ಮುದ್ದೇಬಿಹಾಳ: ತಾಲೂಕಿನ ತಂಗಡಗಿಯಲ್ಲಿ ಮೂರು ದಿನ ನಡೆಯಲಿರುವ ಸುಂಗಠಾಣ ಸಿದ್ದಪ್ಪ ಮುತ್ಯಾನ ಜಾತ್ರೆಗೆ ಕೊರೊನಾ ಬಿಸಿ ತಟ್ಟಿದ್ದು, ಗುರುವಾರ ಗ್ರಾಮ ಪ್ರವೇಶಿಸಿದ ಪಲ್ಲಕ್ಕಿಗಳನ್ನು ಸರಳವಾಗಿ ಸ್ವಾಗತಿಸಲಾಯಿತು.
ಜಾತ್ರೆ ನಿಷೇಧಿಸುವ ಕುರಿತು ಗ್ರಾಮಸ್ಥರಿಗೆ ತಾಲೂಕಾಡಳಿತ ಸಭೆ ನಡೆಸಿ ತಿಳಿವಳಿಕೆ ಮೂಡಿಸಿತ್ತು. ಇದಲ್ಲದೆ ಗುರುವಾರ ತಂಗಡಗಿ ಗ್ರಾಮದ ಹೊರಗೆ ಮುದ್ದೇಬಿಹಾಳ, ನಾಲತವಾಡ, ಹುನಗುಂದ ಭಾಗಗಳಿಂದ ಜಾತ್ರೆಗೆ ಬರುವ ಭಕ್ತರನ್ನು ತಡೆಯಲು ಪೊಲೀಸರು ನಾಕಾಬಂದಿ ಏರ್ಪಡಿಸಿ ಪ್ರತಿಯೊಂದು ವಾಹವನ್ನೂ ತಪಾಸಣೆ ನಡೆಸಿಯೇ ಊರೊಳಕ್ಕೆ ಬಿಡುತ್ತಿದ್ದರು.
ಗ್ರಾಮದಲ್ಲಿಯೂ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಬೀಡುಬಿಟ್ಟು ಹೆಚ್ಚಿನ ಜನಸಂದಣಿ ಸೇರದಂತೆ ನೋಡಿಕೊಳ್ಳಲು ಸಾಕಷ್ಟು ಹರಸಾಹಸ ಪಟ್ಟರು. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಅಂಗಡಿಗಳನ್ನೂ ಬಂದ್ ಮಾಡಿಸಲಾಗಿತ್ತು. ಗ್ರಾಮಸ್ಥರು ಕೂಡಾ ತಾಲೂಕಾಡಳಿತ, ಪೊಲೀಸ್ ಇಲಾಖೆಯ ಕ್ರಮಕ್ಕೆ ಸಹಕಾರ ನೀಡಿದ್ದರು.
ಸಿಂದಗಿ ತಾಲೂಕು ಸುಗಠಾಣದಿಂದ ಕಾಲ್ನಡಿಗೆಯಲ್ಲಿ ಬಂದು ಗುರುವಾರ ಸಂಜೆ ಗ್ರಾಮ ಪ್ರವೇಶಿಸಿದ ಪಲ್ಲಕ್ಕಿಗಳನ್ನು ಗ್ರಾಮದ ಪ್ರಮುಖರು ಸರಳವಾಗಿ ಬರಮಾಡಿಕೊಂಡರು. ಈ ವೇಳೆ ಪಲ್ಲಕ್ಕಿ ಜೊತೆ 100ಕ್ಕೂ ಕಡಿಮೆ ಜನರು ಇದ್ದರು. ಸಂಪ್ರದಾಯದಂತೆ ಪಲ್ಲಕ್ಕಿ ಸ್ವಾಗತಿಸಿಕೊಂಡ ಮೇಲೆ ಕುಂಚಗನೂರ ಗ್ರಾಮದ ಬಳಿ ಇರುವ ಕೃಷ್ಣಾ ನದಿ ತೀರಕ್ಕೆ ಪಲ್ಲಕ್ಕಿ, ಮೂರ್ತಿಗಳನ್ನು ಗಂಗಾ ಸ್ಥಳಕ್ಕೆ ಕಳುಹಿಸಿಕೊಡಲಾಯಿತು. ಸಂಜೆ ದೇವರ ಮೂರ್ತಿಗಳಿಗೆ ಗಂಗಾಸ್ನಾನ ಮಾಡಿಸಿದ ಮೇಲೆ ಅಲ್ಲಿಯೇ ಪ್ರತಿಷ್ಠಾಪಿಸಿ ಕೆಲಹೊತ್ತು ಪೂಜೆ ನಡೆಸಲಾಯಿತು.
