Advertisement

ಮುದ್ದೇಬಿಹಾಳ : ಹುಣಸೆ ಹಣ್ಣಿನ ಆಸೆಗೆ ವಿವಾಹಿತೆ ಬಲಿ…ಮುಗಿಲು ಮುಟ್ಟಿದ ಆಕ್ರಂದನ

07:28 PM Nov 02, 2022 | Team Udayavani |

ಮುದ್ದೇಬಿಹಾಳ: ಹೊಟ್ಟೆಪಾಡಿಗಾಗಿ ಕಬ್ಬು ಕಟಾವು ಕಾರ್ಮಿಕಳಾಗಿ ದುಡಿಯಲು ಕುಟುಂಬ ಸಮೇತ ಬಂದಿದ್ದ ವಿವಾಹಿತೆಯೊಬ್ಬಳು ಅಡುಗೆಯಲ್ಲಿ ಬಳಸಲು ಮರದಲ್ಲಿದ್ದ ಹುಣಸೆ ಹಣ್ಣು ಕೀಳುವಾಗ ಆಯತಪ್ಪಿ ಬಿದ್ದು ಪ್ರಾಣವನ್ನೇ ಬಲಿಕೊಟ್ಟು ಇಬ್ಬರು ಪುಟ್ಟ ಕಂದಮ್ಮಗಳನ್ನು ಅನಾಥರನ್ನಾಗಿ ಮಾಡಿದ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಢವಳಗಿಯಲ್ಲಿ ಬುಧವಾರ ನಡೆದಿದೆ.

Advertisement

ಮೃತಳನ್ನು ಯಾದಗಿರಿ ಜಿಲ್ಲೆ ಹುಣಚಗಿ ತಾಲೂಕು ಗೆದ್ದಲಮರಿ ಗ್ರಾಮದ ಪರಮವ್ವ ಮಲ್ಲಪ್ಪ ಕುರಿ (24) ಎಂದು ಗುರ್ತಿಸಲಾಗಿದೆ.

ಈಕೆಗೆ ಪತಿ, ಇಬ್ಬರು ಪುಟ್ಟ ಮಕ್ಕಳು ಇದ್ದಾರೆ. ಢವಳಗಿ ಭಾಗದ ಹೊಲಗಳಲ್ಲಿ ಕಬ್ಬು ಕಟಾವು ಮಾಡಲು ಬಂದಿರುವ ತಂಡದಲ್ಲಿ ಇವಳ ಕುಟುಂಬ ಕೂಲಿಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

ಢವಳಗಿಯಲ್ಲಿ ಕಟಾವು ಮುಗಿಸಿ ಬಸವನ ಬಾಗೇವಾಡಿ ತಾಲೂಕು ಕಾನ್ಯಾಳದ ಜಮೀನಿಗೆ ಕಬ್ಬು ಕಟಾವು ಮಾಡಲು ಡಬಲ್ ಟ್ರ್ಯಾಲಿ ಟ್ರ್ಯಾಕ್ಟರಿನಲ್ಲಿ ಸಹ ಕಾರ್ಮಿಕರು, ಕುರಿಗಳು, ಮಕ್ಕಳ ಸಮೇತ ಹೊರಟಿದ್ದರು. ಗ್ರಾಮದ ಸರ್ಕಾರಿ ಹಾಸ್ಟೇಲ್ ಪಕ್ಕದ ರಸ್ತೆಯಲ್ಲಿ ಹುಣಸೆ ಮರ ಕಂಡು ಅದರಲ್ಲಿ ಬೆಳೆದಿದ್ದ ಹುಣಸೆ ಹಣ್ಣು ಕೀಳಲು ಪರಮವ್ವ ಮುಂದಾಗಿದ್ದಾಳೆ. ಟ್ರ್ಯಾಲಿಯಲ್ಲಿ ಉರುವಲು ಕಟ್ಟಿಗೆ ಮುಂತಾದ ಸಾಮಗ್ರಿ ತುಂಬಿದ್ದರಿಂದ ಆಕೆಗೆ ಹಣ್ಣು ಕೀಲುವುದು ಸುಲಭವಾಗಿತ್ತು. ಮರದ ಟೊಂಗೆಯಲ್ಲಿದ್ದ ಹುಣಸೆ ಹಣ್ಣನ್ನು ಕೈಯಲ್ಲಿ ಹಿಡಿದು ಕಿತ್ತಬೇಕೆನ್ನುವಷ್ಟರಲ್ಲಿ ವಾಹನ ಮುಂದಕ್ಕೆ ಚಲಿಸಿದೆ. ಏಕಾಏಕಿ ಆಯತಪ್ಪಿ ನೆಲಕ್ಕೆ ಬಿದ್ದಾಗ ಹಿಂದಿನ ಟ್ರ್ಯಾಲಿಯ ಚಕ್ರದ ಅಡಿಗೆ ಸಿಕ್ಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಇದನ್ನೂ ಓದಿ : ಅನಧಿಕೃತ ನಿರ್ಮಾಣ: ಬಿಜೆಪಿ ಸಂಸದ ಗಂಭೀರ್‌ ಅವರಿಗೆ ಕೋರ್ಟ್ ಸಮನ್ಸ್

Advertisement

ತಮ್ಮ ಎದುರೇ ನಡೆದ ಘಟನೆಯಿಂದ ಮೃತಳ ಪತಿ, ಪತಿಯ ಸಹೋದರ, ಮಕ್ಕಳು, ಸಹ ಕಾರ್ಮಿಕರು ಆಘಾತಕ್ಕೊಳಗಾಗಿದ್ದಾರೆ. ಘಟನೆ ಕುರಿತು ಮೃತಳ ಪತಿ ಮಲ್ಲಪ್ಪ ಕುರಿ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಟ್ರ್ಯಾಕ್ಟರ್ ಚಾಲಕ ಪರಶುರಾಮ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿದ್ದಾನೆ. ಪಿಎಸೈ ಆರೀಫ ಮುಷಾಪುರೆ, ಹಣಮಂತ ಸುತಗುಂಡಾರ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಕೊಂಡಿದ್ದಾರೆ.

ಮಲ್ಲಮ್ಮಳ ದುರಾದೃಷ್ಟಕ್ಕೆ ಅಲ್ಲಿ ಸೇರಿದ್ದವರೆಲ್ಲ ಮಮ್ಮಲ ಮರುಗಿದ್ದು ಕೇಳಿಬಂತು.

Advertisement

Udayavani is now on Telegram. Click here to join our channel and stay updated with the latest news.

Next