Advertisement

ಬಲವಂತದ ಹಣ ವಸೂಲಿಗೆ ಕಡಿವಾಣ ಹಾಕಲು ಆಗ್ರಹ

12:15 PM Mar 11, 2020 | Naveen |

ಮುದ್ದೇಬಿಹಾಳ: ತಾಲೂಕಿನ ಆಲಮಟ್ಟಿ ರಸ್ತೆಯಲ್ಲಿರುವ ಗೆದ್ದಲಮರಿ ತಾಂಡಾ ಬಳಿ 3-4 ಕಡೆ ಲಂಬಾಣಿ ಯುವಕರ ತಂಡ ಗುಂಪು ಕಟ್ಟಿಕೊಂಡು ಹೋಳಿ ಹಬ್ಬದ ರಂಗಿನಾಟ ನೆಪದಲ್ಲಿ ವಾಹನಗಳನ್ನು ತಡೆದು ಬಲವಂತವಾಗಿ ಹಣ ವಸೂಲಿ ಮಾಡುತ್ತಿರುವುದಕ್ಕೆ ಪೊಲೀಸರು ಕಡಿವಾಣ ಹಾಕಬೇಕು ಎಂದು ಪ್ರಯಾಣಿಕರು, ವಾಹನ ಸವಾರರು ಆಗ್ರಹಿಸಿದ್ದಾರೆ.

Advertisement

ಈ ರಸ್ತೆಯಲ್ಲಿ ಅಂದಾಜು 4-5 ಲಂಬಾಣಿ ತಾಂಡಾ ಇವೆ. ಈ ತಾಂಡಾಗಳಲ್ಲಿರುವ ಯುವಕರು ರಸ್ತೆಯುದ್ದಕ್ಕೂ ಅಲ್ಲಲ್ಲಿ ಗುಂಪು ಕಟ್ಟಿಕೊಂಡು ಹಲಗೆ ಬಾರಿಸುತ್ತ ರಸ್ತೆಗೆ ಅಡ್ಡಲಾಗಿ ಕಲ್ಲು, ಮುಳ್ಳು ಕಂಟಿ ಇಟ್ಟು ದ್ವಿಚಕ್ರ ವಾಹನ ಸೇರಿದಂತೆ ಎಲ್ಲ ರೀತಿಯ ವಾಹನ ತಡೆಗಟ್ಟುತ್ತಾರೆ.

ಹೋಳಿ ಹಬ್ಬದ ಖುಷಿ ಕೊಡಬೇಕು ಎಂದು ಬಲವಂತ ಮಾಡುತ್ತಾರೆ. ಕೊಡದಿದ್ದರೆ ಬಣ್ಣ ಹಾಕುವ ಬೆದರಿಕೆ ಒಡ್ಡುತ್ತಾರೆ. ಈ ಬಗ್ಗೆ ಪ್ರಶ್ನಿಸಿದರೆ ಗುಂಪು ಕಟ್ಟಿಕೊಂಡು ಜಗಳಕ್ಕೆ ಬರುತ್ತಾರೆ ಮಾತ್ರವಲ್ಲದೆ ಹಲ್ಲೆ ನಡೆಸಲೂ ಮುಂದಾಗುತ್ತಾರೆ ಎಂದು ತೊಂದರೆ ಅನುಭವಿಸಿದ ಪ್ರಯಾಣಿಕರು, ವಾಹನ ಸವಾರರು ಸುದ್ದಿಗಾರರ ಬಳಿ ಗೋಳು ತೋಡಿಕೊಂಡಿದ್ದಾರೆ.

ಹೋಳಿ ಹಬ್ಬವನ್ನು ಸೌಹಾರ್ದಯುತವಾಗಿ ಆಚರಿಸಬೇಕು, ಯಾರಿಗೂ ಅವರ ಇಚ್ಛೆಗೆ ವಿರುದ್ಧವಾಗಿ ಬಣ್ಣ ಹಾಕಬಾರದು ಎನ್ನುವ ಸತ್ಸಂಪ್ರದಾಯವನ್ನು ಹಿರಿಯರು ಪಾಲಿಸಿಕೊಂಡು ಬಂದಿದ್ದರು. ಆದರೆ ಇಂದಿನ ಯುವಕರು ಆ ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟು ಹಣ ವಸೂಲಿಯನ್ನೇ ದಂಧೆ ಮಾಡಿಕೊಂಡಿರುವುದು ಸಮಾಜ ಮತ್ತು ಯುವಕರು ಎತ್ತ ಸಾಗುತ್ತಿದ್ದಾರೆ ಎನ್ನುವದಕ್ಕೆ ಉದಾಹರಣೆಯಾಗಿದೆ ಎಂದು ನೋವು ತೋಡಿಕೊಂಡರು.

