Advertisement

ಪರಿಸರ ರಕ್ಷಕರಿಗೆ ಪ್ರೋತ್ಸಾಹಿಸುವ ಕೆಲಸ ನಡೆಯಲಿ

02:48 PM Jun 06, 2019 | Naveen |

ಮುದ್ದೇಬಿಹಾಳ: ವಿಶ್ವ ಪರಿಸರ ದಿನದಂದೆ ಪರಿಸರ ಬಗ್ಗೆ ಕಾಳಜಿ ತೋರಿಸುವುದನ್ನು ನಾವೆಲ್ಲರೂ ಮೊದಲು ಬಿಡಬೇಕು. ಅಂದಾಗ ಮಾತ್ರ ಪರಿಸರ ರಕ್ಷಣೆ ಸಾಧ್ಯವಾಗುತ್ತದೆ ಎಂದು ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ (ಮಡಿಕೇಶ್ವರ) ಹೇಳಿದರು.

Advertisement

ಪುರಸಭೆ ಹಾಗೂ ಹಸಿರು ತೋರಣ ಬಳಗ ಸಹಯೋಗದಿಂದ ಇಲ್ಲಿನ ಹುಡ್ಕೊ ಕಾಲೋನಿ ಉದ್ಯಾನದಲ್ಲಿ ಬುಧವಾರ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ನಡೆದ ಜನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುದ್ದೇಬಿಹಾಳ ಪಟ್ಟಣದಲ್ಲಿ ಪರಿಸರ ಪ್ರೇಮಿಗಳಿದ್ದು ಅವರನ್ನು ಪ್ರೋತ್ಸಾಹಸಿದರೆ ಇಲ್ಲಿನ ಗಿಡ ಮರಗಳಿಗೆ ಅನುಕೂಲವಾಗುತ್ತದೆ ಎನ್ನುವುದನ್ನು ಹಸಿರು ತೋರಣ ಬಳಗ ಸಂಘಟನೆ ಪರಿಸರ ಪ್ರೇಮಿಗಳಿಗೆ ಪ್ರೋತ್ಸಾಹಿಸುವ ಮೂಲಕ ತೋರಿಸಿಕೊಟ್ಟಿದೆ. ಈ ಸಂಘಟನೆಯಿಂದಲೇ ಹುಡ್ಕೊ ಕಾಲೋನಿಯಲ್ಲಿ ಹಸಿರು ವಾತಾವರಣ ಸೃಷ್ಟಿಯಾಗಿದೆ. ಇಂತಹ ಕಾರ್ಯ ಪ್ರತಿಯೊಂದು ಹಳ್ಳಿಯಲ್ಲಿಯೂ ನಡೆದರೆ ಮುಂದಿನ ಪೀಳಿಗೆಯವರಿಗೆ ಪರಿಸರ ಉಳಿಯುವಂತಾಗುತ್ತದೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಡಿ. ಗಾಂಜಿ ಮಾತನಾಡಿ, ಹಸಿರು ತೋರಣ ಬಳಗ ಮುದ್ದೇಬಿಹಾಳ ಪಟ್ಟಣವಲ್ಲದೇ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿಯೂ ತಮ್ಮ ಸದಸ್ಯರಿಂದ ಸಾಕಷ್ಟು ಸಸಿಗಳನ್ನು ನೆಟ್ಟು ಹಸಿರುಮಯವನ್ನಾಗಿಸಿದ್ದಾರೆ. ಆದರೂ ಒಂದು ಮರಕ್ಕೆ ನೂರು ಜನ ಕಾವಲು ಕಾಯುವುದುಕ್ಕಿಂತಲೂ ನೂರು ಮರಕ್ಕೆ ಒಬ್ಬರ ಕಾವಲುಗಾರರಾಗಿದ್ದರೆ ಹೆಚ್ಚಿನ ಪರಿಸರ ರಕ್ಷಣೆ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಹಸಿರು ತೋರಣ ಬಳಗದವರು ತಮ್ಮ ಪರಿಸರ ಕಾರ್ಯವನ್ನು ಮಾಡಬೇಕಾಗಿದೆ ಎಂದು ಅವರು ಸಲಹೆ ನೀಡಿ ಪರಿಸರಕ್ಕೆ ಪ್ರೇರಣೆಯಾದ ಹಾಡನ್ನು ಹಾಡಿ ಗಮನ ಸೆಳೆದರು.

ಪುರಸಭೆ ಸದಸ್ಯೆ ಸಂಗೀತಾ ದೇವರಳ್ಳಿ, ಸಾಮಾಜಿಕ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ಸಂತೋಷ ಅಜೂರ, ಪ್ರಾದೇಶಿಕ ಅರಣ್ಯ ಇಲಾಖೆ ಉಪ ವಲಯ ಅರಣ್ಯಾಧಿಕಾರಿ ಸುಭಾಷಚಂದ್ರ ಬಿ.ಕೆ., ಪುರಸಭೆ ಮುಖ್ಯಾಧಿಕಾರಿ ಎಸ್‌.ಎಫ್‌. ಈಳಗೇರ, ನ್ಯಾಯವಾದಿ ಎಚ್.ವೈ. ಪಾಟೀಲ ಮಾತನಾಡಿದರು.

