Advertisement

ಓದುಗರ ನಿರುಪಯುಕ್ತ ಗ್ರಂಥಾಲಯ

04:17 PM Nov 01, 2019 | Naveen |

ಮುದ್ದೇಬಿಹಾಳ: ಪಟ್ಟಣದಲ್ಲಿರುವ ಒಂದೇ ಒಂದು ಸರ್ಕಾರಿ ಕೇಂದ್ರ ಗ್ರಂಥಾಲಯ ಶಾಖೆ ಮೂಲ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದೆ. ಸ್ವಂತ ಕಟ್ಟಡ ಇಲ್ಲದ್ದರಿಂದ ಬಾಡಿಗೆ ಕಟ್ಟಡದ ಒಂದೇ ಕೋಣೆಯಲ್ಲಿ ಸದ್ಯ ಕಾರ್ಯ ನಿರ್ವಹಿಸುತ್ತಿದ್ದು, ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಸಿಬ್ಬಂದಿಯೂ ಸರಿಯಾಗಿ ಕೆಲಸಕ್ಕೆ ಬಾರದಿರುವುದರಿಂದ ಓದುಗರಿಗೆ ನಿರುಪಯುಕ್ತ ಗ್ರಂಥಾಲಯವಾಗಿದೆ.

Advertisement

ಆಲಮಟ್ಟಿ ರಸ್ತೆ ಪಕ್ಕ ಪ್ರವಾಸಿ ಮಂದಿರ ಎದುರಿನ ಬಿಲ್ಡಿಂಗ್‌ನ ನೆಲಮಾಳಿಗೆಯಲ್ಲಿ ಈ ಗ್ರಂಥಾಲಯ 13 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಇಂಡಿ ಮೂಲದ ಚೌಧರಿ ಎಂಬುವವರನ್ನು ಗ್ರಂಥಾಲಯ ಸಹಾಯಕರಾಗಿ ಇಲ್ಲಿಗೆ ನಿಯೋಜಿಸಲಾಗಿದೆ. ಆದರೆ, ಅವರು ಮನಸ್ಸಿಗೆ ಬಂದಾಗ ಕರ್ತವ್ಯಕ್ಕೆ ಬರುತ್ತಾರೆ.

ಇನ್ನು ಸಿಬ್ಬಂದಿ ಮನಸ್ಸಿಗೆ ತಿಳಿದಾಗ ಬಾಗಿಲು ತೆರೆಯುತ್ತಾರೆ. ಹೀಗಾಗಿ ಇಲ್ಲಿನ ಗ್ರಂಥಾಲಯ ಸದ್ಬಳಕೆ ಆಗುತ್ತಿಲ್ಲ. ಸ್ವಂತ ಕಟ್ಟಡ ಭಾಗ್ಯ ಇಲ್ಲ: 8-2-1990ರಂದು ಕೇಂದ್ರ ಗ್ರಂಥಾಲಯ ನೇತಾಜಿ ನಗರದ ಗರಡಿ ಮನೆ ಬಳಿಯ ಸಮುದಾಯ ಭವನವೊಂದರಲ್ಲಿ ಆರಂಭವಾಯಿತು. ನಂತರ 16 ವರ್ಷದ ನಂತರ ಕಾರಣಾಂತರಗಳಿಂದ 2006ರಲ್ಲಿ ಸಗರಿ ಅವರ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಮೊದಲು ತಲಾ ಒಬ್ಬ ಸಿ,ಡಿ ದರ್ಜೆ ಸಿಬ್ಬಂದಿ ಇದ್ದರು. ಈಗ ಇಬ್ಬರು ಸಿ ದರ್ಜೆ ಸಿಬ್ಬಂದಿಯನ್ನು ಮಾತ್ರ ನಿಯೋಜಿಸಲಾಗಿದೆ.