ಮದ್ಯ ನೈವೇದ್ಯಕ್ಕೆ ತಡೆ: ಈ ದೇವರಿಗೆ ಭಕ್ತರು ಮದ್ಯವನ್ನು ಬಾನಬುತ್ತಿಯ ಜೊತೆ ನೈವೇದ್ಯವಾಗಿ ಕೊಡುವ ಸಂಪ್ರದಾಯ ಕಳೆದ ಕೆಲ ವರ್ಷಗಳಿಂದ ನಡೆದುಕೊಂಡು ಬಂದಿತ್ತು. ಆದರೆ ಈ ಬಾರಿ ಜಾತ್ರೆಗೆ ನಿಷೇಧ ಇರುವುದರಿಂದ ಇವತ್ತಿನ ಮಟ್ಟಿಗೆ ಮದ್ಯ ನೈವೇದ್ಯ ಕಂಡುಬರಲಿಲ್ಲ. ಬೆರಳೆಣಿಕೆಯಷ್ಟು ಜನ ತಮ್ಮ ಜೊತೆ ಕದ್ದುಮುಚ್ಚಿ ತಂದಿದ್ದ ಮದ್ಯವನ್ನು ನೈವೇದ್ಯವಾಗಿ ಅರ್ಪಿಸಿದರಾದರೂ ಅದು ಹೆಚ್ಚಿನ ಜನರ ಗಮನ ಸೆಳೆಯಲಿಲ್ಲ. ಇನ್ನೂ ಎರಡು ದಿನ ಜಾತ್ರೆಯ ಮೆರುಗು ಇರಲಿದೆ. ಹೀಗಾಗಿ ಆ ಎರಡೂ ದಿನ ಮದ್ಯ ನೈವೇದ್ಯ ನಿಯಂತ್ರಿಸುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಲಿದೆ.
ನಾಳೆ ಪಲ್ಲಕ್ಕಿ ನಿರ್ಗಮನ: ಶುಕ್ರವಾರ ಗ್ರಾಮದ ಭಕ್ತರೊಬ್ಬರ ಮನೆಯಲ್ಲಿ ದೇವರನ್ನು ಪ್ರತಿಷ್ಠಾಪಿಸಲಾಗುತ್ತದೆ. ಭಕ್ತರು ಅಲ್ಲಿಯೇ ನೈವೇದ್ಯ, ಕಾಯಿ, ಕರ್ಪೂರ ಅರ್ಪಿಸಿ ಭಕ್ತಿ ತೋರಿಸುತ್ತಾರೆ. ಶನಿವಾರ ಜಾತ್ರೆ ಮುಕ್ತಾಯಗೊಳ್ಳಲಿದ್ದು, ಅಂದು ಬೆಳಗ್ಗೆ ದೇವರನ್ನು ಹೊತ್ತ ಪಲ್ಲಕ್ಕಿ, ಪೂಜಾರಿಗಳು ಕಾಲ್ನಡಿಗೆಯಲ್ಲೇ ಸುಂಗಠಾಣದತ್ತ ನಿರ್ಗಮಿಸುತ್ತಾರೆ. ಅಲ್ಲಿಯವರೆಗು ಭಕ್ತರನ್ನು ನಿಯಂತ್ರಿಸುವ ಹೊಣೆ ಪೊಲೀಸರು ಮತ್ತು ಸಂಘಟಕರ ಮೇಲಿದೆ. ಹೆಚ್ಚಿನ ಜನಸಂದಣಿ ಸೇರದಂತೆ ನೋಡಿಕೊಳ್ಳಲು ಎಲ್ಲ ಕ್ರಮ ಕೈಕೊಳ್ಳಲಾಗಿದೆ ಎಂದು ತಾಲೂಕಾಡಳಿತ, ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.
ನಡೆಯದ ಬೆನ್ನ ಮೇಲಿನ ನಡಿಗೆ: ಪಲ್ಲಕ್ಕಿ ಗ್ರಾಮದೊಳಕ್ಕೆ ಬರುವಾಗ, ಗ್ರಾಮದಿಂದ ಹೊರಡುವಾಗ ಹರಕೆ ಹೊತ್ತ ಭಕ್ತರು ಮಡಿಯಾಗಿ ನೆಲದ ಮೇಲೆ ಬೆನ್ನು ಮೇಲಾಗಿ ಮಲಗುತ್ತಾರೆ. ಅವರ ಮೇಲೆ ಪಲ್ಲಕ್ಕಿ ಹೊತ್ತ ಪೂಜಾರಿಗಳು ನಡೆದಾಡಿ ಹರಕೆ ಸ್ವೀಕರಿಸುತ್ತಾರೆ. ಈ ಸಂಪ್ರದಾಯ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಜಾತ್ರೆಗೆ ನಿಷೇಧ ಇದ್ದುದರಿಂದ ಮೊದಲ ದಿನ ಈ ಸಂಪ್ರದಾಯಕ್ಕೆ ಕಡಿವಾಣ ಹಾಕಲಾಗಿತ್ತು.