ವಿಜಯಪುರ: ಜ್ಞಾನಯೋಗಿ ಲಿಂ. ಸಿದ್ದೇಶ್ವರ ಸ್ವಾಮೀಜಿಗಳಿಗೆ ಗುರುನಮನ ಮಹೋತ್ಸವವು ಜನವರಿ 1 ಮತ್ತು 2ರಂದು ನಡೆಯಲಿದೆ. ಈ ಕಾರ್ಯಕ್ರಮದ ನಿಮಿತ್ತ ಹಲವೆಡೆ ಜ್ಞಾನದಾಸೋಹ ಸತ್ಸಂಗ ಹಾಗೂ ನಗರದ ಜ್ಞಾನಯೋಗಾಶ್ರಮದಲ್ಲಿ ನಿರಂತರವಾಗಿ ಘೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ತಿಳಿಸಿದರು.
ಇಲ್ಲಿನ ಜ್ಞಾನಯೋಗಾಶ್ರಮದಲ್ಲಿ ಗುರುನಮನ ಕಾರ್ಯಕ್ರಮದ ಪೂರ್ವಭಾವಿಯಾಗಿ ಬುಧವಾರ ಮಾತನಾಡಿದ ಅವರು, ಲಿಂ.ಸಿದ್ದೇಶ್ವರ ಸ್ವಾಮೀಜಿಗಳ ಜ್ಞಾನ ತುಂಬಾ ವಿಶಾಲವಾಗಿತ್ತು. ಅವರ ಉಸಿರು ಜ್ಞಾನಕ್ಕಾಗಿಯೇ ಸೀಮಿತವಾಗಿತ್ತು. ತಮ್ಮ ಕೊನೆಯ ದಿನಗಳಲ್ಲೂ ನಮಗೆ ಪಾಠ ಮಾಡಿದ್ದರು. ಶ್ರೀಗಳು ಹೇಳಿದ್ದ ಎಷ್ಟೋ ವಿಚಾರಗಳನ್ನು ಜನರು ತಮ್ಮ ಜೀವನದ ಕಥೆಗಳು ಎಂದು ಭಾವಿಸಿಕೊಂಡಿದ್ದರು. ಹೀಗಾಗಿ ಗುರುನಮನ ಕಾರ್ಯಕ್ರಮ ಹಳ್ಳಿ-ಹಳ್ಳಿಗೂ ತಲುಪಿಸುವ ಯೋಚನೆ ಇದೆ ಎಂದರು.
ಜ.1ರಂದು ಸಂಜೆ ದೀಪ ಬೆಳಗಿಸುವ ಮೂಲಕ ದೀಪೋತ್ಸವದೊಂದಿಗೆ ಜ್ಞಾನಯೋಗಿಗಳಿಗೆ ನಮನ ಸಲ್ಲಿಸಲಾಗುವುದು. ಜ.2ರಂದು ಬೆಳಗ್ಗೆ 6 ಗಂಟೆಗೆ ಜಪಯೋಗ, 7 ಗಂಟೆಗೆ ಪ್ರವಚನ, 8 ಗಂಟೆಗೆ ವೇದಾಂತಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳು ಗದ್ದುಗೆಗೆ ಪೂಜೆ ನೆರವೇರಲಿದೆ. ಬಳಿಕ ಸಿದ್ದೇಶ್ವರ ಸ್ವಾಮೀಜಿಗಳಿಗೆ ಗೀತ ನಮನ ಸಲ್ಲಿಸಲಾಗುತ್ತದೆ. ಇದೇ ವೇಳೆ, ಶ್ರೀಗಳ ಪ್ರವಚನ ಆಧಾರಿತ ಕನ್ನಡ, ಹಿಂದಿ ಗ್ರಂಥಗಳು, ಮರು ಮುದ್ರಣದ ಸಂಪುಟಗಳ ಬಿಡುಗಡೆ, ಫೋಟೋ ಗ್ಯಾಲರಿ ಉದ್ಘಾಟನೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನಾಡಿನ ಅನೇಕ ಸ್ವಾಮೀಜಿಗಳು, ರಾಜ್ಯಪಾಲರು, ಕೇಂದ್ರ, ರಾಜ್ಯ ಸಚಿವರು ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ. ಭಕ್ತರು, ಸಾರ್ವಜನಿಕರಿಗಾಗಿ ಗ್ರಾಮಗಳಿಂದ ಸಾರಿಗೆ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಆಶ್ರಮದ ಉಪಾಧ್ಯಕ್ಷ ಹರ್ಷಾನಂದ ಸ್ವಾಮೀಜಿ ಮಾತನಾಡಿ, ಈಗಾಗಲೇ ಹಳ್ಳಿಗಳು ಹಾಗೂ ನಗರದ ಪ್ರಮುಖ ಬಡಾವಣೆಗಳಲ್ಲಿ ಜ್ಞಾನದಾಸೋಹ ಸತ್ಸಂಗ ಆಯೋಜಿಸಲಾಗಿದೆ. ಡಿ.25ರಿಂದ 9 ದಿನ ಕಾಲ ಸುಧಾರಿತ ಕೃಷಿ, ಜ್ಞಾನ ಆರಾಧನೆ, ಗ್ರಾಮ ಸಂಸ್ಕೃತಿ, ಯೋಗ ಜೀವನ, ಮಾತೃ ಭಕ್ತಿ, ಜಾಗತಿಕ ತಾತ್ವಿಕ ಚಿಂತನೆಗಳು, ಸೇವಾಭಾವ, ಗುರುದೇವರ ಬದುಕು ಎಂಬ ಗೋಷ್ಠಿಗಳು ನಡೆಯಲಿವೆ. ಗುರುನಮನ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಿಸಲು ಸ್ವಾಗತ, ದಾಸೋಹ, ವಾಹನ, ಸ್ವಯಂಸೇವಾ ಸಮಿತಿ ಸೇರಿ ಹಲವು ಸಮಿತಿಗಳನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್