Advertisement

ಇಲ್ಲಿದೆ ಸಮಸ್ಯೆಗಳ ಸರಮಾರೆ

01:09 PM Nov 24, 2019 | Naveen |

ಶಿವಕುಮಾರ ಶಾರದಳ್ಳಿ
ಮುದ್ದೇಬಿಹಾಳ:
ಪಟ್ಟಣದ 4ನೇ ವಾರ್ಡ್‌ ಮಹಾಂತೇಶನಗರ ಬಡಾವಣೆಯ ಎಂಜಿಎಂಕೆ, ಶಾರದಾ ಶಾಲೆ ಮತ್ತು ಬಿಎಸ್‌ಎನ್‌ಎಲ್‌ ಕಚೇರಿ ಮಧ್ಯೆ ಬರುವ ಪ್ರದೇಶದಲ್ಲಿ ಮೊಗೆದಷ್ಟು ಸಮಸ್ಯೆಗಳು ಹೆಚ್ಚಾಗಿ ಕಂಡು ಬರತೊಡಗಿವೆ.

Advertisement

ಶನಿವಾರ ಉದಯವಾಣಿಯಲ್ಲಿ ಈ ಪ್ರದೇಶದ ಬಗ್ಗೆ ವಿಶೇಷ ವರದಿ ಮಾಡಿ ಪುರಸಭೆ ಅಧಿ ಕಾರಿಗಳ ಅಸಡ್ಡೆಯನ್ನು ತೋರಿಸಲಾಗಿತ್ತು. ವರದಿಗೆ ಸ್ಪಂದಿಸಿ ಪುರಸಭೆಯವರು ಸ್ವಲ್ಪಮಟ್ಟಿಗೆ ಸ್ಪಂದಿಸಿದರು. ಉದಯವಾಣಿಯ ವಿಶೇಷ ವರದಿಗೆ ಸ್ಪಂದಿಸಿದ ಅಲ್ಲಿನ ನಿವಾಸಿಗಳು ತಮ್ಮ ಪ್ರದೇಶದಲ್ಲಿ ಇರುವ ಇನ್ನೂ ಕೆಲವು ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಪುರಸಭೆ ಮುಂದಾಗಬೇಕು ಎಂದು ಒತ್ತಡ ಹೇರುತ್ತಿರುವುದು ಅಲ್ಲಲ್ಲಿ ಕಂಡುಬಂತು.

ಚರಂಡಿ, ರಸ್ತೆ ಸ್ವಚ್ಚತೆ ಇಲ್ಲ: ಈ ಪ್ರದೇಶದಲ್ಲಿ ರಸ್ತೆ ಸಮರ್ಪಕವಾಗಿ ಇಲ್ಲದ ಕಾರಣ ಇರುವ ಮಣ್ಣಿನ ರಸ್ತೆಯಲ್ಲೂ ಹೆಚ್ಚುವರಿ ನೀರಿನಿಂದ ಕೆಸರು ಸೃಷ್ಟಿಯಾಗಿ ಅಂಥದ್ದರಲ್ಲೇ ವಿದ್ಯಾರ್ಥಿಗಳು, ಜನರು ಸಂಚರಿಸುವ ಪರಿಸ್ಥಿತಿ ಇದೆ. ಇದರ ಜೊತೆಗೆ ರಸ್ತೆ ಕಸ ಹೊಡೆಯುವುದಿಲ್ಲ, ಚರಂಡಿಗಳನ್ನು ಸ್ವತ್ಛಗೊಳಿಸುವುದಿಲ್ಲ. ಹೀಗಾಗಿ ರಸ್ತೆ, ಚರಂಡಿಯಲ್ಲಿ ಕಲ್ಮಶ ಹೆಚ್ಚಾಗಿ ಬಡಾವಣೆ ನಿವಾಸಿಗಳು ನೆಮ್ಮದಿಯಿಂದ ಜೀವನ ನಡೆಸುವುದು ಕಷ್ಟಕರವಾಗಿ ಪರಿಣಮಿಸಿದೆ ಎನ್ನುವ ಅಳಲನ್ನು ತೋಡಿಕೊಂಡರು. ಇದಕ್ಕೆ ಉದಾಹರಣೆ ಎನ್ನುವಂತೆ ಕೆಲ ಮನೆಗಳ ಪಕ್ಕ ಪುರಸಭೆಯವರು ನಿರ್ಮಿಸಿರುವ ಚರಂಡಿಯಲ್ಲಿ ಕೊಳಚೆ ಮಡುಗಟ್ಟಿ ನೀರು ನಿಂತಲ್ಲೇ ನಿಂತು ಕೆಟ್ಟ ವಾಸನೆ ಬೀರುತ್ತಿರುವುದು ಕಂಡುಬಂತು.

