Advertisement

ಕೊರೊನಾ ಜನಜಾಗೃತಿ ಜಾಥಾ

12:11 PM Mar 19, 2020 | Naveen |

ಮುದ್ದೇಬಿಹಾಳ: ಪಟ್ಟಣದಲ್ಲಿ ಗುರುವಾರ ನಡೆಯುವ ವಾರದ ಸಂತೆಯನ್ನು ನಿಷೇಧಿಸಲಾಗಿದ್ದು ಸಾರ್ವಜನಿಕರು ಯಾರೂ ಸಂತೆ ಸ್ಥಳಕ್ಕೆ ಬರಬಾರದು. ಗ್ರಾಮೀಣ ಭಾಗದ ರೈತರು ಕೂಡ ತಮ್ಮ ಮಾಲನ್ನು ಮಾರುಕಟ್ಟೆಗೆ ತರಬಾರದು. ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ಯಾರೂ ಯಾವುದೇ ರೀತಿಯ ಕಾಯಿಪಲ್ಲೆ ಮುಂತಾದವುಗಳನ್ನು ಮಾರಾಟ ಮಾಡಬಾರದು ಎಂದು ತಹಶೀಲ್ದಾರ್‌ ಜಿ.ಎಸ್‌. ಮಳಗಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ ಘೋಷಿಸಿದ್ದಾರೆ.

Advertisement

ಬುಧವಾರ ಕೊರೊನಾ ಸಾಂಕ್ರಾಮಿಕ ರೋಗದ ಕುರಿತು ಜನಜಾಗೃತಿ ಮೂಡಿಸಲು ಪಟ್ಟಣದ ಪುರಸಭೆಯಿಂದ ವಿವಿಧೆಡೆ ಕಾಲ್ನಡಿಗೆ ಮೂಲಕ ಜನಜಾಗೃತಿ ಜಾಥಾ ನಡೆಸಿ, ಜನಸಂದಣಿ ಹೆಚ್ಚಿರುವಲ್ಲೆಲ್ಲ ಮೈಕ್‌ನಲ್ಲಿ ಮಾತನಾಡಿದ ಅಧಿಕಾರಿಗಳು, ಈಗಾಗಲೇ ಸರ್ಕಾರ ಮತ್ತು ಜಿಲ್ಲಾಡಳಿತ ಸಂತೆ, ಜಾತ್ರೆ, ಸಭೆ, ಸಮಾರಂಭ ಸೇರಿ ಹೆಚ್ಚು ಜನ ಸೇರುವ ಚಟುವಟಿಕೆಗಳಿಗೆ ನಿಷೇಧ ಹೇರಿವೆ. ಇದನ್ನು ಕಳೆದ 4-5 ದಿನಗಳಿಂದ ಕಠಿಣವಾಗಿ ಪಾಲಿಸಿಕೊಂಡು ಬರಲಾಗುತ್ತಿದೆ. ಸರ್ಕಾರದ ಆದೇಶ ಮೀರಿದರೆ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ತಿಳಿವಳಿಕೆ ಹೇಳಿದರು.

ಕೊರೊನಾ ರೋಗದಿಂದ ತಪ್ಪಿಸಿಕೊಳ್ಳಲು ಪಾಲಿಸಬೇಕಾದ ಮುಂಜಾಗ್ರತಾ ಕ್ರಮಗಳ ಮಾಹಿತಿ ಇರುವ ಕರಪತ್ರಗಳನ್ನು ಅಂಗಡಿಕಾರರು, ಸಾರ್ವಜನಿಕರಿಗೆ ವಿತರಿಸಿದ ಅಧಿಕಾರಿಗಳು ಸಾರ್ವಜನಿಕರು ಸಾಧ್ಯವಾದಷ್ಟು ಮನೆಯಲ್ಲೇ ಇರುವುದು ಒಳ್ಳೆಯದು.

