ಮುದ್ದೇಬಿಹಾಳ: ಒಂದು ಚಕ್ಕಡಿಗೆ ಒಂದು ಕುದುರೆ ಮತ್ತೂಂದು ಎತ್ತು ಕಟ್ಟಿ ರೇಸ್ ಮಾಡಿಸಿ ಓಟದಲ್ಲಿ ಎತ್ತಿನ ವೇಜ್ ಕಡಿಮೆಯಾದರೆ ಎತ್ತಿನ ಚರ್ಮ ಹರಿಯುವಂತೆ ಜಬರಿಯಿಂದ ಬಾರಿಸುತ್ತ್ತ ಓಟದಲ್ಲಿ ಭಾಗಿಯಾದ ಅಮಾನವೀಯ ಘಟನೆ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ನಡೆದಿದೆ.
ಪ್ರತಿ ಶ್ರಾವಣ ಮಾಸದ ಕೊನೆ ಸೋಮವಾರ ನಡೆಯುವ ನಂದಿ ಬಸವೇಶ್ವರ ಜಾತ್ರೆಯ ನಿಮಿತ್ತ ಜಾತ್ರಾ ಕಮೀಟಿಯಿಂದ ಇಂತಹ ಅಮಾನವೀಯ ಸ್ಪರ್ಧೆ ಏರ್ಪಡಿಸಲಾಗಿತ್ತು. ಗ್ರಾಮದಲ್ಲಿ ಇಂತಹ ರೇಸ್‌ಗೆ ಸಾಕಷ್ಟು ವಿರೋಧವಿದ್ದರೂ ಪ್ರತಿ ವರ್ಷವೂ ಈ ಸ್ಪರ್ಧೆ ನಡೆಸುತ್ತ್ತ ಬರಲಾಗುತ್ತದೆ. ಪ್ರಾಣಿ ಹಿಂಸೆ ಮಾಡಬಾರದು ಎಂಬ ಕಾನೂನು ಇದ್ದರೂ ಕುಂಟೋಜಿ ಗ್ರಾಮಕ್ಕೆ ಮಾತ್ರ ಇಲ್ಲದಂತಾಗಿತ್ತು.
ರೇಸ್ ಸ್ಪರ್ಧೆಯಲ್ಲಿ ಒಂದು ಚಕ್ಕಡಿಯಲಿ ಇಬ್ಬರು ಸ್ಪರ್ಧಿಗಳು ಭಾಗಿಯಾಗುವದು ಹಾಗೂ ಚಕ್ಕಡಿಗೆ ಒಂದು ಎತ್ತನ್ನು ಕಟ್ಟಿದರೆ ಇನ್ನೊಂದಕ್ಕೆ ಕುದುರೆಯನ್ನು ಕಟ್ಟಲಾಗಿತ್ತು. ಕುದುರೆಯ ಸರಿಸಾಟಿಯಾಗಿಯೇ ಎತ್ತು ಓಟ ಮಾಡಬೇಕು. ಇಲ್ಲವಾದಲ್ಲಿ ಚಕ್ಕಡಿಯಲ್ಲಿದ್ದ ಒಬ್ಬ ಹಗ್ಗವನ್ನು ಹಿಡಿದರೆ ಇನ್ನೊಬ್ಬ ಎತ್ತಿಗೆ ಛಡಿ ಏಟು ನೀಡುವನು. ಈ ಓಟದ ಸ್ಪರ್ಧೆಯಲ್ಲಿ ಎತ್ತಿಗೆ ಚಡಿ ಏಟು ಬಿಳುತ್ತಿದ್ದು ರಕ್ತ ಸುರಿಯುತ್ತಿದ್ದನ್ನು ಕಂಡು ನೂರಾರು ಜನರ ಕಣ್ಣಲ್ಲಿ ನೀರು ಬಂದಂತಾಯಿತು.