ಕೇಂದ್ರ ಗ್ರಂಥಾಲಯ ಆರಂಭಗೊಂಡು ಮೂರು ದಶಕವಾಗುತ್ತ ಬಂದರೂ ಇನ್ನೂ ಸ್ವಂತ ಕಟ್ಟಡ ಭಾಗ್ಯ ಕಂಡಿಲ್ಲ. ಓದುಗರಿಗೆ ಕಿರಿಕಿರಿ: ಬಾಡಿಗೆ ಕಟ್ಟಡದ ನೆಲ ಅಂತಸ್ತಿನ ವಿಶಾಲವಾದ ಒಂದೇ ಕೋಣೆಯಲ್ಲಿರುವ ಗ್ರಂಥಾಲಯ ವಿದ್ಯುತ್‌ ಕೈಕೊಟ್ಟಾಗ ಕತ್ತಲೆ ಆವರಿಸುತ್ತದೆ. ಇದು ಓದುಗರಿಗೆ ದೊಡ್ಡ ಸಮಸ್ಯೆಯಾಗಿದೆ. ಈಗಾಗಲೇ 27,000 ಪುಸ್ತಕಗಳು ಗ್ರಂಥಾಲಯದಲ್ಲಿದ್ದು, ಪ್ರಸಕ್ತ ವರ್ಷ 1,000 ಪುಸ್ತಕಗಳು ಹೆಚ್ಚುವರಿಯಾಗಿ ಬಂದಿವೆ. ಸೂಕ್ತ
ಪ್ರಮಾಣದಲ್ಲಿ ರ್ಯಾಕ್‌(ಕಪಾಟು) ಒದಗಿಸದೆ ಇರುವುದರಿಂದ ಸಾವಿರಾರು ಪುಸ್ತಕಗಳನ್ನು ಟೇಬಲ್‌
ಮೇಲೆ ಜೋಡಿಸಲಾಗಿದೆ. ನಿತ್ಯ 50-60 ಓದುಗರು ಬರುತ್ತಾರೆ.

ಸ್ಥಳಾವಕಾಶ ಕೊರತೆಯಿಂದಾಗಿ ಎರಡು ಟೇಬಲ್‌ಗೆ ತಲಾ 6 ಖುರ್ಚಿಗಳಂತೆ 12 ಜನಕ್ಕೆ ಮಾತ್ರ ಕೂಡಲು ಅವಕಾಶ ಇದೆ. ಹೆಚ್ಚು ಜನರು ಬಂದರೆ ನಿಂತಿಕೊಂಡು ಓದಬೇಕಾದ ಸ್ಥಿತಿ ಮೊದಲಿತ್ತು. ಈಗ 10 ಹೆಚ್ಚುವರಿ ಖುರ್ಚಿ ಒದಗಿಸಲಾಗಿದ್ದು, ಓದುಗರು ನಿಂತು ಓದುವುದಕ್ಕೆ ಕಡಿವಾಣ ಹಾಕಲಾಗಿದೆ. ಎಲ್ಲ ನಿಯತಕಾಲಿಕೆ, ವಾರ, ಪಾಕ್ಷೀಕ, ಮಾಸ ಪತ್ರಿಕೆಗಳ ಲಭ್ಯತೆ ಇದ್ದರೂ ಸ್ಥಳಾವಕಾಶ ಕೊರತೆಯಿಂದ ಪ್ರಯೋಜನಕ್ಕೆ ಬಾರದಾಗಿದೆ. ಸುಮಾರು 2,000 ಜನ
ಸದಸ್ಯರು ಗ್ರಂಥಾಲಯದ ಸದಸ್ಯತ್ವ ಪಡೆದಿದ್ದು, ಎರವಲು ಆಧಾರದ ಮೇಲೆ ಪುಸ್ತಕಗಳನ್ನು ಮನೆಗೊಯ್ದು ಮರಳಿಸುವವರ ಸಂಖ್ಯೆ ಗಣನೀಯವಾಗಿದೆ.

Advertisement

ರಸ್ತೆಯಲ್ಲಿ ಸಂಚರಿಸುವವರಿಗೆ ಕಟ್ಟಡ ಮುಂದೆ ಹಾಕಿರುವ ಬೋರ್ಡ್‌ ನೋಡಿಯೇ ನೆಲ ಅಂತಸ್ತಿನ ಒಳಭಾಗದಲ್ಲಿ ಗ್ರಂಥಾಲಯ ಇದೆ ಎನ್ನುವುದು ಗೊತ್ತಾಗುತ್ತದೆ. ಇಲ್ಲವಾದರೆ ಇಲ್ಲಿ ಗ್ರಂಥಾಲಯ ಇದೆ ಅನ್ನೋದು ಗೊತ್ತಾಗುವುದಿಲ್ಲ.

ಒಟ್ಟಾರೆ ಕೇಂದ್ರ ಗ್ರಂಥಾಲಯ ಪಟ್ಟಣದಲ್ಲಿ ನೆಪಕ್ಕೆ ಮಾತ್ರ ಕಾರ್ಯನಿರ್ವಹಿಸುತ್ತಿದೆಯೇ ಹೊರತು ಸಾರ್ವಜನಿಕರಿಗೆ ಇದರಿಂದ ಹೆಚ್ಚಿನ ಪ್ರಯೋಜನ ದೊರಕುತ್ತಿಲ್ಲ. ವಿದ್ಯಾರ್ಥಿಗಳು ಮತ್ತು ಬೆರಳೆಣಿಕೆಯಷ್ಟು ವಯೋವೃದ್ಧರು ನಿತ್ಯ ಗ್ರಂಥಾಲಯಕ್ಕೆ ಬರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next