ವಿಜಯಪುರ: ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಉಂಟಾದ ಭೀಕರ ಪ್ರವಾಹವನ್ನು ಕೇಂದ್ರ ಸರ್ಕಾರ ತಕ್ಷಣವೇ ರಾಷ್ಟ್ರೀಯ ವಿಪತ್ತೆಂದು ಘೋಷಿಸಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕೆಂದು ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ ಒತ್ತಾಯಿಸಿದರು.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪ್ರವಾಹ ಪರಿಸ್ಥಿತಿ ನಿರ್ವಹಣೆ, ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯದಲ್ಲಿ ಕೇಂದ್ರ ಸರ್ಕಾರ ಮಹತ್ವದ ಜವಾಬ್ದಾರಿ ಹೊಂದಿದೆ. ನೆರೆಯ ಮಹಾರಾಷ್ಟ್ರಕ್ಕೆ ಹೆಚ್ಚು ಅನುದಾನ ದೊರಕಿದ್ದು ಕರ್ನಾಟಕವನ್ನು ಕಡೆಗಣಿಸಲಾಗಿದೆ. ನರೇಗಾ ಯೋಜನೆ ಅನುದಾನ ನೀಡುವುದು ಸೇರಿದಂತೆ ಎಲ್ಲ ಯೋಜನೆಗಳ ವಿಷಯದಲ್ಲೂ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಲೇ ಬಂದಿದೆ ಎಂದು ಹರಿಹಾಯ್ದರು.
ತಾತ್ಕಾಲಿಕ ಶೆಡ್ ನಿರ್ಮಿಸಿ: ಮಹಾರಾಷ್ಟ್ರ ಮಾದರಿಯಲ್ಲಿ ಪರಿಹಾರ ನೀಡಬೇಕು. ಮನೆ ಕಳೆದುಕೊಂಡವರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲು ತಕ್ಷಣವೇ ಭೂಮಿ ಖರೀದಿಸಿ, ಪ್ರವಾಹ ಪೀಡಿತ ಹಳ್ಳಿಗಳನ್ನು ಸ್ಥಳಾಂತರಿಸಬೇಕು. ತುರ್ತಾಗಿ ತಾತ್ಕಾಲಿಕ ನೆಲೆಗಾಗಿ ಶೆಡ್ ನಿರ್ಮಿಸಿಕೊಡಬೇಕೆಂದು ಆಗ್ರಹಿಸಿದ ಅವರು ಸರ್ಕಾರ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವುದು ಸವಾಲಿನ ಕೆಲಸ ಎಂಬುದು ನಮಗೂ ಗೊತ್ತು ಎಂದರು.
5 ಲಕ್ಷ ಸಾಕಾಗಲ್ಲ: ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣಕ್ಕೆ ಘೋಷಿಸಿರುವ 5 ಲಕ್ಷ ರೂ. ಸಾಕಾಗದ ಕಾರಣ 10 ಲಕ್ಷ ರೂ.ಗಳಿಗೆ ಏರಿಸಬೇಕೆಂದು ಆಗ್ರಹಿಸಿದ ಅವರು, ಪ್ರವಾಹ ಜನರ ಮನೆಗಳಲ್ಲಿದ್ದ ಆಹಾರ ಧಾನ್ಯ, ಉಡುಗೆ ಸೇರಿದಂತೆ ಬದುಕಿಗೆ ಅಗತ್ಯವಿದ್ದ ಎಲ್ಲ ಸಲಕರಣೆಗಳನ್ನು ಹಾಳು ಮಾಡಿದೆ. ಸರ್ಕಾರ ತಕ್ಷಣವೇ ಬಾಧಿತರಿಗೆ ಅಗತ್ಯ ವಸ್ತುಗಳಿಗಾಗಿ ಮಹಾರಾಷ್ಟ್ರ ಸರ್ಕಾರ 15 ಸಾವಿರ ರೂ. ತುರ್ತು ಪರಿಹಾರ ನೀಡಬೇಕು ಒತ್ತಾಯಿಸಿದರು.
ಮುನ್ನೆಚ್ಚರಿಕೆ ಅಗತ್ಯ: ನದಿ ಪಾತ್ರಗಳಲ್ಲಿ ಪ್ರವಾಹ ಪರಿಧಿ ಗುರುತಿಸುವುದು ಸೇರಿದಂತೆ ಭವಿಷ್ಯದಲ್ಲಿ ಇಂಥ ದುರಂತಗಳು ಸಂಭವಿಸದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕೈಗೊಳ್ಳಬೇಕಿದೆ ಎಂದ ಅವರು, ಜಲ ಸಂಪನ್ಮೂಲ ಸಚಿವನಾಗಿದ್ದ ನನಗೆ ಈ ವಿಷಯದಲ್ಲಿ ಇರುವ ಅನುಭವ ಆಧಾರದಲ್ಲಿ ಹೇಳುವುದಾದರೆ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಸರ್ಕಾರ ವಿಶೇಷ ಯೋಜನೆ ರೂಪಿಸಬೇಕಿದೆ. ಅಮೆರಿಕ, ದೆಹಲಿ ಸೇರಿದಂತೆ ವಿಷಯ ಪರಿಣಿತ ಸಂಸ್ಥೆಗಳಿದ್ದು, ಇವರನ್ನು ಸಂಪರ್ಕಿಸಿ ಚರ್ಚಿಸುವುದಾಗಿ ತಿಳಿಸಿದರು.
ಸಹಕಾರ ನೀಡಲು ಸಿದ್ಧ: ಪ್ರವಾಹದ ಈ ಸಂಕಷ್ಟದ ಸಂದರ್ಭದಲ್ಲಿ ನಾವು ರಾಜಕೀಯ ಮಾಡದೇ ಎಲ್ಲ ರೀತಿಯಲ್ಲೂ ಸರ್ಕಾರಕ್ಕೆ ಸಹಕಾರ ನೀಡಲು ಸಿದ್ಧರಿದ್ದೇವೆ. ಸರ್ಕಾರ ಸಂತ್ರಸ್ತರ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ವಿಪಕ್ಷವಾಗಿ ನಾವು ಜನರ ಪರ ಧ್ವನಿ ಎತ್ತುವುದು ಅನಿವಾರ್ಯವಾಗುತ್ತದೆ. ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡುವುದು ಮನುಷ್ಯರಾದ ನಮ್ಮೆಲ್ಲರ ಕರ್ತವ್ಯ ಎಂದರು.
ಪ್ರವಾಹ ಸಂದರ್ಭದಲ್ಲಿ ಮಾಧ್ಯಮಗಳು ಅತ್ಯಂತ ಜವಾಬ್ದಾರಿಯಿಂದ ಸಾಮಾಜಿಕ ಕಾಳಜಿ ನಿರ್ವಹಿಸಿವೆ. ಸಂಘ-ಸಂಸ್ಥೆಗಳು ಮುಕ್ತವಾಗಿ ಸಂತ್ರಸ್ತರ ನೆರವಿಗೆ ಧಾವಿಸಿವೆ. ಹೀಗಾಗಿ ಸಂತ್ರಸ್ತರ ಪರ ನಿಂತ ಎಲ್ಲರೂ ಅಭಿನಂದನಾರ್ಹರು ಎಂದರು.