ಮುದ್ದೇಬಿಹಾಳ: ಮೆದುಳಿನಲ್ಲಿ ರಕ್ತಸ್ರಾವವಾಗಿ ಹೆಪ್ಪುಗಟ್ಟಿದ ಪರಿಣಾಮ ಎರಡೇ ದಿನದಲ್ಲಿ ಪದವಿ ವಿದ್ಯಾರ್ಥಿಯೊಬ್ಬ ಶಸ್ರ್ತ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಕುಂಟೋಜಿ ಗ್ರಾಮದಲ್ಲಿ ಫೆ. 8ರ ಗುರುವಾರ ಬೆಳಕಿಗೆ ಬಂದಿದೆ.
ಇಲ್ಲಿನ ಕಾಲೇಜೊಂದರ ಬಿಕಾಂ ವಿದ್ಯಾರ್ಥಿ ವಿನಾಯಕ ನೀಲಕಂಠ ಹೂಗಾರ (18) ಮೃತ ವಿದ್ಯಾರ್ಥಿ.
ಮೂರು ದಿನಗಳ ಹಿಂದೆ ಕಣ್ಣು ಮತ್ತು ತಲೆನೋವಿನ ಕಾರಣಕ್ಕಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೆದುಳಿನ ಎಂಆರ್ ಐ ಸ್ಕ್ಯಾನ್ ಮಾಡಿದಾಗ ರಕ್ತ ಹೆಪ್ಪುಗಟ್ಟಿರುವುದು ಕಂಡು ಬಂದಿದ್ದು, ತಕ್ಷಣ ಆಪರೇಷನ್ ಮಾಡಬೇಕು ಎಂದು ವೈದ್ಯರು ತಿಳಿಸಿದ್ದಾರೆ.
ಅಂದಾಜು 2-3 ಲಕ್ಷ ಖರ್ಚಾಗುತ್ತದೆ ಎಂದಿದ್ದರಿಂದ ತಕ್ಷಣ ಆಪರೇಷನ್ ಗೆ ಹಿಂದೇಟು ಹಾಕಲಾಗಿದೆ. ವಿದ್ಯಾರ್ಥಿಯ ತಂದೆ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿದ್ದು ಕಾರ್ಮಿಕ ಕಾರ್ಡ್ ಇರುವುದರಿಂದ ಬೆಂಗಳೂರಿಗೆ ಕರೆತರುವಂತೆ ವಿದ್ಯಾರ್ಥಿಯ ತಂದೆ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿಗೆ ಹೋದಾಗ ಇಎಸ್‌ಐ ಕಾರ್ಡ್ ಮತ್ತು ರಶೀದಿ ತಕ್ಷಣಕ್ಕೆ ಸಿಕ್ಕಿಲ್ಲ. ಪರಿಸ್ಥಿತಿ ಗಂಭೀರಗೊಂಡಾಗ ನಿಮ್ಹಾನ್ಸ್ ಗೆ ದಾಖಲಿಸಲಾಗಿದೆ. ಬುಧವಾರ ಸಂಜೆ ಆಪರೇಷನ್ ಥಿಯೇಟರಿಗೆ ಹೋದವನು ಶವವಾಗಿ ಮರಳಿದ್ದಾನೆ ಎಂದು ಕುಟುಂಬದವರು ತಿಳಿಸಿದ್ದಾರೆ. ಈ ಮಧ್ಯೆ ವಿನಾಯಕ ಮೆದುಳು ಜ್ವರದಿಂದ ತೀರಿಕೊಂಡಿದ್ದಾನೆ ಎನ್ನುವ ಸುದ್ದಿ ಕಾಲೇಜು ಸೇರಿದಂತೆ ಎಲ್ಲಾಕಡೆ ಹರಡಿ ಗೊಂದಲ, ಆತಂಕ ಮೂಡಿಸಿತ್ತು.
ಗುರುವಾರ ಗ್ರಾಮದಲ್ಲಿ ಅಂತ್ಯಕ್ರಿಯೆ ಮುಕ್ತಾಯಗೊಂಡ ನಂತರ ಆರೋಗ್ಯ ಇಲಾಖೆಯವರು ವಿನಾಯಕ ಅವರ ಮನೆಗೆ ತೆರಳಿ ಆಸ್ಪತ್ರೆಯ ದಾಖಲೆ ಪರಿಶೀಲಿಸಿ ಈ ಸಾವಿಗೆ ಮಿದುಳು ಜ್ವರ ಕಾರಣವಲ್ಲ ಎಂಬುದನ್ನು ಖಚಿತಪಡಿಸಿಕೊಂಡರು. ಆದರೂ ಮುನ್ಬೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲು ಅಗತ್ಯ ಕ್ರಮಕ್ಕೆ ಸೂಚಿಸಿದ್ದಾಗಿ ತಾಲೂಕು ಆರೋಗ್ಯಾಧಿಕಾರಿ ತಿಳಿಸಿದರು.