ತುರ್ತು ಕಾರ್ಯನಿಮಿತ್ತ ಸಂಚರಿಸುವ ಸಾರ್ವಜನಿಕರು ಅನಿವಾರ್ಯವಾಗಿ ಹಣ ಕೊಟ್ಟು ಇವರ ಕಾಟದಿಂದ ತಪ್ಪಿಸಿಕೊಳ್ಳುತ್ತಾರೆ. ಇನ್ನಿತರ ಬೇರೆ ಬೇರೆ ಕಾರಣಗಳಿಗಾಗಿ ಸಂಚರಿಸುವವರು ಇವರೊಂದಿಗೆ ವಾದಕ್ಕಿಳಿಯುತ್ತಾರೆ. ಆಗ ಯುವಕರ ತಂಡ ವಾಹನದ ಮೇಲೆ ಹತ್ತಿ ಕಿರುಚಾಟ, ಚೀರಾಟ ನಡೆಸಿ ಭಯದ ವಾತಾವರಣ ಸೃಷ್ಟಿಸುತ್ತಾರೆ. ವಾಹನಕ್ಕೂ ಮತ್ತು ಅದರಲ್ಲಿರುವ ಪ್ರಯಾಣಿಕರಿಗೂ ಬಣ್ಣ ಎರಚಿ ವಿಕೃತ ಮನೋಭಾವ ಪ್ರದರ್ಶಿಸುತ್ತಾರೆ ಎಂದು ಅವರು ದೂರಿದ್ದಾರೆ.

Advertisement

ಈ ತಾಂಡಾಗಳಲ್ಲಿ ಇರುವ ಹಿರಿಯರು ಯುವಕರಿಗೆ ಹೀಗೆ ಮಾಡದಂತೆ ಬುದ್ಧಿ ಹೇಳಲು ಮುಂದಾಗುತ್ತಿಲ್ಲ. ಯಾರಾದರೊಬ್ಬ ಹಿರಿಯರು ಸ್ಥಳದಲ್ಲಿ ಕಾಣಿಸಿಕೊಂಡರೆ ಏನೋ ಹುಡುಗ್ರು ಹಬ್ಬದ ಖುರ್ಷಿ ಕೇಳ್ತಾರೆ ಕೊಟ್ಟು ಹೋಗ್ರಿ ಎಂದು ಯುವಕರ ಪರವಾಗಿಯೇ ಮಾತನಾಡಿ ತಾವೂ ಕಲುಷಿತಗೊಂಡಿರುವುದನ್ನು ತೋರಿಸಿಕೊಡುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಈ ಪರಿಸ್ಥಿತಿ ಮುದ್ದೇಬಿಹಾಳದಿಂದ ಹೊರಡುವ ತಂಗಡಗಿ, ಢವಳಗಿ, ನಾಲತವಾಡ ರಸ್ತೆಗಳ ಮೂಲೂ ಕಂಡುಬರುತ್ತಿದೆ. ಆದರೆ ತಾಂಡಾಗಳಲ್ಲಿ ಮಾತ್ರ ಇದು ಮಿತಿ ಮೀರಿದ್ದು ಅಕ್ಷರಶಃ ದೌರ್ಜನ್ಯ, ಬಲವಂತ ನಡೆಸುವ ಘಟನೆಗಳು ಕಂಡುಬಂದಿವೆ. ಕೆಲ ಸಂದರ್ಭ ವೇಗವಾಗಿ ಬರುವ ವಾಹನಗಳ ಎದುರು ದಿಢಿರ್‌ ಹಲಗೆ ಬಾರಿಸುತ್ತ ಪ್ರತ್ಯಕ್ಷರಾಗುವ ಯುವಕರ ದಂಡು ವಾಹನದ ಬ್ರೇಕ್‌ ಫೇಲಾದಲ್ಲಿ ಅದರ ಕೆಳಗೆ ಸಿಕ್ಕು ಗಂಭೀರ ಪರಿಣಾಮ ಎದುರಿಸುವ ಸಂಭವ ಅಲ್ಲಗಳೆಯುವಂತಿಲ್ಲ ಎಂದು ತಿಳಿಸಿದ್ದಾರೆ.

ಬುಧವಾರವೂ ಎರಡನೇ ದಿನದ ಹೋಳಿ ರಂಗಿನಾಟ ಎಲ್ಲ ಕಡೆ ನಡೆಯಲಿದೆ. ಆಯಾ ಬೀಟ್‌ಗೆ ನೀಮಿಸಿರುವ ಬೀಟ್‌ ಪೊಲೀಸರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಪೊಲೀಸ್‌ ಅಧಿಕಾರಿಗಳಿಗೆ ಸರ್ಕಾರ ತಿರುಗಾಟಕ್ಕೆ ವಾಹನ ಕೊಟ್ಟಿದ್ದು ಅದರ ಬಳಕೆ ಇಂಥ ಸಂದರ್ಭಗಳಲ್ಲಿ ಸರಿಯಾಗಿ ಆಗುತ್ತಿಲ್ಲ. ಮಂಗಳವಾರ ಸಾರ್ವಜನಿಕರ ದೂರು ಪರಿಗಣಿಸಿ ಪೊಲೀಸ್‌ ಅಧಿಕಾರಿಗಳು ಬೀಟ್‌ ಪೊಲೀಸರನ್ನು ಎಚ್ಚರಗೊಳಿಸಿದ್ದಾರೆ. ಬುಧವಾರ ಮಾತ್ರ ರಸ್ತೆಯಲ್ಲಿ ವಸೂಲಿ ದಂಧೆ ನಡೆಯದಂತೆ ಸೂಕ್ತ ಪೆಟ್ರೋಲಿಂಗ್‌ ನಡೆಸಿ ಸಾರ್ವಜನಿಕ ಪ್ರಯಾಣಿಕರನ್ನು ಪ್ರಯಾಸದಿಂದ ಮುಕ್ತರನ್ನಾಗಿ ಮಾಡಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next