ಬೀದಿ ದೀಪ ಇಲ್ಲ: ಈ ಪ್ರದೇಶದಲ್ಲಿ ಮೂರು ಖಾಸಗಿ ಶಾಲೆಗಳು ಇವೆ. ಬಿಎಸ್‌ ಎನ್‌ಎಲ್‌ ಕಚೇರಿ ಇದೆ. ಪಕ್ಕದಲ್ಲೇ ಒಂದು ಕಡೆ ರಾಜ್ಯ ಹೆದ್ದಾರಿ, ಮತ್ತೂಂದು ಕಡೆ ಮುಖ್ಯ ಬಜಾರ್‌ಗೆ ಹೋಗುವ ರಸ್ತೆ ಇವೆ. ಇದೇ ಪ್ರದೇಶದಲ್ಲಿ ಸರ್ಕಾರಿ ಬಾಲಕಿಯರ ಹಾಸ್ಟೆಲ್‌, ಪ್ರಾಥಮಿಕ ಶಾಲೆಯೂ ಇದೆ. ಹೀಗಿದ್ದರೂ ಇಲ್ಲಿನ ಪ್ರದೇಶಕ್ಕೆ ಬೀದಿ ದೀಪಗಳ ಸಮರ್ಪಕ ಭಾಗ್ಯ ಇಲ್ಲವಾಗಿದೆ. ಅನೇಕ ಸ್ಥಳಗಳಲ್ಲಿ ವಿದ್ಯುತ್‌ ಕಂಬಗಳಿದ್ದರೂ ಬಲ್ಬ್ ಹಾಕದೆ ಇರುವುದರಿಂದ ರಸ್ತೆಗೆ ರಾತ್ರಿ ಹೊತ್ತು ಬೆಳಕಿನ ಭಾಗ್ಯ ಇಲ್ಲವಾಗಿದೆ. ಕೆಲವೆಡೆ ಕತ್ತಲೆಯಲ್ಲೇ ಇಲ್ಲವೆ ಜನರು ತಮ್ಮ ಮನೆ ಮುಂದೆ ಹಾಕಿರುವ ಬಲ್ಬ್ಗಳ ಬೆಳಕಿನಲ್ಲೇ ಏಳುತ್ತ ಬೀಳುತ್ತ ಸಂಚರಿಸುವ ಅನಿವಾರ್ಯತೆ ಇದೆ ಎನ್ನುವ ಅಳಲು ನಿವಾಸಿಗಳದ್ದಾಗಿದೆ.

ನೀರಿನ ಸಮಸ್ಯೆ ಬಗೆಹರಿಸಿರುವ ಪುರಸಭೆ ಆದಷ್ಟು ಬೇಗ ರಸ್ತೆ, ಚರಂಡಿ, ಬೀದಿ ದೀಪ ಮುಂತಾದ ಅವಶ್ಯಕ ಮೂಲ ಸೌಕರ್ಯಗಳ ಸಮಸ್ಯೆಯನ್ನೂ ಬಗೆಹರಿಸಿ ಬಡಾವಣೆ ನಿವಾಸಿಗಳು ನೆಮ್ಮದಿಯ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು. ಪುರಸಭೆಗೆ ಜನರು ಕಟ್ಟುವ ತೆರಿಗೆಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next