ಮುದ್ದೇಬಿಹಾಳ: ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಸಿಸಿ ರಸ್ತೆ ನಿರ್ಮಿಸುವ ಉದ್ದೇಶದಿಂದ ಪಿಡಬ್ಲೂಡಿ ಇಲಾಖೆ ಮೂಲಕ 65.35 ಕೋಟಿ ಅನುದಾನ ವಿನಿಯೋಗಿಸಲಾಗುತ್ತಿದೆ. ಮಾರ್ಚ್ ಅಂತ್ಯದೊಳಗೆ ಅಗತ್ಯ ಇರುವೆಡೆ ಸಿಸಿ ರಸ್ತೆ ಗುಣಮಟ್ಟದಲ್ಲಿ ನಿರ್ಮಿಸಲು ಈಗಾಗಲೇ ಚಾಲನೆ ನೀಡಲಾಗಿದೆ ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದ್ದಾರೆ.
ಮುದ್ದೇಬಿಹಾಳ ತಾಲೂಕಿನ ಶಿರೋಳ, ಸರೂರ ಗ್ರಾಮಗಳಲ್ಲಿ ಬುಧವಾರ ಸಿಸಿ ರಸ್ತೆ, ಸಮುದಾಯ ಭವನ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ನಂತರ ಅಲ್ಲಲ್ಲಿ ನಡೆದ ಬಹಿರಂಗ ಸಭೆಗಳಲ್ಲಿ ಅವರು ಮಾತನಾಡಿದರು.
ಶಿರೋಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ಇಲ್ಲಿನ ನೇಕಾರರ ಸಮಾಜದ ಸಮುದಾಯ ಭವನಕ್ಕೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಅಡಿ 5 ಲಕ್ಷ ಅನುದಾನ ಕೊಟ್ಟಿದ್ದೇನೆ. ಗ್ರಾಮದಲ್ಲಿನ ಸ್ಮಶಾನಕ್ಕೆ ಹೋಗುವ ಒಂದು ಕಿ.ಮೀ. ರಸ್ತೆಯನ್ನು 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲು ಚಾಲನೆ ನೀಡಿದ್ದೇನೆ ಎಂದರು.
ಸರೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಶಾಸಕನಾಗಲು ರೇವಣಸಿದ್ದೇಶ್ವರರ ಕೃಪೆಯೇ ಕಾರಣ. ಇಲ್ಲಿರುವ ದೇವಸ್ಥಾನದ ಅಭಿವೃದ್ಧಿಗೆ ಯಾತ್ರಿ ನಿವಾಸ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದೇನೆ. ಇದನ್ನು ವಿಶೇಷ ಕ್ಷೇತ್ರವನ್ನಾಗಿ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದ್ದೇನೆ. ಈ ಕ್ಷೇತ್ರ ನಾಡಿನಲ್ಲಿ ಬೆಳಗುವಂತಾಗಬೇಕು ಎಂದರು.
ವಿಜಯಪುರ ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಸಿದ್ದಯ್ಯ ಗುರುವಿನ್, ಬಸವರಾಜ ಗುಳಬಾಳ, ಸಿದ್ದು ಜೈನಾಪುರ, ಸಿದ್ದು ತೊಂಡಿಹಾಳ, ಪ್ರಕಾಶ ಹೊಳಿ, ಸದಯ್ಯ ಗುರುವಿನ್, ಸಾದಪ್ಪಮುತ್ಯಾ, ಕಾಡಯ್ಯಮುತ್ಯಾ, ಹುಚ್ಚಯ್ಯ ಮುತ್ಯಾ, ರೇವಣಯ್ಯ ಮುತ್ಯಾ, ಶರಣು ಚಲವಾದಿ, ಶೇಖಪ್ಪ ಲಮಾಣಿ, ಆಯಾ ಗ್ರಾಮದ ಹಿರಿಯರು, ಬಿಜೆಪಿ ಧುರೀಣರು, ಪಿಡಬ್ಲೂಡಿ ಅಧಿಕಾರಿಗಳು ಪಾಲ್ಗೊಂಡಿದ್ದರು.