ಮುದ್ದೇಬಿಹಾಳ: ಸಾಲದ ಬಾಧೆಯಿಂದ ಮುದ್ದೇಬಿಹಾಳ ತಾಲೂಕು ಕೃಷ್ಣಾ ನದಿ ತೀರದ ಬಂಗಾರಗುಂಡ ಗ್ರಾಮದ ರೈತ ಅಮರಪ್ಪ ಶಿವಪ್ಪ ಬಿರಾದಾರ (40) ತನ್ನ ಮನೆಯ ಅಡುಗೆ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅಮರಪ್ಪ ತನ್ನ ತಾಯಿ ನಿಂಬೆವ್ವಳ ಹೆಸರಲ್ಲಿದ್ದ ಜಮೀನಿನಲ್ಲಿ ಉಳುಮೆ ಮಾಡಿಕೊಂಡಿದ್ದ. ಕೃಷಿ ಚಟುವಟಿಕೆಗೋಸ್ಕರ ಗ್ರಾಮ ವ್ಯಾಪ್ತಿಯ ರಕ್ಕಸಗಿ ಪಿಕೆಪಿ ಸೊಸೈಟಿಯಲ್ಲಿ 55 ಸಾವಿರ ರೂ., ಖಾಸಗಿಯಾಗಿ 3.75 ಲಕ್ಷ ಸೇರಿ ಒಟ್ಟಾರೆ 4.30 ಲಕ್ಷ ರೂ ಸಾಲ ಮಾಡಿಕೊಂಡಿದ್ದ. ಕಳೆದ ಒಂದೆರಡು ವರ್ಷಗಳಿಂದ ಜಮೀನಿನಲ್ಲಿ ಬೆಳೆದ ಬೆಳೆಯೂ ಸರಿಯಾಗಿ ಬಾರದ್ದರಿಂದ ಸಾಲ ಹೇಗೆ ತೀರಿಸುವುದು ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಪತ್ನಿ ಲಕ್ಷ್ಮೀಬಾಯಿ ಮುದ್ದೇಬಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯ ನಾಲತವಾಡ ಹೊರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೃತನಿಗೆ ಓರ್ವ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಎಎಸೈ ಎಸ್.ಬಿ.ನ್ಯಾಮಣ್ಣನವರ್ ಪ್ರಕರಣ ದಾಖಲಿಸಿಕೊಂಡು ತಾಲೂಕು ಕಾರ್ಯನಿರ್ವಾಹಕ ಮ್ಯಾಜಿಸ್ಟೇಟ್ ಆಗಿರುವ ತಹಶೀಲ್ದಾರ್ ಅವರಿಗೆ ವರದಿ ಸಲ್ಲಿಸಿದ್ದಾರೆ.