ಮುದ್ದೇಬಿಹಾಳ: ಹೈದ್ರಾಬಾದ್‌ನಲ್ಲಿ ಪಶು ವೈದ್ಯೆಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಜೀವಂತ ಸುಟ್ಟು ಹಾಕಿದ ದುಷ್ಕರ್ಮಿಗಳನ್ನು ಅಲ್ಲಿನ ಪೊಲೀಸರು ಎನ್ ಕೌಂಟರ್ ಮಾಡಿದ್ದನ್ನು ಸ್ವಾಗತಿಸಿ ಕರ್ನಾಟಕ ರಾಜ್ಯ ಪಿಂಜಾರ ನದಾಫ್ ಮನಸೂರಿ ಸಂಘದ ಪದಾಧಿಕಾರಿಗಳು, ಅಂಜುಮನ್ ಎ ಇಸ್ಲಾಂ ಸಂಸ್ಥೆ ಸದಸ್ಯರು ಶುಕ್ರವಾರ ಇಲ್ಲಿನ ಅಂಜುಮನ್ ಉರ್ದು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರು.
ಈ ಸಂದರ್ಭ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಡಾ| ಅಬ್ದುಲ್‌ರಜಾಕ್ ನದಾಫ್, ವೈದ್ಯೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಹತ್ಯಾಕೋರರನ್ನು ಅಲ್ಲಿನ ಪೊಲೀಸರು ಕರ್ನಾಟಕ ಮೂಲದ ಹಿರಿಯ ಪೊಲೀಸ್ ಅಧಿಕಾರಿ ಸಜ್ಜನರ್ ಅವರ ನೇತೃತ್ವದಲ್ಲಿ ಎನ್ ಕೌಂಟರ್ ಮಾಡಿ ಕೊಂದು ಹಾಕಿ ಅತ್ಯಾಚಾರಿಗಳಿಗೆ ತಕ್ಕ ಪಾಠ ಕಲಿಸಿದ್ದು ಸಮಾಜವೇ ಹೆಮ್ಮೆ ಪಡುವಂಥ ವಿಷಯವಾಗಿದೆ. ಇತ್ತೀಚೆಗೆ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಘಟನೆಗಳು ಹೆಚ್ಚಾಗುತ್ತಿದ್ದು ಇದನ್ನು ತಡೆಗಟ್ಟಲು ಹೈದ್ರಾಬಾದ್ ಮಾದರಿಯನ್ನೇ ಕರ್ನಾಟಕದಲ್ಲೂ ಜಾರಿಗೊಳಿಸಿ ಅತ್ಯಾಚಾರಿಗಳಿಗೆ ತಕ್ಕ ಪಾಠ ಕಲಿಸಲು ಮುಂದಾಗಬೇಕು ಎಂದರು.
ಮುಖ್ಯಾಧ್ಯಾಪಕ ಎಂ.ಎ. ಬಾಗವಾನ ಮಾತನಾಡಿ, ಹೆಣ್ಣು ಮಕ್ಕಳು ಇಂದಿನ ದಿನಗಳಲ್ಲಿ ಮನೆ ಬಿಟ್ಟು ಹೊರಗೆ ಬಾರದ ಪರಿಸ್ಥಿತಿ ಬಂದೊದಗಿದ್ದು ಹೈದ್ರಾಬಾದ್ ಪೊಲೀಸರು ಹೆಣ್ಣು ಮಕ್ಕಳು ತಲೆ ಎತ್ತಿ ಜೀವಿಸುವ ವಾತಾವರಣ ನಿರ್ಮಿಸಿದ್ದಾರೆ. ಮಹಿಳಾ ಗೌರವವನ್ನು ಅಲ್ಲಿನ ಪೊಲೀಸರು ಎತ್ತಿ ಹಿಡಿಸಿದ್ದಾರೆ. ಈ ಪ್ರಕರಣದಲ್ಲಿ ಕಾನೂನು ಪೊಲೀಸರ ಕೆಲಸವನ್ನು ಎತ್ತಿ ಹಿಡಿಯುವ ವಿಶ್ವಾಸ ಇದೆ ಎಂದರು.
ಈ ಸಂದರ್ಭ ವಿದ್ಯಾರ್ಥಿನಿಯರು, ಶಿಕ್ಷಕರು ಹಾಗೂ ಸಂಘಟನೆ ಸದಸ್ಯರು ಜಿಂದಾಬಾದ್ ಜಿಂದಾಬಾದ್ ಮಹಿಳಾ ಸುರಕ್ಷಾ ಜಿಂದಾಬಾದ್ ರಂದು ಘೋಷಣೆ ಕೂಗಿ, ಪೊಲೀಸರ ಕ್ರಮಕ್ಕೆ ಚಪ್ಪಾಳೆ ಬಾರಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿ ಕರ್ನಾಟಕ ಮೂಲಕ ಐಪಿಎಸ್ ಅಧಿಕಾರಿ ಸಜ್ಜನರ್ ಅವರ ಕಾರ್ಯವನ್ನು ಮುಕ್ತಕಂಠದಿಂದ ಹೊಗಳಿದರು.
ಅಂಜುಮನ್ ಎ ಇಸ್ಲಾಂ ಕಮೀಟಿ ಉಪಾಧ್ಯಕ್ಷ ಅಬ್ದುಲ್‌ಜಬ್ಟಾರ ಗೋಲಂದಾಜ, ಸದಸ್ಯ ನೂರೆಹುಸೇನ ನದಾಫ್, ಮಹಾಮಂಡಳದ ಖಾಜಂಬರ ನದಾಫ್, ಮಲೀಕಸಾಬ ನದಾಫ್, ಹುಸೇನಸಾಬ ನದಾಫ್, ಎ.ಕೆ. ನಂದವಾಡಗಿ, ಐ.ಎಂ. ಕೆಂಭಾವಿ, ಶ್ಯಾಮಲಾಬಾಯಿ ಕುಲಕರ್ಣಿ ಶಾಲೆ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಕ್ಷಕ ಎಸ್.ಐ. ಹಿರೇಮಠ ನಿರೂಪಿಸಿದರು.