Advertisement

ಅರ್ಹರಿಗೆ ಸೌಲಭ್ಯ ದೊರಕಲಿ: ನಡಹಳ್ಳಿ

10:30 AM Jul 07, 2019 | Naveen |

ಮುದ್ದೇಬಿಹಾಳ: ಸರ್ಕಾರದ ಸೌಲಭ್ಯ ಪಡೆಯುವಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಅರ್ಹರು ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಆಮಿಷಕ್ಕೆ ಬಲಿಯಾಗಬಾರದು. ಸೌಲಭ್ಯಗಳು ನಿಜವಾದ ಅರ್ಹರಿಗೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಹೇಳಿದರು.

Advertisement

ಮುದ್ದೇಬಿಹಾಳ ತಾಲೂಕು ಹಡಲಗೇರಿ ಗ್ರಾಮದಲ್ಲಿ ಶನಿವಾರ ಕಂದಾಯ ಇಲಾಖೆ ವತಿಯಿಂದ ಆಯೋಜಿಸಿದ್ದ ಪಿಂಚಣಿ ಅದಾಲತ್‌ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರದ ಪಿಂಚಣಿ ಸೌಲಭ್ಯ ಒದಗಿಸುವಾಗ ಅರ್ಹರು ಬಿಟ್ಟು ಹೋಗ್ತಾರೆ. ಅನರ್ಹರು ಲಾಭ ಪಡೀತಾರೆ. ಅನರ್ಹರನ್ನು ತೆಗೀರಿ ಅಂದ್ರೆ ಅರ್ಹರನ್ನು ತೆಗಿತೀರಿ. ಗ್ರಾಮ ಲೆಕ್ಕಿಗರು ಗ್ರೌಂಡ್‌ನ‌ಲ್ಲಿ ಹೋಗಿ ನೋಡೊಲ್ಲ. ನಿಜವಾದ ಅರ್ಹರನ್ನು ಗುರ್ತಿಸುವ ಕೆಲಸ ಆಗಬೇಕು. ಸರ್ಕಾರದ ಸೌಲಭ್ಯ ನಿಜವಾಗಿಯೂ ಅರ್ಹತೆ ಇರುವವರಿಗೆ ಮಾತ್ರ ತಲುಪುವಂತೆ ನೋಡಿಕೊಳ್ಳಬೇಕು ಎಂದರು.

ಇದಕ್ಕೂ ಮುನ್ನ ಅದಾಲತ್‌ಗೆ ಚಾಲನೆ ನೀಡಿ ಮಾತನಾಡಿದ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಪಿಂಚಣಿ ಅದಾಲತ್‌ ಬಹಳ ವರ್ಷಗಳಿಂದ ಇರುವಂಥ ಯೋಜನೆ. ಅಧಿಕಾರಿಗಳ ಆಲಸ್ಯತನ, ಇನ್ನಿತರ ಕಾರಣಗಳಿಂದ ಅದು ಮುದ್ದೇಬಿಹಾಳ ಕೇಂದ್ರ ಸ್ಥಾನಕ್ಕೆ ಸೀಮಿತವಾಗಿತ್ತು. ನೂತನ ತಹಶೀಲ್ದಾರ್‌ ವಿನಯಕುಮಾರ ಪಾಟೀಲ ಹಳ್ಳಿಯಿಂದ ಬಂದವರು, ಬಡವರ ದೀನ ದಲಿತರ ಕಷ್ಟ ಸುಖ ಅರಿತವರು. ಕಚೇರಿಯಲ್ಲಿ ಕುಳಿತು ಬೇರೆಯವರನ್ನು ಅದಾಲತ್‌ಗೆ ಕಳಿಸದೇ ತಾವೇ ಸ್ವತಃ ಬಂದಿದ್ದಾರೆ. ಅಧಿಕಾರಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಪಿಂಚಣಿ ಅದಾಲತ್‌, ಅಭಿವೃದ್ಧಿ ಕಾರ್ಯ ಜನರಿಗೆ ತಲುಪುತ್ತದೆ. ಮಧ್ಯವರ್ತಿಗಳ ಮುಖಾಂತರ ಅರ್ಜಿ ಕೊಡಬೇಡಿ. ನೇರವಾಗಿ ಅರ್ಜಿ ಕೊಡಿ ಎಂದರು.

