Advertisement

ಕಾಯಿಸಿದಾಗ ಕಪ್ಪು ಬಣ್ಣಕ್ಕೆ ತಿರುಗಿದ ಬಂಗಾರ ಬಣ್ಣದ ಬೆಲ್ಲ

03:10 PM Nov 24, 2019 | Naveen |

ನಾಲತವಾಡ/ಮುದ್ದೇಬಿಹಾಳ: ಸಂತೆಯಿಂದ ತಂದ ಕೆಂಪು ಬಂಗಾರ ವರ್ಣದ ಬೆಲ್ಲ ಕಾಯಿಸಿದಾಗ ಕಪ್ಪು ಬಣ್ಣಕ್ಕೆ ತಿರುಗಿ ಆತಂಕ ಮೂಡಿಸಿದ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ನಾಲತವಾಡ ಹೋಬಳಿ ವ್ಯಾಪ್ತಿಯ ಕೆಸಾಪುರ ಗ್ರಾಮದಲ್ಲಿ ಶನಿವಾರ ರಾತ್ರಿ ಬೆಳಕಿಗೆ ಬಂದಿದೆ.

Advertisement

ಗ್ರಾಮದ ಬಸಮ್ಮ ಬೋಯೆರ ಎನ್ನುವವರು ಗುರುವಾರ ಮುದ್ದೇಬಿಹಾಳ ಪಟ್ಟಣದಲ್ಲಿ ಸಂತೆ ಇದ್ದ ಕಾರಣ ಅಲ್ಲಿಗೆ ಹೋಗಿ ಬಸವೇಶ್ವರ ವೃತ್ತದ ಹತ್ತಿರ ಕಾಂಪ್ಲೆಕ್ಸ್‌ ಒಂದರಲ್ಲಿ ಇರುವ ಕಿರಾಣಿ ಅಂಗಡಿಯಲ್ಲಿ ರೂ. 45ಕ್ಕೆ ಕೆಜಿಯಂತೆ ಎರಡೂವರೆ ಕೆಜಿ ಬೆಲ್ಲ ತಂದಿದ್ದರು. ಶನಿವಾರ ರಾತ್ರಿ ಸಿಹಿ ಪದಾರ್ಥ ಸಜ್ಜಕ ಮಾಡುವುದಕ್ಕಾಗಿ ಒಂದು ಕೆಜಿಯಷ್ಟು ಬೆಲ್ಲವನ್ನು ನೀರಿನಲ್ಲಿ ಹಾಕಿ ಕುದಿಸತೊಡಗಿದ್ದಾರೆ. ನೀರು ಬಿಸಿ ಆಗಿ ಬೆಲ್ಲ ಕರಗಿದಂತೆಲ್ಲ ಕಪ್ಪು ಬಣ್ಣಕ್ಕೆ ತಿರುಗಿದೆ. ಇದರಿಂದ ಗಾಬರಿಗೊಂಡ ಬಸಮ್ಮ ಅವರು ತಮ್ಮ ಮನೆಯವರಿಗೆ ಅದನ್ನು ತೋರಿಸಿದ್ದಾರೆ. ಎಲ್ಲರೂ ಆತಂಕಪಟ್ಟು ಆ ಬೆಲ್ಲದಲ್ಲಿ ಸಜ್ಜಕ ಮಾಡುವುದೇ ಬೇಡ ಎಂದು ಕುದಿಸಿದ ಬೆಲ್ಲದ ಕಪ್ಪು ಬಣ್ಣದ ನೀರನ್ನು ಬಾಟಲಿಯೊಂದರಲ್ಲಿ ತುಂಬಿ ಇಟ್ಟಿದ್ದಾರೆ.

ರವಿವಾರ ಇಲ್ಲವೇ ಸೋಮವಾರ ಬೆಲ್ಲ ಮತ್ತು ಬೆಲ್ಲ ಕುದಿಸಿದಾಗ ಬಂದ ಕಪ್ಪು ಬಣ್ಣದ ನೀರಿನ ಸಮೇತ ಬೆಲ್ಲ ಖರೀದಿಸಿದ ಕಿರಾಣಿ ಅಂಗಡಿಗೆ ಬಂದು ಈ ಬಗ್ಗೆ ಪ್ರಶ್ನಿಸುವುದಾಗಿ ಬಸಮ್ಮ ಅವರ ಪುತ್ರ ಗದ್ದೆಪ್ಪ ಉದಯವಾಣಿಗೆ ತಿಳಿಸಿದ್ದಾರೆ. ಈ ಬೆಲ್ಲದಲ್ಲಿ ಅತಿಯಾದ ರಾಸಾಯನಿಕ ಮಿಶ್ರಣ ಮಾಡಿದ್ದರಿಂದ ಹೀಗೆ ಆಗಿರಬಹುದು ಎನ್ನುವ ಸಂಶಯ ಮನೆಯವರಿಗೆ ಬಂದಿದ್ದು ಹೆಚ್ಚಿನ ತಪಾಸಣೆಗಾಗಿ ಅದನ್ನು ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿ ಕಾರಿ ಡಾ| ಸಿ.ವಿ. ವಿರಕ್ತಮಠ ಅವರಿಗೆ ವಿಡಿಯೋ ಮಾಡಿ ಕಳಿಸಿದ್ದಾರೆ.

ಈ ಘಟನೆ ಮಾಹಿತಿ ಪಡೆದ ಆಹಾರ ಗುಣಮಟ್ಟ ಸುರಕ್ಷತಾ ಅಧಿಕಾರಿ ಶಂಕರಗೌಡ ಕಂತಲಗಾಂವಿ ಅವರು ಬೋಯೇರ ಕುಟುಂಬದವರಿಗೆ ರವಿವಾರ ಬೆಲ್ಲ ಮತ್ತು ಕಪ್ಪು ನೀರಿನ ಸಮೇತ ಬೆಲ್ಲ ಖರೀದಿಸಿದ ಮುದ್ದೇಬಿಹಾಳದ ಬಸವೇಶ್ವರ ವೃತ್ತದಲ್ಲಿರುವ ಕಿರಾಣಿ ಅಂಗಡಿಗೆ ಬರುವಂತೆ ತಿಳಿಸಿದ್ದು ಪರಿಶೀಲನೆ ನಡೆಸಿದ ಮೇಲೆ ಬೆಲ್ಲವನ್ನು ಗುಣಮಟ್ಟ ಪರೀಕ್ಷೆಗೆ ಕಳಿಸಲಾಗುತ್ತದೆ. ಒಂದು ವೇಳೆ ಬೆಲ್ಲದ ಗುಣಮಟ್ಟದಲ್ಲಿ ದೋಷ ಕಂಡು ಬಂದಲ್ಲಿ ಮಾರಾಟ ಮಾಡಿದವರು, ಪೂರೈಸಿದವರು ಮತ್ತು ತಯಾರು ಮಾಡಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಲಾಗುತ್ತದೆ ಎಂದು ಉದಯವಾಣಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next