಮೀಸಲಾತಿ ತಂದು ತಂತ್ರಗಾರಿಕೆ ಮೆರೆದಿದ್ದರು. ಸಮ್ಮಿಶ್ರ ಸರ್ಕಾರ ಇರುವವರೆಗೂ ಕಾಂಗ್ರೆಸ್‌ ಪುರಸಭೆ ಅಧಿಕಾರ ಹಿಡಿಯುವುದು ಬಹುತೇಕ ನಿಶ್ಚಿತವಾಗಿತ್ತು.
ಇದೀಗ ಬಿಜೆಪಿ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಅಧಿಕಾರ ಹಿಡಿದಿದ್ದರಿಂದ ಶಾಸಕ ನಡಹಳ್ಳಿ ಪ್ರತಿ ತಂತ್ರಗಾರಿಕೆ ಹೆಣೆದಿದ್ದಾರೆ. ಬಿಜೆಪಿಯವರನ್ನೇ ಅಧ್ಯಕ್ಷರನ್ನಾಗಿ ಮಾಡಲು, ಇದು ಸಾಧ್ಯವಾಗದಿದ್ದರೆ ಪೈಪೋಟಿ ತಪ್ಪಿಸಿ, ಕಾಂಗ್ರೆಸ್‌ ಜೆಡಿಎಸ್‌ಗೆ ಟಾಂಗ್‌ ಕೊಡಲು ಪಕ್ಷೇತರರ ಬಳಿ ಮಾತ್ರ ಇರುವ ಎಸ್ಟಿ ಮೀಸಲಾತಿ ಲಾಭ ಪಡೆಯಲು ಮುಂದಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಎಸ್ಟಿ ಮೀಸಲಾತಿ ತಂದು ತಮ್ಮ ಮತ್ತು ಸಂಸದರ ವಿಶೇಷ ವೋಟ್‌ ಬಳಸಿ ಪುರಸಭೆ ಅಧಿಕಾರ ಹಿಡಿಯಲು ಪ್ರಯತ್ನ ಮುಂದುವರಿಸಿದ್ದಾರೆ ಎನ್ನಲಾಗುತ್ತಿದೆ.

Advertisement

ಪುರಸಭೆಯಲ್ಲಿ ನಮ್ಮ ಪಕ್ಷದ ಆಡಳಿತವನ್ನೇ ತರುವ ವಿಶ್ವಾಸ ನೂರಕ್ಕೆ ನೂರು ಇದೆ. ಈ
ಬಗ್ಗೆ ಸಂಶಯ ಬೇಡ. ಸದ್ಯ ಬಿಜೆಪಿಗೆ 8 ಸದಸ್ಯರಿದ್ದು ಬಹುಮತಕ್ಕೆ ಇನ್ನೂ 4 ಸದಸ್ಯರ
ಅವಶ್ಯಕತೆ ಇದೆ. ಶಾಸಕನಾದ ನನ್ನದು, ಎಂಪಿಯವರದ್ದೂ ಸೇರಿ 2 ವೋಟು ಬೋನಸ್‌ ಇವೆ. ಅಧ್ಯಕ್ಷ ಸ್ಥಾನಕ್ಕೆ ನೋಟಿಫಿಕೇಶನ್‌ ಆದ ಮೇಲೆ ಎಲ್ಲ ಗೊತ್ತಾಗುತ್ತೆ.
ಎ.ಎಸ್‌. ಪಾಟೀಲ ನಡಹಳ್ಳಿ,
ಶಾಸಕ

„ಡಿ.ಬಿ. ವಡವಡಗಿ

Advertisement

Udayavani is now on Telegram. Click here to join our channel and stay updated with the latest news.

Next