ಮುದ್ದೇಬಿಹಾಳ: ಕೊರೊನಾ ದಿನದಿಂದ ದಿನಕ್ಕೆ ತನ್ನ ಪ್ರಖರತೆ ಬೀರತೊಡಗಿರುವುದನ್ನು ಮನಗಂಡಿರುವ ಇಲ್ಲಿನ ಸರಸ್ವತಿ ಪೀರಾಪುರ, ಗೌರಮ್ಮ ಹುನಗುಂದ ಅವರು ತಮ್ಮ ಮನೆಯಲ್ಲೇ ಗುಣಮಟ್ಟದ ಬಟ್ಟೆಯಿಂದ ಕಡು ಬಡವರಿಗೆ ಉಚಿತವಾಗಿ ವಿತರಿಸಲು ಮಾಸ್ಕ್ತ ಯಾರಿಸುವಲ್ಲಿ ತೊಡಗಿಕೊಂಡಿದ್ದಾರೆ.
ಲಾಕ್‌ಡೌನ್ ಇರುವುದರಿಂದ ಮನೆಯಲ್ಲಿ ಕುಳಿತು ಬೇಜಾರಾಗಿ ಕಾಲ ಕಳೆಯಲು ಮತ್ತು ಕಡು ಬಡವರಿಗೆ ನೆರವಾಗಲು ಈ ಮಾರ್ಗ ಆಯ್ದುಕೊಂಡಿರುವ ಇವರು ಸಮಾಜಸೇವೆಯನ್ನು ಹೀಗೂ ಮಾಡಬಹುದೆಂದು ತೋರಿಸಿಕೊಟ್ಟು ಮಾದರಿಯಾಗಿದ್ದಾರೆ. ಮಾಸ್ಕ್ಗಾಗಿ ಬಟ್ಟೆ ಖರೀದಿಸಲು ಹೊರಗಡೆ ಅಂಗಡಿಗಳು ಚಾಲೂ ಇಲ್ಲ. ಹೀಗಾಗಿ ಮನೆಯಲ್ಲೇ ಇರುವ ಹೊಸ ಕಾಟನ್ ಬಟ್ಟೆಗಳನ್ನೇ ಮಾಸ್ಕ್ಗಾಗಿ ಬಳಸುತ್ತಿದ್ದಾರೆ. 3 ದಿನಗಳಿಂದ ಈ ಕೆಲಸ ಮಾಡುತ್ತಿರುವ ಇವರು ನಿತ್ಯ ಅಂದಾಜು 100 ಮಾಸ್ಕ್ಗಳನ್ನು ತಯಾರಿಸಿ ಬಡವರಿಗೆ ಹಂಚುತ್ತಾರೆ.
ಮನೆಗೆಲಸ ಪೂರ್ತಿ ಮುಗಿಸಿಕೊಂಡ ನಂತರವೇ ಹೊಲಿಯುವ, ಅಳತೆಗೆ ತಕ್ಕಂತೆ ಬಟ್ಟೆ ಕತ್ತರಿಸುವ ಕೆಲಸವನ್ನು ಸರದಿಯಂತೆ ಮಾಡುವ ಇವರು ಮಾಸ್ಕ್ಗೆ ಕಸಿಗಳನ್ನೂ ಸಹಿತ ತಾವೇ ತಯಾರಿಸುತ್ತಾರೆ. ಪಟ್ಟಣದ ಪೊಲೀಸ್ ಠಾಣೆಗೆ ತೆರಳಿ ಎಲ್ಲ ಪೊಲೀಸರಿಗೆ ಮಾಸ್ಕ್ಗಳನ್ನು ಹಂಚಿಕೆ ಮಾಡಿದ್ದಾರೆ.
ಹೊಲಿಗೆಯಂತ್ರ ಹೊಂದಿರುವ, ಹೊಲಿಗೆ ಕಲಿತಿರುವ ಮಹಿಳೆಯರು ತಮ್ಮ ಮನೆಯಲ್ಲೇ ಕುಳಿತು ಮಾಸ್ಕ್ಗಳನ್ನು ತಯಾರಿಸಿ ವಿತರಿಸಲು ಮುಂದಾದಲ್ಲಿ ಮಾರುಕಟ್ಟೆಯಲ್ಲಿ ಮಾಸ್ಕ್ಗಳ ದುಬಾರಿ ಬೆಲೆ ನಿಯಂತ್ರಿಸುವುದರ ಜೊತೆಗೆ ಮಾಸ್ಕ್ಗಳ ಕೊರತೆಯನ್ನೂ ನೀಗಿಸುವುದು ಸಾಧ್ಯವಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಸರಸ್ವತಿ ಅವರ ಮನೆಯಲ್ಲಿ ಹೊಲಿಗೆ ಯಂತ್ರ ಇದೆ. ನಮ್ಮ ಮನೆಯಲ್ಲಿ ಹೊಸ ಕಾಟನ್ ಬಟ್ಟೆ ಇವೆ. ಹೀಗಾಗಿ ಇಬ್ಬರೂ ಕೂಡಿ ಬಿಡುವಿನ ವೇಳೆಯಲ್ಲಿ ಈ ಕೆಲಸ ಮಾಡುತ್ತಿದ್ದೇವೆ. ಒಂದು ಮೀ. ಬಟ್ಟೆಯಲ್ಲಿ ಕಸಿಗಳೂ ಸೇರಿ ಅಂದಾಜು 20-25 ಮಾಸ್ಕ್ ತಯಾರಿಸಬಹುದು. ಇದು ನಮಗೆ ಸಮಾಜಸೇವೆಯ ತೃಪ್ತಿ ನೀಡಿದೆ. ಕೊರೊನಾ ನಿಯಂತ್ರಣಕ್ಕೆ ಕೈಲಾದ ನೆರವು ನೀಡಲು ಅವಕಾಶ ಕಲ್ಪಿಸಿದಂತಾಗಿದೆ.
●
ಗೌರಮ್ಮ ಹುನಗುಂದ,
ಸಮಾಜ ಸೇವೆ
ಡಿ.ಬಿ. ವಡವಡಗಿ