Advertisement

ಕಾನೂನು ಅರಿವು ಮೂಡಿಸಿ

07:32 PM Dec 25, 2019 | Team Udayavani |

ಮುದ್ದೇಬಿಹಾಳ: ಲೈಂಗಿಕ ದೌರ್ಜನ್ಯ ವಿರೋಧಿ ಕಾನೂನುಗಳ ಅರಿವು ಮೂಡಿಸಲು ಸಾಮಾಜಿಕ ಸಂಘಟನೆಗಳು ಹೆಚ್ಚು ಕ್ರಿಯಾಶೀಲವಾಗಬೇಕು ಎಂದು ಸಿಡಿಪಿಒ ಗೀತಾ ಗುತ್ತರಗಿಮಠ ಹೇಳಿದರು.

Advertisement

ಇಲ್ಲಿನ ಹುಡ್ಕೋದಲ್ಲಿರುವ ಕೋರ್ಟ್ ನ ವಕೀಲರ ಸಂಘದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ವಿವಿಧ ಸರ್ಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ಬಾಲಕಿಯರು, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಎಚ್‌ಐವಿ ಏಡ್ಸ್‌ ಕುರಿತ ಕಾನೂನು ಅರಿವು ನೆರವು ಕಾರ್ಯಾಗಾರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೌರ್ಜನ್ಯ ನಡೆದಾಗ ಅನೇಕ ಸಂದರ್ಭ ಸಂಕುಚಿತ ಮನೋಭಾವವೂ ಪ್ರಕರಣ ಮುