ಮುದ್ದೇಬಿಹಾಳ: ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸ್ವತ್ಛತೆಗೆ ಮಹತ್ವ ಕೊಡಲು ದೇಶವ್ಯಾಪಿ ಕರೆ ನೀಡಿ ಸರ್ಕಾರಿ ಆಡಳಿತ ಯಂತ್ರ ಚುರುಕುಗೊಳಿಸಲು ಕ್ರಮ ಕೈಗೊಂಡಿದ್ದಾರೆ. ಆದರೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳದಲ್ಲಿ ಮಾತ್ರ ಸರ್ಕಾರದ ಸ್ಥಳೀಯ ಸಂಸ್ಥೆಯ ಭಾಗವಾಗಿರುವ ಪುರಸಭೆ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ದಿವ್ಯ ಮೌನಕ್ಕೆ ಶರಣಾಗಿ ಪಟ್ಟಣದ ಮಹಾಂತೇಶನಗರ ನಿವಾಸಿಗಳು ಬಸವಳಿಯುವಂತೆ ಮಾಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
Advertisement
ಮುದ್ದೇಬಿಹಾಳ ಪಟ್ಟಣದ 4ನೇ ವಾರ್ಡ್ ಅನ್ನು ಮಹಾಂತೇಶನಗರ ಬಡಾವಣೆ ಎಂದು ಗುರ್ತಿಸಲಾಗಿದೆ. ಈ ಬಡಾವಣೆ ಹೆಚ್ಚು ವಿಸ್ತಾರವಾಗಿದ್ದರೂ ಅಲ್ಲಲ್ಲಿ ಸಾಕಷ್ಟು ಅವ್ಯವಸ್ಥೆ ಮನೆ ಮಾಡಿದೆ. ಎಂಜಿಎಂಕೆ ಶಾಲೆ, ಶಾರದಾ ಶಾಲೆ, ಜವಾಹರ ನೆಹರು ಶಾಲೆ ಮತ್ತು ಬಿಎಸ್‌ಎನ್‌ಎಲ್ ಕಚೇರಿ ಮಧ್ಯೆ ಬರುವ ಕಂಚಾಣಿ ಅವರ ಜಮೀನಿನ ಅಕ್ಕಪಕ್ಕದಲ್ಲಿ ವಾಸಿಸುವ ಜನರು ಮಲೀನತೆ ಹೆಚ್ಚಾಗಿ ರೋಗ ರುಜಿನಗಳಿಂದ ಬಳಲುವ ಪರಿಸ್ಥಿತಿ ತಲೆದೋರಿದ್ದು ಅಲ್ಲಿನ ಜನರನ್ನು ಸಾಕಷ್ಟು ಹೈರಾಣುಗೆಡವಿದೆ.
Related Articles
ಬೋರ್‌ವೆಲ್‌ನಿಂದ ಬಾಡಿಗೆ ರೂಪದಲ್ಲಿ ನೀರನ್ನು ಮಾರಾಟ ಮಾಡುತ್ತಿದ್ದಾರೆ. ಅಲ್ಲಿ ನೀರು ತುಂಬಿಕೊಳ್ಳಲು ರಸ್ತೆಯ ಮೇಲೆ ನಿಲ್ಲುವ ವಾಹನಗಳಿಂದಲೂ ನೀರು ಚಲ್ಲಿ ರಸ್ತೆ ಕೆಸರುಮಯವಾಗಿ ಸಂಚಾರ ದುಸ್ತರ ಎನ್ನಿಸಿಕೊಂಡಿದೆ. ಒಟ್ಟಾರೆ ಈ ಪ್ರದೇಶದಲ್ಲಿ ಜನವಸತಿ ಸಾಕಷ್ಟು ಕಂಗೆಟ್ಟಿದ್ದು ಯಾವಾಗ ಯಾವ ರೋಗ ಬರುತ್ತದೆ, ಯಾವಾಗ ಯಾರು ಕೆಸರು ತುಂಬಿದ ರಸ್ತೆಯಲ್ಲಿ ಕಾಲುಜಾರಿ ಬಿದ್ದು ಗಾಯಪಡಿಸಿಕೊಳ್ಳುತ್ತಾರೆ ಎನ್ನುವುದು ಗೊತ್ತಾಗದ ಪರಿಸ್ಥಿತಿ ಇಲ್ಲಿದೆ. ಇದೇ ಪ್ರದೇಶದ ಒಳ ರಸ್ತೆ ಮಾರ್ಗವಾಗಿ ಶಾಲೆಗಳಿಗೆ ಹೋಗಿ ಬರುವ ಮಕ್ಕಳ ಪರಿಸ್ಥಿತಿ ತೀರ ಗಂಭೀರವಾಗಿದೆ.
Advertisement
ಇವರು ಶುಭ್ರ ಸಮವಸ್ತ್ರ ಧರಿಸಿ ಈ ರಸ್ತೆಯಲ್ಲಿ ಸಂಚರಿಸಿದರೆ ಪೂರ್ತಿ ಕೊಳೆಯಾಗಿ ನಿತ್ಯವೂ ಬಟ್ಟೆ ಬದಲಾಯಿಸುವ ಅನಿವಾರ್ಯತೆ ಪಾಲಕರಿಗೆ ಬಂದೊದಗಿದೆ. ಇವೆಲ್ಲ ಸಮಸ್ಯೆಗಳ ನಡುವೆ ಕುಡಿವ ನೀರಿನ ಪೈಪ್ ಒಡೆದಿದ್ದರೂ ದುರಸ್ತಿ ಮಾಡದ ಕಾರಣ 15 ದಿನಗಳಿಂಡ ಬಡಾವಣೆಯ ಜನತೆಗೆ ಕುಡಿವ ನೀರು ಪೂರೈಕೆಯೂ ಬಂದ್ ಆಗಿ ಪರದಾಡುವ ಸ್ಥಿತಿ ಇದೆ. ಅಕ್ಕಪಕ್ಕದ ತೆರೆದ ಬಾವಿ, ಕೈ ಪಂಪು ಇನ್ನಿತರೆ ನೀರಿನ ಮೂಲಗಳಿಗೆ ಜನ ಮೊರೆ ಹೋಗುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ.
ಈಗಲಾದರೂ ಪುರಸಭೆ ಆಡಳಿತ, ಸ್ಥಳೀಯ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಸಮಸ್ಯೆಗಳಿಂದ ಕೂಡಿದ ಈ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿ ಮನೆ ಮಾಡಿರುವ ಅವ್ಯವಸ್ಥೆ, ಅನೈರ್ಮಲ್ಯ ಸರಿಪಡಿಸಿ ಜನಜೀವನ ಎಂದಿನಂತೆ ಆರೋಗ್ಯಕರ ಬದುಕು ನಡೆಸಲು ಅವಕಾಶ ಮಾಡಿಕೊಡಬೇಕು. ಇಲ್ಲವಾದಲ್ಲಿ ಬಡಾವಣೆ ನಿವಾಸಿಗಳೆಲ್ಲ ಸೇರಿ ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.