Advertisement

ಶವ ಹುಡುಕಲು ಹೋದವರು ಶಾರ್ಟ್ ಸರ್ಕ್ಯೂಟ್‌ಗೆ ಬಲಿ : ಕೃಷ್ಣಾ ನದಿಯಲ್ಲಿ ನಾಲ್ವರ ದುರ್ಮರಣ

06:38 PM Oct 07, 2021 | Team Udayavani |

ಮುದ್ದೇಬಿಹಾಳ : ಜಿಲ್ಲೆಯ ಕೃಷ್ಣಾ ನದಿಯಲ್ಲಿ ಈಜಲು ಹೋಗಿ, ನೀರು ಪಾಲಾದ ವ್ಯಕ್ತಿಯ ಶವ ಹುಡುಕಲು ಹೋಗಿದ್ದ ಮೂವರು ವಿದ್ಯುತ್ ಶಾರ್ಟ್ ಸಕ್ಯೂರ್ಟ್‌ಗೆ ಬಲಿಯಾಗಿ, ಒಟ್ಟು ನಾಲ್ವರು ಮೃತಪಟ್ಟ ಧಾರುಣ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರ ಹತ್ತಿರದ ಕೃಷ್ಣಾ ನದಿಯಲ್ಲಿ ಗುರುವಾರ ಸಂಜೆ ಸಂಭವಿಸಿದೆ.

Advertisement

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹರನಾಳದ ಶಿವಪ್ಪ ಸಿದ್ದಪ್ಪ ಅಬಳೂರ (78) ಎಂಬಾತ ಕೃಷ್ಣಾ ನದಿಯಲ್ಲಿ ಈಜಲು ಹೋದಾಗ ಮೃತಪಟ್ಟಿದ್ದರು. ಈ ವೃದ್ಧನ ಮೃತ ದೇಹ ಹುಡುಕಲು ಹೋದ ಮೊಮ್ಮಗ ಶರಣಗೌಡ ಭೀಮನಗೌಡ ಪಾಟೀಲ (45), ಮೃತ ವ್ಯಕ್ತಿಯ ಸಹೋದರನ ಪುತ್ರ ಯಮನಪ್ಪ ಅಬಳೂರ (35) ಹಾಗೂ ಬೋಟ್ ಚಾಲಕ, ಕೂಡಲಸಂಗಮದ ಪರಸಪ್ಪ ಚನ್ನಪ್ಪ ತಳವಾರ (30) ಎಂಬುವವರು ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ಗೆ ಬಲಿಯಾಗಿದ್ದಾರೆ.

ಹರನಾಳದ ಶಿವಪ್ಪ ಅಬಳೂರ ಅವರು ಕೃಷ್ಣಾ ನದಿಯಲ್ಲಿ ಈಜಲು ಹೋಗಿದ್ದರು. ಆಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಅವರ ಶವ ಶೋಧಕ್ಕಾಗಿ ಬೋಟ್‌ನಲ್ಲಿ ಶರಣಪ್ಪ, ಯಮನಪ್ಪ ಮತ್ತು ಪರಸಪ್ಪ ಅವರು ತೆರಳಿದ್ದರು. ಈ ವೇಳೆ ನಾರಾಯಣಪುರ ಹಿನ್ನೀರ ವ್ಯಾಪ್ತಿಯ ಮುಳುಗಡೆ ಪ್ರದೇಶದಲ್ಲಿ ವಿದ್ಯುತ್ ಕಂಬಗಳಿವೆ. ಅದರಲ್ಲಿ ವಿದ್ಯುತ್ ಸಂಚಾರವಿದ್ದು, ತಂತಿಯ ಸಮ ಪ್ರಮಾಣದಲ್ಲಿ ಹಿನ್ನೀರು ಇದೆ. ಈ ವೇಳೆ ಬೋಟ್‌ನಲ್ಲಿದ್ದ ಮೂವರು, ಶವ ಶೋಧ ನಡೆಸುವ ಆತಂಕದಲ್ಲಿ ವಿದ್ಯುತ್ ಕಂಬ ಗಮನಿಸದೇ ವಿದ್ಯುತ್ ಕಂಬದ ಬಳಿ ಹೋಗಿದ್ದಾರೆ. ಈ ವೇಳೆ ವಿದ್ಯುತ್ ತಗುಲಿ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆದರೆ, ಗುರುವಾರ ಸಂಜೆಯ ವರೆಗೂ ಈ ಮೂವರ ಶವ ಹುಡುಕಾಟ ಮುಂದುವರೆದಿದೆ.

ಸದ್ಯಕ್ಕೆ ಮುದ್ದೇಬಿಹಾಳ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು, ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಹುನಗುಂದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ. ಘಟನಾ ಸ್ಥಳಕ್ಕೆ ಮುದ್ದೇಬಿಹಾಳ ಸಿಪಿಐ ಆನಂದ ವಾಘಮೋಡೆ, ಪಿಎಸೈ ರೇಣುಕಾ ಜಕನೂರ, ತಂಗಡಗಿ ಗ್ರಾಪಂ ಪಿಡಿಓ ಉಮೇಶ ರಾಠೋಡ ಭೇಟಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next