ತಹಶೀಲ್ದಾರ್‌ ವಿನಯಕುಮಾರ ಪಾಟೀಲ ಅವರು ಕಂದಾಯ ಇಲಾಖೆಯಿಂದ ಸಾಮಾಜಿಕ ಭದ್ರತಾ ಯೋಜನೆ ಅಡಿ ಲಭ್ಯವಿರುವ ವಿವಿಧ ಸೌಲಭ್ಯಗಳು ಮತ್ತು ಅವುಗಳನ್ನು ಪಡೆದುಕೊಳ್ಳಲು ಇರುವ ಮಾನದಂಡಗಳ ಕುರಿತು ಮಾತನಾಡಿದರು.

Advertisement

ಒಂದು ಸಾರಿ ಕೊಡುವ ಸೌಲಭ್ಯಗಳಾದ ಅಂತ್ಯಸಂಸ್ಕಾರ ಯೋಜನೆ (5000 ರೂ. ನೆರವು), ರಾಷ್ಟ್ರೀಯ ಕುಟುಂಬ ನೆರವು ಯೋಜನೆ (20,000 ರೂ. ನೆರವು) ಬಗ್ಗೆ ಜನರು ಅರಿವು ಮೂಡಿಸಿಕೊಂಡು ಪ್ರಯೋಜನ ಪಡೆದುಕೊಳ್ಳಬೇಕು. ತಾಲೂಕು ಆಡಳಿತವೇ ಮನೆ ಬಾಗಿಲಿಗೆ ಬಂದಿದೆ. ಈ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು. ಸೌಲಭ್ಯ ಪಡೆಯಲು ಮಧ್ಯವರ್ತಿಗಳ ಮೊರೆ ಹೋಗಬೇಡಿ. ಗ್ರಾಮಲೆಕ್ಕಿಗ, ಕಂದಾಯ ನಿರೀಕ್ಷಕರ ವರದಿ ಅಂತಿಮ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದರು.

ಈ ವೇಳೆ 24 ಪಿಂಚಣಿ ಅರ್ಜಿಗಳನ್ನು ಸ್ಥಳದಲ್ಲೇ ಅಂತಿಮಗೊಳಿಸಿ ಆದೇಶ ಪತ್ರ ನೀಡಲಾಯಿತು. ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎಸ್‌.ಬಿ. ಚಲವಾದಿ, ಪುರಸಭೆ ಮಾಜಿ ಸದಸ್ಯ ಶರಣು ಬೂದಿಹಾಳಮಠ, ಪಿಡಿಒ ಶೋಭಾ ಮುದಗಲ್, ಬಿಜೆಪಿ ಧುರೀಣ ದೇವೇಂದ್ರ ವಾಲೀಕಾರ, ಶಿವಪುತ್ರಪ್ಪ ಹರಿಂದ್ರಾಳ, ಸಿದ್ದನಗೌಡ ಹರಿಂದ್ರಾಳ, ಭೀಮಣ್ಣ ಹರಿಂದ್ರಾಳ, ಬಸವರಾಜ ಬಿರಾದಾರ, ಶರಣಬಸು ವಾಲೀಕಾರ, ಡಿಇಒ ರಾಮಕೃಷ್ಣ ಗುಡಿಮನಿ, ಗ್ರಾಮ ಲೆಕ್ಕಾಧಿಕಾರಿ ಹರ್ಷಿತ್‌ಗೌಡ ಸೇರಿ ಹಲವರು ಇದ್ದರು. ಎಚ್.ಡಿ. ಬಡಿಗೇರ ಸ್ವಾಗತಿಸಿದರು. ಎಂ.ಬಿ. ಗುಡಗುಂಟಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next