ಮುದ್ದೇಬಿಹಾಳ: ಪಟ್ಟಣದ ಹೊಸ ಕಾಯಿಪಲ್ಯೆ ಮಾರುಕಟ್ಟೆಯಲ್ಲಿರುವ ಗಿಡದಲ್ಲಿ ವಿವಾಹಿತನೊಬ್ಬನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಶನಿವಾರ ಸಂಜೆ ಪತ್ತೆಯಾಗಿದೆ.
ಮೃತನನ್ನು ಅದೇ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಪಟ್ಟಣದ ಮೋಮಿನ್ ಗಲ್ಲಿ ನಿವಾಸಿ ಮಹ್ಮದ್‌ಇಕ್ಬಾಲ್ ಅಬ್ದುಲ್‌ಅಜೀಜ್ ಮೋಮಿನ್ (35) ಎಂದು ಗುರುತಿಸಲಾಗಿದೆ. ಶವ ಕುತ್ತಿಗೆಗೆ ನೇಣು ಬಿಗಿದಿದ್ದರೂ ನೆಲಕ್ಕೆ ಮೊಳಕಾಲೂರಿದ ಸ್ಥಿತಿಯಲ್ಲಿದ್ದದ್ದು ಕುಟುಂಬದವರ ಅನುಮಾನಕ್ಕೆ ಕಾರಣವಾಗಿದೆ. ಮೃತನಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.
ಸ್ಥಳಕ್ಕೆ ಪಿಎಸೈ ಸಂಜಯ್ ತಿಪ್ಪಾರಡ್ಡಿ, ಎಎಸೈ ಬಿ.ಡಿ.ಪವಾರ ಮತ್ತು ಪೊಲೀಸರು ಭೇಟಿ ನೀಡಿ ಪಂಚನಾಮೆಯ ನಂತರ ಶವವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳಿಸಿದರು.
ಮೃತನ ಅಣ್ಣ ಹಮೀದ್ ಅಬ್ದುಲ್‌ಅಜೀಜ್ ಮೋಮಿನ್ ಗುರುವಾರ ಎಂಟು ಗಡಗಡೆ ಬಾವಿಯ ಹತ್ತಿರ ಇರುವ ಕೊಳಚೆ ನೀರು, ಕೆಸರು ತುಂಬಿದ ಸ್ಥಳದಲ್ಲಿ ಶವವಾಗಿ ಪತ್ತೆಯಾದ ಎರಡನೇ ದಿನಕ್ಕೇ ಈ ಘಟನೆ ನಡೆದಿರುವುದು ಆ ಕುಟುಂಬದಲ್ಲಿ ಆತಂಕ ಹುಟ್ಟು ಹಾಕಿದೆ.
ಈತ ಸಾಯುವುದಕ್ಕೂ ಮೊದಲು ತನಗೆ ಎದರಾದ ಎಲ್ಲ ಸಂಬಂಧಿಕರಿಗೂ ಸಂಜೆ ತನ್ನ ಶವ ನೋಡುತ್ತೀರಿ ಎಂದು ಹೇಳುತ್ತಾ ತಿರುಗಾಡುತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. ಸಂಬಂಧಿಕರ ನಡುವಿನ ಜಮೀನು ವಿವಾದವೇ ಈ ಘಟನೆಗಳಿಗೆ ಕಾರಣ ಎಂದು ಮೃತನ ಕುಟುಂಬದವರು ಆರೋಪಿಸುತ್ತಿದ್ದು, ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಯಾದಿ ಕಲಹ ಹಲವಾರು ಬಾರಿ ಪೊಲೀಸ್ ಮತ್ತು ನ್ಯಾಯಾಲಯದ ಕಟ್ಟೆ ಏರಿತ್ತು. ಜಮೀನು ವಿವಾದಕ್ಕೆ ಕಾರಣನಾಗಿರುವ ಇವರ ಸಂಬಂಧಿಕನೊಬ್ಬ ಕಳೆದ ಎರಡು ದಿನಗಳಿಂದ ನಾಪತ್ತೆ ಆಗಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ.