ಮುದ್ದೇಬಿಹಾಳ: ಚುನಾವಣಾ ಕರ್ತವ್ಯದ ಭಾಗವಾಗಿರುವ ತರಬೇತಿ ಕಾರ್ಯಕ್ಕೆ ಸಿಬ್ಬಂದಿ ಕರೆದೊಯ್ಯುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಮುದ್ದೇಬಿಹಾಳ ತಾಲೂಕಿನ ಹಳ್ಳೂರ ಕ್ರಾಸ್ ಬಳಿ ವಿಜಯಪುರ ಮುಖ್ಯ ರಸ್ತೆ ಪಕ್ಕದ ತಗ್ಗಿನಲ್ಲಿ ಪಲ್ಟಿಯಾಗಿ ಹಲವರು ಗಾಯಗೊಂಡಿರುವ ಘಟನೆ ಮೇ.2 ಬೆಳಿಗ್ಗೆ ಸುಮಾರು 8-10 ಗಂಟೆಗೆ ನಡೆದಿದೆ.
ಬಸ್ಸಿನ ಎಕ್ಸೆಲ್ ತುಂಡಾಗಿ ಈ ಅವಘಡ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ತಕ್ಷಣ ಸ್ಥಳಕ್ಕೆ ಅಂಬ್ಯೂಲೆನ್ಸ್ ಕರೆಸಲಾಗಿದ್ದು, ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ಹಿಂದಿನ ಬಸ್ಸಿನಲ್ಲಿದ್ದವರು ಗಾಯಾಳುಗಳ ನೆರವಿಗೆ ಧಾವಿಸಿದ್ದಾರೆ.
ಚುನಾವಣಾಧಿಕಾರಿ ಚಂದ್ರಕಾಂತ ಪವಾರ, ತಹಶೀಲ್ದಾರ ರೇಖಾ, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮುದ್ದೇಬಿಹಾಳದ ಸರ್ಕಾರಿ ಮತ್ತು ಖಾಸಗಿ ಅನುದಾನಿತ ನೌಕರರನ್ನು ಸಿಂದಗಿ ವಿಧಾನಸಭಾ ಮತಕ್ಷೇತ್ರದ ತರಬೇತಿಗೆ ನಿಯೋಜಿಸಿದ್ದರಿಂದ ಅವರನ್ನು ಬಸ್ ಮೂಲಕ ಸಿಂದಗಿಗೆ ಕರೆದೊಯ್ಯುವಾಗ ಈ ಘಟನೆ ನಡೆದಿದೆ.
ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಿದ್ದು, ಅವರ ಸ್ಥಾನದಲ್ಲಿ ರಿಸರ್ವ್ ಸಿಬ್ಬಂದಿ ಬಳಸಿಕೊಳ್ಳಲಾಗುತ್ತದೆ ಎಂದು ಚುನಾವಣಾಧಿಕಾರಿ ಚಂದ್ರಕಾಂತ ಪವಾರ ತಿಳಿಸಿದ್ದಾರೆ.