ಮುದ್ದೇಬಿಹಾಳ: ಈಚೆಗೆ ಕೃಷ್ಣಾ ನದಿಗೆ ಪ್ರವಾಹ ಬಂದು ಜಲಾವೃತಗೊಂಡಿದ್ದ ಮುದ್ದೇಬಿಹಾಳ ತಾಲೂಕಿನ ದೇವೂರ ಗ್ರಾಮದಲ್ಲಿ ಹಾನಿಗೊಳಗಾದ ಮನೆಗಳ ಸಮೀಕ್ಷೆ ನಡೆಸುವಲ್ಲಿ ನೋಡಲ್ ಅಧಿಕಾರಿಗಳ ತಂಡ ಮಲತಾಯಿ ಧೋರಣೆ ತೋರಿದ್ದು ಮೊದಲಿನ ಸಮೀಕ್ಷೆ ವರದಿ ಕೈ ಬಿಟ್ಟು ಇನ್ನೊಮ್ಮೆ ಮರು ಸಮೀಕ್ಷೆ ನಡೆಸಿ ನೈಜ ಹಾನಿ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿ ಆ ಗ್ರಾಮದ ಸಂತ್ರಸ್ತರು ಶನಿವಾರ ಇಲ್ಲಿನ ತಹಶೀಲ್ದಾರ್ ವಿನಯಕುಮಾರ ಪಾಟೀಲ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕೃಷ್ಣಾ ನದಿ ಪ್ರವಾಹ ಸಂದರ್ಭ ದೇವೂರ ಗ್ರಾಮ ಹೆಚ್ಚು ಬಾಧಿತವಾಗಿದೆ. ಊರೊಳಕ್ಕೆ ನೀರು ನುಗ್ಗಿ ಬಹಳಷ್ಟು ಮನೆಗಳು ಹಾನಿಗೊಳಗಾಗಿ ಜಖಂಗೊಂಡಿವೆ. ಆದರೆ ಈ ಬಗ್ಗೆ ನಡೆಸಿದ ಮನೆ ಹಾನಿ ಸಮೀಕ್ಷೆ ಸಮರ್ಪಕವಾಗಿಲ್ಲ. ಹಲವರಿಗೆ ಅನ್ಯಾಯ ಆಗಿದೆ. ಕೆಲವರ ಹೆಸರು ಬಿಟ್ಟು ಹೋಗಿದೆ. ಹೀಗಾಗಿ ಈ ಗ್ರಾಮದ ಮನೆಗಳ ಮರು ಸಮೀಕ್ಷೆ ನಡೆಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನೋಡಲ್ ಅಧಿಕಾರಿಯಾಗಿದ್ದ ವಿಜಯಪುರದ ಪದವಿ ಪೂರ್ವ ಕಾಲೇಜು ಉಪ ನಿರ್ದೇಶಕ ಜೆ.ಎಸ್. ಪೂಜೇರಿ ನೇತೃತ್ವದ ಪಿಡಿಒ, ಗ್ರಾಮ ಲೆಕ್ಕಿಗ, ಇಬ್ಬರು ಎಂಜಿನಿಯರ್‌ಗಳ ತಂಡ ಸರಿಯಾಗಿ ಸಮೀಕ್ಷೆ ನಡೆಸಿಲ್ಲ. ನೈಜ ಹಾನಿ ಬಿಟ್ಟು ತಮ್ಮ ಮನಸ್ಸಿಗೆ ಬಂದಂತೆ ವರದಿ ತಯಾರಿಸಿದ್ದಾರೆ. ಆ ಸಮೀಕ್ಷೆಯಲ್ಲಿ ತಾರತಮ್ಯ ಆಗಿದೆ. ಹೀಗಾಗಿ ಮೊದಲಿನ ತಂಡ ಬದಲಾಯಿಸಿ ಬೇರೊಬ್ಬ ನೋಡಲ್ ಅಧಿಕಾರಿ ಮತ್ತು ತಂಡ ರಚಿಸಿ ಮರು ಸಮೀಕ್ಷೆ ನಡೆಸಬೇಕು ಎಂದು ಕೋರಿದರು.
ಪೂಜೇರಿ ನೇತೃತ್ವದ ತಂಡ ನೀಡಿದ ಸಮೀಕ್ಷೆ ವರದಿ ಆಧರಿಸಿ ಹಾನಿಗೀಡಾದ ಮನೆಗಳಿಗೆ ಪರಿಹಾರ ನೀಡಲು ಚೆಕ್ ಬರೆಯಲಾಗಿದೆ. ಆದರೆ ಮರು ಸಮೀಕ್ಷೆ ನಡೆದು ನೈಜ ಪರಿಹಾರಕ್ಕೆ ಶಿಫಾರಸು ಆಗುವವರೆಗೂ ಈಗ ಸಿದ್ಧಪಡಿಸಿರುವ ಚೆಕ್‌ಗಳನ್ನು ವಿತರಿಸಬಾರದು. ಒಂದು ವೇಳೆ ಗ್ರಾಮಸ್ಥರ ಮನವಿ ನಿರ್ಲಕ್ಷಿಸಿ ಚೆಕ್ ವಿತರಿಸಲು ಮುಂದಾದರೆ, ಮರು ಸಮೀಕ್ಷೆ ನಡೆಸಲು ಕ್ರಮ ಕೈಗೊಳ್ಳದಿದ್ದರೆ ಅನ್ಯಾಯ ಪ್ರತಿಭಟಿಸಿ ತಹಶೀಲ್ದಾರ್ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್, ಸರ್ಕಾರದ ನಿಯಮದ ಪ್ರಕಾರವೇ ಸಮೀಕ್ಷೆ ನಡೆಸಿ ವರದಿ ತಯಾರಿಸಲಾಗಿದೆ. ಸರ್ಕಾರದ ನಿರ್ದೇಶನದಂತೆ ಶೇ. 15ಕ್ಕಿಂತ ಕಡಿಮೆ ಹಾನಿಗೀಡಾದ ಮನೆಗಳಿಗೆ ಸದ್ಯ್ಯಕ್ಕೆ ಪರಿಹಾರ ಕೊಡುತ್ತಿಲ್ಲ. ಶೇ. 15ರಿಂದ 25ರೊಳಗಿನ ಹಾನಿಗೆ 25,000 ರೂ., ಶೇ. 25ರಿಂದ 75ರವರೆಗಿನ ಹಾನಿಗೆ 1 ಲಕ್ಷ ರೂ., ಪೂರ್ತಿ ಹಾನಿಗೆ 5 ಲಕ್ಷ ರೂ. ಮತ್ತು ಕೊಟ್ಟಿಗೆಗೆ 2,100 ರೂ., ಗುಡಿಸಲಿಗೆ 4,000 ರೂ. ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ತಾಲೂಕಿನಲ್ಲಿ ಶೇ. 15ರಿಂದ 25ರೊಳಗಿನ ಹಾನಿ ಪ್ರಮಾಣವೇ ಹೆಚ್ಚಾಗಿದೆ. ಆದರೂ ಮನವಿ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಮನವಿ ಸಲ್ಲಿಸುವಾಗ ಗ್ರಾಮದ 30ಕ್ಕೂ ಹೆಚ್ಚು ಸಂತ್ರಸ್ತರು ಇದ್ದರು.