Advertisement

ಸಾಮಾಜಿಕ ಅಂತರ ಪಾಲನೆ

01:18 PM Apr 20, 2020 | Naveen |

ಮುದ್ದೇಬಿಹಾಳ: ಕುಂಟೋಜಿ ಗ್ರಾಪಂ ವ್ಯಾಪ್ತಿಯಲ್ಲಿ ಪಿಡಿಒ, ಪಂಚಾಯತ್‌ ಸಿಬ್ಬಂದಿ, ಅಲ್ಲಿನ ಜನಪ್ರತಿನಿಧಿಗಳು ಸ್ಥಳೀಯ ಯುವ ಸಂಘಟನೆಗಳೊಂದಿಗೆ ಸೇರಿಕೊಂಡು ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳನ್ನು ಕಡ್ಡಾಯವಾಗಿ ಪಾಲನೆ ಆಗುವಂತೆ ನೋಡಿಕೊಳ್ಳಲಾಗಿದೆ.

Advertisement

ಸರ್ಕಾರದ ಸೂಚನೆಯಂತೆ ಕುಂಟೋಜಿಯಲ್ಲಿರುವ ಪ್ರಸಿದ್ಧ ಬಸವೇಶ್ವರ ದೇವಸ್ಥಾನವನ್ನು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಂದ್‌ ಮಾಡಲಾಗಿದೆ. ನಿತ್ಯ ಪೂಜೆ ಯಥಾವತ್ತಾಗಿ ನಡೆಯುವಂತೆ ನೋಡಿಕೊಳ್ಳಲು ದೇವಸ್ಥಾನ ಕಮಿಟಿಯವರು ಪಂಚಾಯತ್‌ ಆಡಳಿತಕ್ಕೆ ಸಹಕರಿಸಿದ್ದಾರೆ. ಪಿಡಿಒ ಪಿ.ಎಸ್‌. ನಾಯ್ಕೋಡಿ ನೇತೃತ್ವದ ಪಂಚಾಯತ್‌ ಸಿಬ್ಬಂದಿ ಗ್ರಾಮದಲ್ಲಿ ಜನರು ಸುಖಾಸುಮ್ಮನೆ ಹರಟೆ ಹೊಡೆಯುತ್ತಿದ್ದ ಕಟ್ಟೆಗಳ ಮೇಲೆ ಆಯಿಲ್‌ ಸುರಿದು, ಮುಳ್ಳುಕಂಟಿ ಹಚ್ಚಿ ಯಾರೂ ಗುಂಪುಗೂಡದಂತೆ, ರೇಷನ್‌, ಕಿರಾಣಿ ಮತ್ತಿತರ ಅಂಗಡಿಗಳಲ್ಲಿ ಸಾಮಗ್ರಿ ಪಡೆಯಲು ಜನ ಮುಗಿ ಬೀಳುವುದನ್ನು ತಪ್ಪಿಸಲು ಅವುಗಳ ಮುಂದೆ ಸುಣ್ಣದಲ್ಲಿ ಬಾಕ್ಸ್‌ ಗೆರೆ ಹಾಕಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಲಾಗಿದೆ.

ಗ್ರಾಮದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಡಲಾಗಿದ್ದು ಫಾಗಿಂಗ್‌, ಚರಂಡಿ ಸ್ವಚ್ಛತೆ, ಕೊಳಚೆಯನ್ನು ಬೇರೆಡೆ ಸಾಗಿಸುವುದು, ಪೌಡರ್‌ ಸಿಂಪಡಿಕೆ ಕೈಗೊಳ್ಳಲಾಗಿದೆ. ಆಟೋದಲ್ಲಿ ಮೈಕ್‌ ಹಚ್ಚಿ ಕೋವಿಡ್ ಮತ್ತು ಲಾಕ್‌ಡೌನ್‌ ಬಗ್ಗೆ ಎಲ್ಲೆಡೆ ವ್ಯಾಪಕ ಪ್ರಚಾರ ನಡೆಸಲಾಗಿದೆ. ಇವೆಲ್ಲವುಗಳ ಮಧ್ಯೆ ಕುಡಿವ ನೀರಿನ ಸಮಸ್ಯೆ ತಲೆದೋರದಂತೆ ನೋಡಿಕೊಳ್ಳಲು ಪಂಚಾಯತ್‌ ಆಡಳಿತ ಸಾಕಷ್ಟು ಶ್ರಮಿಸುತ್ತಿದೆ. ಕೊರೊನಾ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ಸರ್ಕಾರದ ನಿರ್ದೇಶನದಂತೆ ಹಲವಾಗು ಆರೋಗ್ಯ ಸಂಬಂಧಿ ಕ್ರಮ ಜಾರಿಗೊಳಿಸಲಾಗಿದೆ. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಬಂದು ಜಾಗೃತಿ ಮೂಡಿಸಿದ್ದಾರೆ. ಲಾಕ್‌ಡೌನ್‌ ಉಲ್ಲಂಘನೆ ಆಗದಂತೆ ಸ್ಥಳೀಯ ಸಂಘಟನೆಗಳ ಯುವಜನತೆ ಸಾಕಷ್ಟು ಸಹಕಾರ ನೀಡಿ ಜನಜಾಗೃತಿ ಮೂಡಿಸಲು ಶ್ರಮಿಸಿದ್ದಾರೆ. ಇದಕ್ಕೆ ಪಂಚಾಯತ್‌ ಸದಸ್ಯರು, ಗ್ರಾಮಸ್ಥರ ಬೆಂಬಲ ದೊರಕಿದೆ ಎಂದು ಪಿಡಿಒ ಪಿ.ಎಸ್‌. ನಾಯ್ಕೋಡಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next