Advertisement

ಇದೇ ವೇಳೆ ಹಸಿರು ತೋರಣ ಬಳಗದವರಿಂದ ಪ್ರತಿ ವರ್ಷ ವಿತರಿಸುವ ಪರಿಸರ ಪ್ರೇಮಿ ಪ್ರಶಸ್ತಿಯನ್ನು ಬಿಇಒ ಎಸ್‌.ಡಿ. ಗಾಂಜಿ, ತಂಗಡಗಿಯ ಸಮಾಜ ಸೇವಕ ಬಸವರಾಜ ನಿಡಗುಂದಿ, ನೆಡುತೋಪು ಕಾವಲುಗಾರ ಜಗದೀಶ ನಾಗರಬೆಟ್ಟ, ಇಣಚಗಲ್ಲ ಸಸ್ಯಪಾಲನಾಲಯದಲ್ಲಿ ಕೆಲಸ ಮಾಡುವ ಮಮತಾಜಬಿ ಸಾಹೇಬಲಾಲ ನಾಯ್ಕೋಡಿ ಅವರಿಗೆ ವಿತರಿಸಲಾಯಿತು.

*ಜನ ಜಾಗೃತಿ ರ್ಯಾಲಿ: ಕಾರ್ಯಕ್ರಮ ನಂತರ ಪುರಸಭೆ ಹಾಗೂ ಹಸಿರು ತೋರಣ ಬಳಗದಿಂದ ಪರಿಸರ ರಕ್ಷಣಾ ಜನ ಜಾಗೃತಿ ರ್ಯಾಲಿ ಮಾಡಲಾಯಿತು. ಇಲ್ಲಿನ ಹುಡ್ಕೋ ಉದ್ಯಾನದಿಂದ ಪ್ರಾರಂಭಗೊಂಡ ರ್ಯಾಲಿ ಹೇಮರಡ್ಡಿ ಮಲ್ಲಮ್ಮ ವೃತ್ತ, ಚನ್ನಮ್ಮ ವೃತ್ತ, ಪುರಸಭೆ ಕಾರ್ಯಾಲಯ ಮೂಲಕ ಬಸವೇಶ್ವರ ವೃತ್ತದ ವರೆಗೂ ನಡೆಯಿತು.

*ಪ್ಲಾಸ್ಟಿಕ್‌ ಬಳಕೆ: ಬುಧವಾರ ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಹಾಗೂ ಪ್ಲಾಸ್ಟಿಕ್‌ ನಿಷೇಧಿಸಿ ಎಂಬ ಜನ ಜಾಗೃತಿ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್‌ ಬಳಕೆ ಮಾಡಿದ್ದು ವಿಪರ್ಯಾಸದ ಸಂಗತಿಯಾಗಿತು. ಇತ್ತ ಜನರಲ್ಲಿ ಜಾಗೃತಿ ಮೂಡಿಸುವವರೆ ಪ್ಲಾಸ್ಟಿಕ್‌ ಬಳಕೆ ಮಾಡಿದ್ದನ್ನು ಕಂಡ ಅಧಿಕಾರಿಗಳು ಕೂಡಲೇ ಅವರಿಗೆ ಪರಿಸರ ಸ್ನೇಹಿ ಬ್ಯಾಗ್‌ ವಿತರಿಸಿದರು.

ಹಸಿರು ತೋರಣ ಬಳಗದ ಪ್ರಮುಖರಾದ ಅಶೋಕ ರೇವಡಿ, ರವಿ ಗೂಳಿ, ಸುಧೀರ ಕತ್ತಿ, ಅಮರೇಶ ಗೂಳಿ, ಎಂ.ಎಸ್‌.ಬಾಗೇವಾಡಿ, ಬಿ.ಎಸ್‌.ಮೇಟಿ, ಎ.ಆರ್‌.ಕಾಮಟೆ, ಸೋಮಶೇಖರ ಚಿರಲದಿನ್ನಿ, ರಾಜಶೇಖರ ಕಲ್ಯಾನಮಠ, ಎಸ್‌.ಎಂ.ಚಲವಾದಿ, ಡಾ.ವಿಜಯಕುಮಾರ ಗೂಳಿ, ಸುರೇಶ ಕಲಾಲ, ಪುರಸಭೆ ಸಿಬ್ಬಂದಿ ಬಸವರಾಜ ಚಲವಾದಿ, ವಿನೋದ ಝಿಂಗಾಡೆ ಇದ್ದರು.

ಶ್ರೀನಿವಾಸರಾವ್‌ ಕುಲಕರ್ಣಿ ಪ್ರಾರ್ಥಿಸಿದರು. ಸಂಗಮೇಶ ಶಿವಣಗಿ ನಾಡಗೀತೆ ಹಾಡಿದರು. ಮಹಾಬಲೇಶ್ವ ಗಡೇದ ನಿರೂಪಿಸಿದರು. ಡಾ| ವೀರೇಶ ಇಟಗಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next