ಅತಿ ಜರೂರು ಇದ್ದಲ್ಲಿ ಮಾತ್ರ ಮನೆಯಿಂದ ಹೊರಗೆ ಬರಬಹುದು. ಇಂಥ ಸಂದರ್ಭ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಿದೇಶದಿಂದ ಬಂದವರ ಬಗ್ಗೆ ತಾಲೂಕಾಡಳಿತಕ್ಕೆ ಮಾಹಿತಿ ಕೊಡಬೇಕು ಎಂದು ತಿಳಿಸಲಾಯಿತು.

ಜಾಥಾ ಸಂದರ್ಭ ಬಸವೇಶ್ವರ ವೃತ್ತದ ಬಳಿ ಸರ್ಕಾರದ ಆದೇಶ ಉಲ್ಲಂಘಿಸಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಬಾರ್‌ ಕಂ ರೆಸ್ಟೋರೆಂಟ್‌ ಮತ್ತು ಮದ್ಯ ಮಾರಾಟದ ಅಂಗಡಿಗಳಿಗೆ ಭೇಟಿ ನೀಡಿದ ಅಧಿಕಾರಿಗಳು ಅಲ್ಲಿ ಕೌಂಟರ್‌ ಮೇಲಿದ್ದ ಮ್ಯಾನೇಜರುಗಳನ್ನು ತರಾಟೆಗೆ ತೆಗೆದುಕೊಂಡು ಅಂಗಡಿ ಬಂದ್‌ ಮಾಡಿಸಿದರು. ನಿಯಮ ಉಲ್ಲಂಘಿಸಿ ಮತ್ತೆ ಅಂಗಡಿ ಪ್ರಾರಂಭಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.

Advertisement

ತಹಶೀಲ್ದಾರ್‌ ಜಿ.ಎಸ್‌. ಮಳಗಿ, ತಾಲೂಕು ಆರೋಗ್ಯಾಧಿಕಾರಿ ಡಾ| ಸತೀಶ ತಿವಾರಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ಸಿಪಿಐ ಆನಂದ ವಾಗಮೋಡೆ, ಪುರಸಭೆ ಸಿಬ್ಬಂದಿಗಳಾದ ರಮೇಶ ಮಾಡಬಾಳ, ಭಾರತಿ ಮಾಡಗಿ, ಮಹಾಂತೇಶ ಕಟ್ಟಿಮನಿ, ಶಮಶುದ್ದೀನ್‌ ಮೂಲಿಮನಿ, ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಎಂ.ಎಸ್‌. ಗೌಡರ, ಬಜಾರ್‌ ವ್ಯಾಪಾರಸ್ಥರ ಸಂಘದ ವಾಸುದೇವ ಶಾಸ್ತ್ರೀ, ಪ್ರಭುಲಿಂಗ ಕಡಿ, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ನೀಲಾಂಬಿಕೆ ದರ್ಶನ ಬಂದ್‌: ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದ ಹೊರ ವಲಯದಲ್ಲಿರುವ ಕೃಷ್ಣಾ ನದಿ ದಂಡೆಯಲ್ಲಿನ ನೀಲಾಂಬಿಕೆ ದೇವಿ ಐಕ್ಯ ಮಂಟಪವನ್ನು ಸಾರ್ವಜನಿಕರ ದರ್ಶನಕ್ಕೆ ಬಂದ್‌ ಮಾಡಿ ಕೂಡಲಸಂಗಮ ಅಭಿವೃದ್ಧಿ ಪ್ರಾ ಧಿಕಾರದ ಆಯುಕ್ತೆ ರಾಜಶ್ರೀ ಅಗಸರ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಐಕ್ಯಮಂಟಪದಲ್ಲಿ ಭಕ್ತರಿಗೆ ಪ್ರವೇಶಾವಕಾಶ ನೀಡಲಾಗುತ್ತಿಲ್ಲ. ದರ್ಶನಕ್ಕೆ ಹೋದ ಭಕ್ತರು ಹೊರಗೆ ರಸ್ತೆಯಲ್ಲೇ ನಿಂತು ಕೈ ಮುಗಿದು ಬರುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next