ಮುದ್ದೇಬಿಹಾಳ: ಶರಣರ ಬಾಳು ತೆರೆದ ಪುಸ್ತಕ ಇದ್ದಂತೆ. ಪ್ರತಿಯೊಬ್ಬರೂ ವಿಭೂತಿ ಧಾರಣೆಯಿಂದ ಪ್ರಸನ್ನರಾಗಿ ಶರಣತ್ವ ಪಡೆದುಕೊಳ್ಳುತ್ತಾರೆ. ಶರಣರದ್ದು ನೆಮ್ಮದಿಯಿಂದ ಕೂಡಿದ ಪ್ರಶಾಂತ ಜೀವನ ಆಗಿರುತ್ತದೆ ಎಂದು ಶಿಕ್ಷಕ ಮಲ್ಲನಗೌಡ ಪಾಟೀಲ ಹೇಳಿದ್ದಾರೆ.
ಮುದ್ದೇಬಿಹಾಳ ಪಟ್ಟಣದ ಹುಡ್ಕೋದಲ್ಲಿರುವ ಪದ್ಮರಾಜ್ ದಂಡಾವತಿ ನಿವಾಸದಲ್ಲಿ ಮನೆಯಲ್ಲಿ ಮಹಾಮನೆ ಬಳಗ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಶ್ರಾವಣ ಮಾಸ ದ ವಿಶೇಷ ಕಾರ್ಯಕ್ರಮ ಶರಣ ಶ್ರಾವಣ ಮನೆಯಂಗಳದಿ ಮನದಂಗಳಕ್ಕೆ ಶರಣ ಸಂದೇಶ ಕಾರ್ಯಕ್ರಮದಲ್ಲಿ ಚನ್ನಬಸವಣ್ಣನ ವಚನ ವಿಭೂತಿ ಕುರಿತು ಅವರು ಅನುಭಾವ ನಡೆಸಿಕೊಟ್ಟರು.
ಶುದ್ಧ ವಿಭೂತಿಯನ್ನು ತಯಾರಿಸುವ ವಿಧಾನ ತಿಳಿಸಿಕೊಟ್ಟ ಅವರು ಪ್ರತಿನಿತ್ಯ ಹಣೆಗೆ ವಿಭೂತಿ ಹಚ್ಚಿಕೊಳ್ಳುವ ಮೂಲಕ, ಹಣೆ ಮಧ್ಯೆ ವಿಭೂತಿಯ ತಿಲಕ ಇಟ್ಟುಕೊಳ್ಳುವುದರಿಂದ ದಿನಪೂರ್ತಿ ಮನುಷ್ಯನಿಗೆ ಪ್ರಶಾಂತತೆ ಇರುತ್ತದೆ. ಒತ್ತಡ, ಗೊಂದಲ ನಿವಾರಿಸಲು ಪ್ರಾರ್ಥನೆ, ವಿಭೂತಿ ಧಾರಣೆ ಮಹತ್ವದ್ದಾಗಿದೆ ಎಂದರು.
ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಡಿ.ಬಿ. ವಡವಡಗಿ ಮಾತನಾಡಿ, ಮನೆಯಲ್ಲಿ ಮಹಾಮನೆ ಬಳಗ ಪ್ರತಿ ವರ್ಷ ಶ್ರಾವಣ ಮಾಸಪೂರ್ತಿ ಇಂಥ ಶರಣ ಸಂದೇಶದ ಕಾರ್ಯಕ್ರಮ ಹಮ್ಮಿಕೊಂಡು ಸಾರ್ಥಕ ಕಾರ್ಯ ಮಾಡುತ್ತಿದೆ. ಸಮಾಜಕ್ಕೆ ಇದರಿಂದ ಉತ್ತಮ ಸಂದೇಶ ಹೋಗುತ್ತಿದೆ. ಎಲ್ಲರೂ ಇಂಥ ಚಟುವಟಿಕೆ ನಡೆಸಿ ಮನುಷ್ಯನ ಮಾನಸಿಕ, ಬೌದ್ಧಿಕ ಹಾಗೂ ನಿತ್ಯ ಜೀವನದ ನೆಮ್ಮದಿಗೆ ಅವಕಾಶ ಮಾಡಿಕೊಡಬೇಕು ಎಂದರು.
ಬಾಗಲಕೋಟೆ ಜಿಲ್ಲೆ ಇಳಕಲ್ಲನ ಚಿತ್ತರಗಿ ಸಂಸ್ಥಾನಮಠದಿಂದ ಸಮಾಜ ಮಾತೆ ಪ್ರಶಸ್ತಿಗೆ ಭಾಜನರಾದ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕು ನಾಗರಹಾಳದ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕಿ ರೋಹಿಣಿ ವಡವಡಗಿ (ರೈಲಾ ಮೇಡಂ) ಹಾಗೂ ಪತ್ರಕರ್ತ ಡಿ.ಬಿ. ವಡವಡಗಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ ನಾಲತವಾಡ ಮತ್ತು ಪತ್ನಿ ಮಹಾದೇವಿ ನಾಲತವಾಡ ಅವರನ್ನು ದಂಪತಿ ಸಮೇತ ಪದ್ಮರಾಜ್ ದಂಡಾವತಿ, ನಾಗರತ್ನಾ ದಂಡಾವತಿ, ಮಾಣಿಕಚಂದ ದಂಡಾವತಿ ಮತ್ತು ಕುಟುಂಬದವರು ಸನ್ಮಾನಿಸಿದರು.
ವಿಜಯಪುರ ಜಿಲ್ಲಾ ವಿದ್ಯಾಭಾರತಿ ಶಾಲೆಗಳ ಅಧ್ಯಕ್ಷ ಪ್ರಭು ಕಡಿ ಅವರು ಸನ್ಮಾನಿತರ ಪರಿಚಯ ಮಾಡಿಕೊಟ್ಟು ದಂಡಾವತಿ ಕುಟುಂಬದ ದಾಸೋಹ ಹಿರಿಮೆ ಶ್ಲಾಘಿಸಿದರು. ಮನೆಯಲ್ಲಿ ಮಹಾಮನೆ ಬಳಗ, ಶರಣ ಸಾಹಿತ್ಯ ಪರಿಷತ್, ಕ್ರಿಯೇಟಿವ್ ಫ್ರೆಂಡ್ಸ್ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಹಾಗೂ ಶರಣ, ಶರಣೆಯರು ಇದ್ದರು.
ಹಿರಿಯರಾದ ಎಸ್.ಬಿ. ಬಂಗಾರಿ, ಎಸ್.ಬಿ. ಕನ್ನೂರ ಪ್ರಾರ್ಥಿಸಿದರು. ಶಸಾಪ ಅಧ್ಯಕ್ಷ ಬಸವರಾಜ ನಾಲತವಾಡ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಸಿದ್ದನಗೌಡ ಬಿಜ್ಜೂರ ನಿರೂಪಿಸಿದರು.