ಮುದ್ದೇಬಿಹಾಳ: ಕೋವಿಡ್ ನಮ್ಮನ್ನು ಬಿಟ್ಟು ಇನ್ನೂ ಹೋಗಿಲ್ಲ ಎನ್ನುವುದನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಮುಕ್ತ ಪರಿಸರದಲ್ಲಿ ಕಾರ್ಯಕ್ರಮ ಆಯೋಜಿಸುವುದನ್ನು ಎಲ್ಲರೂ ಪಾಲಿಸಬೇಕು ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.
ಇಲ್ಲಿನ ಎಪಿಎಂಸಿಯಲ್ಲಿರುವ ಕರ್ನಾಟಕ ಕೋ ಆಪ್ ಬ್ಯಾಂಕ್ ಸಭಾಭವನದಲ್ಲಿ ವೀರಮಹೇಶ್ವರ ತರುಣ ಸಂಘದ ಅಧ್ಯಕ್ಷ ಗೌರಿಶಂಕರ ಪುರಾಣಿಕಮಠ ಪರಿವಾರದಿಂದ ಶನಿವಾರ ಹಮ್ಮಿಕೊಂಡಿದ್ದ ಕೋವಿಡ್ ವಾರಿಯರ್ಗಳಿಗೆ ಗೌರವ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಅನೇಕ ಸಂಘ ಸಂಸ್ಥೆಗಳು, ವ್ಯಕ್ತಿಗಳು ಕೊರೊನಾ ಸಂದರ್ಭದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚಿ ಕಷ್ಟ ಬಂದಾಗ ಒಬ್ಬರಿಗೊಬ್ಬರು ಕೈಜೋಡಿಸಿ ಕೆಲಸ ಮಾಡಿದರೆ ಎಂಥ ಕಷ್ಟವನ್ನೂ ಜಯಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಸಹಾಯ ಮಾಡಲಾಗದವರು ಒಳ್ಳೆಯವರಿಗೆ ಪ್ರೋತ್ಸಾಹಿಸುವುದನ್ನಾದರೂ ಮಾಡಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಸಿ.ಎಸ್. ನಾಡಗೌಡ ಮಾತನಾಡಿ, ಕೋವಿಡ್ ವೈರಸ್ ಗಾಳಿಯೊಂದಿಗೆ ಸೇರಿ ಅನಾರೋಗ್ಯವನ್ನುಂಟು ಮಾಡುತ್ತದೆ. ಔಷಧಿ ಸಿಗುವವರೆಗೂ ಕೋವಿಡ್ ವಿರುದ್ಧ ಹೋರಾಟದ ಜವಾಬ್ದಾರಿಯನ್ನು ಎಚ್ಚರಿಕೆಯಿಂದ ನಿಭಾಯಿಸಬೇಕು. ಸರ್ಕಾರಗಳು ಸ್ಯಾನಿಟೈಸರ್‌ಗಳಿಗೆ ದುಬಾರಿ ಟ್ಯಾಕ್ಸ್ ಹಾಕುವುದನ್ನು ಕೈಬಿಡಬೇಕು. ವ್ಯವಹಾರ ಮಾಡುವ ಸರ್ಕಾರ ನಮಗೆ ಬೇಡ. ಜನರನ್ನು ಉದ್ಧಾರ ಮಾಡುವ ಸ್ವಾಮೀಜಿಗಳು, ಜನಾಂಗದ ಸೇವೆ ಮಾಡುವ ಜಂಗಮರು ಕೋವಿಡ್ ಜಾಗೃತಿ ಮೂಡಿಸಬೇಕು. ಕೋವಿಡ್ ಲಾಕ್‌ಡೌನ್ ವೇಳೆ ಸಾರಾಯಿ ದರ ಗಗನಕ್ಕೇರಿತ್ತು. ಹಣ್ಣು-ಹಂಪಲು ರಸ್ತೆಗೆ ಬಿದ್ದಿದ್ದವು. ಸಮಾಜ ಇಂಥ ಬೆಳವಣಿಗೆ ಬಗ್ಗೆ ಆಳವಾದ ಚಿಂತನೆ ನಡೆಸಬೇಕು. ಪಕ್ಷ ಮೀರಿ ನಿಂತು ಜನರನ್ನು ಮನುಷ್ಯರನ್ನಾಗಿ ನೋಡುವ ಕೆಲಸ ಆಗಬೇಕು ಎಂದರು. ಸನ್ಮಾನಿತರ ಪರವಾಗಿ ವಿಜಯಪುರ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ ಶಾರದಳ್ಳಿ ಮಾತನಾಡಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು, ಆರೋಗ್ಯ, ಪೊಲೀಸ್, ಕಂದಾಯ ಇಲಾಖೆ ಸಿಬ್ಬಂದಿ, ಪೌರ ಕಾರ್ಮಿಕರು, ಪತ್ರಕರ್ತರು ಸೇರಿದಂತೆ ಕೋವಿಡ್ ನಿಯಂತ್ರಣಕ್ಕೆ ಶ್ರಮಿಸಿದ್ದ 100ಕ್ಕೂ ಹೆಚ್ಚು ಜನರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಕೋವಿಡ್ ಯೋಧರಿಗೆ ಸನ್ಮಾನಿಸಿದ್ದಕ್ಕೆ ಗೌರವಾರ್ಥವಾಗಿ ಗೌರಿಶಂಕರ, ಜಯಲಕ್ಷ್ಮೀ ದಂಪತಿಯನ್ನು ದಾನಯ್ಯ ಹಿರೇಮಠ ಸನ್ಮಾನಿಸಿದರು.