ಎತ್ತಿಗೆ ಕರೆಂಟ್ ಶಾಕ್: ಚಕ್ಕಡಿ ಸ್ಪರ್ಧೆಗೆ ಚಾಲನೆ ನೀಡುತ್ತಿದ್ದಂತೆ ಕೆಲ ಸ್ಪರ್ಧಿಗಳು ಜಾತ್ರಾ ಕಮೀಟಿ ಕಣ್ಣು ತಪ್ಪಿಸಿ ಎತ್ತುಗಳಿಗೆ ಕರೆಂಟ್ ಶಾಕ್ ನೀಡಿದ್ದು ಕಂಡು ಬಂತು. ಪ್ರಾಣಿಗೆ ಯಾವುದೇ ರೀತಿಯ ಕರೆಂಟ್ ಶಾಕ್ ನೀಡುವುದು ಕಾನೂನು ಬಾಹೀರವಾಗಿದ್ದರೂ ಕುಂಟೋಜಿಯಲ್ಲಿ ಯಾವುದೇ ಕಾನೂನು ಎದುರಾಗಲಿಲ್ಲ್ಲ ಎಂದು ಸ್ಥಳೀಯರು ಮಾತನಾಡಿದರು.
ಅಧಿಕಾರಿಗಳ ನಿರ್ಲಕ್ಷ್ಯ: ಜಾತ್ರಾ ಕಮೀಟಿಯವರು ಜಾತ್ರೆಯಲ್ಲಿ ಯಾವುದೇ ರೀತಿಯ ಹಿಂಸೆಯ ಸ್ಪರ್ಧೆಗಳನ್ನು ನಡೆಸಬಾರದು ಎಂದು ತಾಲೂಕು ಮಟ್ಟದ ಅಧಿಕಾರಿಗಳು ಮುನ್ನೆಚ್ಚರಿಕೆಯನ್ನು ಪ್ರತಿಯೊಂದು ಜಾತ್ರೆಯಲ್ಲೂ ನೀಡುತ್ತಾರೆ. ಆದರೆ ಗುರುವಾರ ಕುಂಟೋಜಿಯಲ್ಲಿ ನಡೆದ ಜಾತ್ರಾ ಸ್ಪರ್ಧೆಯಲ್ಲಿ ಎತ್ತುಗಳಿಗೆ ಹಿಂಸೆಯನ್ನು ನೀಡುತ್ತಿದ್ದರೂ ಅಧಿಕಾರಿಗಳು ಮಾತ್ರ ಸ್ಥಳದಲ್ಲಿ ಕಾಣಲಿಲ್ಲ ಎಂದು ಗ್ರಾಮದ ಪ್ರಜ್ಞಾವಂತ ನಾಗರಿಕರು ದೂರುತ್ತಿದ್ದಾರೆ.
ಗ್ರಾಮದಲ್ಲಿ ನಡೆಯುವ ಬಸವೇಶ್ವರ ಜಾತ್ರೆಯಲ್ಲಿ ಪ್ರತಿ ವರ್ಷವೂ ಈ ಅಮಾನವೀಯ ಘಟನೆಯ ಸ್ಪರ್ಧೆ ಏರ್ಪಡಿಸಲಾಗುತ್ತಿದೆ. ಇದರ ಬಗ್ಗೆ ಸಾಕಷ್ಟು ಬಾರಿ ನಾನು ವಿರೋಧಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಹಿಂದೆ ಈ ಸ್ಪರ್ಧೆಯಿಂದ ಕೆಲವರು ಪ್ರಾಣವನ್ನೆ ಕಳೆದುಕೊಂಡಿರೆ ಇನ್ನೂ ಕೆಲ ಎತ್ತುಗಳೂ ಸಾವಿಗಿಡಾಗಿವೆ. ಈಗಲಾದರೂ ಅಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
•
ಬಿ.ಎಚ್.ಹುಲಗಣ್ಣಿಕುಂಟೋಜಿ ಗ್ರಾಮಸ್ಥ