Advertisement

ಮಾನವೀಯ ಮೌಲ್ಯ ಬೆಳೆಸಿ

07:45 PM Jan 11, 2020 | Naveen |

ಮುದ್ದೇಬಿಹಾಳ: ಮಕ್ಕಳನ್ನು ಉತ್ತಮ, ಯಶಸ್ವಿ ನಾಗರಿಕರನ್ನಾಗಿ ರೂಪಿಸುವುದು ಶಿಕ್ಷಕರ ಕೈಯಲ್ಲಿದೆ. ಶಿಕ್ಷಕರು ಮಕ್ಕಳ ಪಾಲಿಗೆ ಸೂರ್ಯ ಚಂದ್ರರಿದ್ದಂತೆ. ಅವರನ್ನು ದೃವ ನಕ್ಷತ್ರಗಳಂತೆ ಬೆಳಗಿಸುವ ಜವಾಬ್ದಾರಿ ಶಿಕ್ಷಕರದ್ದಾಗಿರುತ್ತದೆ ಎಂದು ನಿವೃತ್ತ ಡಿಡಿಪಿಐ ಎಸ್‌.ವೈ. ಹಳಿಂಗಳಿ ಹೇಳಿದ್ದಾರೆ.

Advertisement

ಪಟ್ಟಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಪಂ, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಕಾರ್ಯಾಲಯ ವತಿಯಿಂದ ಹಮ್ಮಿಕೊಂಡಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮುಖ್ಯೋಪಾಧ್ಯಾಯರಿಗೆ ಆಡಳಿತಾತ್ಮಕ ಹಾಗೂ ಗುಣಾತ್ಮಕ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕ ವೃತ್ತಿ ಪವಿತ್ರವಾದದ್ದು. ನಮಗೆ ಅನ್ನ ನೀಡುವಂಥದ್ದು. ಇದನ್ನು ಗೌರವಿಸುವುದು ಪ್ರತಿಯೊಬ್ಬ ಶಿಕ್ಷಕನ ಕರ್ತವ್ಯವಾಗಬೇಕು. ಆತ್ಮಸಾಕ್ಷಿಗನುಗುಣವಾಗಿ ಅತ್ಯಂತ
ಜವಾಬ್ದಾರಿಯಿಂದ ಮಕ್ಕಳಿಗೆ ಪಾಠ ಹೇಳುವ ಕೆಲಸವನ್ನು ಮಾಡಬೇಕು. ಶಾಲೆಯಲ್ಲೇ ಓದಿ ಅಲ್ಲೇ ಹೇಳುವುದನ್ನು ಕೈ ಬಿಟ್ಟು
ಮುಂಚಿತವಾಗಿಯೇ ಮನೆಯಲ್ಲಿ ಆವತ್ತಿನ ಪಾಠವನ್ನು ಓದಿಕೊಂಡು ಬಂದು ಹೇಳುವುದು ಶಿಕ್ಷಕರಿಗೂ ಉಪಯುಕ್ತವಾದಂತಾಗುತ್ತದೆ. ಶಿಕ್ಷಣದ ಜೊತೆ ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು ಎಂದರು.

ಅನಕ್ಷರಸ್ಥ ಮಗು ಶಾಲೆಗೆ ಬಂದು ವಿದ್ಯಾವಂತನಾಗಿ ಹೋಗಬೇಕೇ
ಹೊರತು ವಿದ್ಯಾವಂತ ಮಗು ಶಾಲೆಗೆ ಬಂದ ಮೇಲೆ ಅನಕ್ಷರಸ್ಥನಾಗಿ ಹೊರ ಹೋಗುವಂತಾಗಬಾರದು. ಮಕ್ಕಳ ಕಲಿಕಾ ಚಟುವಟಿಕೆ ಜೊತೆಗೆ ಅವರ ಆರೋಗ್ಯ ಕಾಳಜಿಯನ್ನೂ ಶಿಕ್ಷಕರು ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಬಿಇಒ ಎಸ್‌.ಡಿ. ಗಾಂಜಿ ಮಾತನಾಡಿ, ನಿವೃತ್ತ ಡಿಡಿಪಿಐ ಅವರು ಇಲ್ಲೇ ಬಿಇಒ ಆಗಿ ಉತ್ತಮ ಸೇವೆ ಸಲ್ಲಿಸಿದ್ದ ಮೇರು ವ್ಯಕ್ತಿತ್ವ ಹೊಂದಿದ ದಕ್ಷ ಅಧಿಕಾರಿ ಎನ್ನಿಸಿಕೊಂಡಿದ್ದರು. ಬೆಳಗಾವಿಯಲ್ಲಿ ಅವರು ಡಿಡಿಪಿಐ ಆಗಿದ್ದಾಗ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮಕ್ಕಳನ್ನು ಹೇಗೆ ತಯಾರಿಸಿದ್ದರು ಅನ್ನೋದು ಇತರರಿಗೆ ಮಾದರಿ ಆದಂಥದ್ದಾಗಿದೆ ಎಂದರು.

Advertisement

ಬಿಇಒ ಕಚೇರಿ ಸಭಾಂಗಣದಲ್ಲಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರಿಗಾಗಿ, ಜ್ಞಾನಭಾರತಿ ವಿದ್ಯಾಮಂದಿರದಲ್ಲಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರಿಗಾಗಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಎರಡೂ ಕಾರ್ಯಾಗಾರಗಳಲ್ಲಿ ಕ್ಷೇತ್ರ ಸಮನ್ವಯಾ ಧಿಕಾರಿ ಯು.ಬಿ. ಧರಿಕಾರ, ದೈಹಿಕ ಶಿಕ್ಷಣ ಪರಿವೀಕ್ಷಕ ಎಚ್‌.ಎಲ್‌. ಕರಡ್ಡಿ, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಸಂಗಮೇಶ ಹೊಲ್ದೂರ, ನಿವೃತ್ತ ದೈಹಿಕ ಪರಿವೀಕ್ಷಕ ಎಚ್‌.ಎಲ್‌. ಕರಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್‌.ಎಸ್‌. ಬಾಣಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಬಾಲಚಂದ್ರ ನಡುವಿನಮನಿ, ನಿವೃತ್ತ ಶಿಕ್ಷಣಾಧಿ ಕಾರಿ ಎಸ್‌.ಎಸ್‌. ಠಾಣೇದ, ಬಿಆರ್‌ಪಿ, ಸಿಆರ್‌ಪಿ, ಶಿಕ್ಷಣ ಸಂಯೋಜಕರು, ಮುಖ್ಯೋಪಾಧ್ಯಾಯರು ಪಾಲ್ಗೊಂಡಿದ್ದರು.

ಬಿಇಒ ಎಸ್‌.ಡಿ. ಗಾಂಜಿ ಸ್ವಾಗತಿಸಿದರು. ಸಿಆರ್‌ಪಿ ಟಿ.ಡಿ. ಲಮಾಣಿ ನಿರೂಪಿಸಿದರು. ಬಿಆರ್‌ಸಿಸಿ ಯು.ಬಿ. ಧರಿಕಾರ ಪ್ರಾಸ್ತಾವಿಕ ಮಾತನಾಡಿದರು. ಎಚ್‌.ಎಲ್‌. ಕರಡ್ಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next