ಬಸವನಬಾಗೇವಾಡಿ ಸಂಸ್ಥಾನಮಠ ಶಿವಪ್ರಕಾಶ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕವಡಿಮಟ್ಟಿಯ ಶ್ರೀದೇವಿ ಆರಾಧಕ ಬಸವಪ್ರಭು ಸ್ವಾಮೀಜಿ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಗೌರಿಶಂಕರ ಪುರಾಣಿಕಮಠ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ತಹಶೀಲ್ದಾರ್ ಜಿ.ಎಸ್. ಮಳಗಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಂಗಮೇಶ ಹೊಲ್ದೂರ, ತಾಲೂಕು ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ| ಅನಿಲಕುಮಾರ ಶೇಗುಣಸಿ, ತಾಪಂ ಸಹಾಯಕ ನಿರ್ದೇಶಕ ಪ್ರಕಾಶ ದೇಸಾಯಿ, ಆರ್‌ಬಿಎಸ್ ಕೆ ವೈದ್ಯಾಧಿಕಾರಿ ಡಾ| ಪ್ರವೀಣ ಸುಣಕಲ್ಲ, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ(ಚಿನ್ನು) ನಾಡಗೌಡ, ಜಯಲಕ್ಷ್ಮೀ ಪುರಾಣಿಕಮಠ ಇತರರು ಇದ್ದರು. ಗಾಯಕಿ ಸ್ಫೂರ್ತಿ ತೆಗ್ಗಿನಮಠ ಪ್ರಾರ್ಥಿಸಿದರು. ಲ್ಯಾಬ್ ಟೆಕ್ನೀಶಿಯನ್ ಎನ್.ಎಸ್. ಸಂಗಮ ಸ್ವಾಗತಿಸಿದರು. ಹಾಸ್ಯ ಕಲಾವಿದ ಗೋಪಾಲ ಹೂಗಾರ ನಿರೂಪಿಸಿದರು. ಎನ್.ಎಸ್. ಹಿರೇಮಠ ವಂದಿಸಿದರು.
ಕೋವಿಡ್ ನಿಯಂತ್ರಿಸುವಲ್ಲಿ ಪ್ರಾಮಾಣಿಕ ಸೇವೆ ಮಾಡಿರುವ ವಾರಿಯರ್ಗಳೆಲ್ಲರಿಗೂ ಪ್ರಧಾನಿ ನರೇಂದ್ರ ಮೋದಿ ಕೃತಜ್ಞತೆ ಹೇಳಿದ್ದಾರೆ. ನಾವೂ ಸಹಿತ ಅವರೆಲ್ಲರನ್ನೂ ಅಭಿನಂದಿಸಬೇಕು. ಒಳ್ಳೆಯ ಕೆಲಸ ಮಾಡುವವರನ್ನು ಪ್ರೋತ್ಸಾಹಿಸುವ ಗುಣ ಬೆಳೆಸಿಕೊಳ್ಳಬೇಕು. ಕೋವಿಡ್ ಬಂದ ಮೇಲೆ ಸರ್ಕಾರಿ ಆಸ್ಪತ್ರೆ ಮಹತ್ವ ಮರುಕಳಿಸಿದ್ದು ಹೆಮ್ಮೆಯ ಸಂಗತಿ.
ಎ.ಎಸ್. ಪಾಟೀಲ ನಡಹಳ್ಳಿ, ಶಾಸಕ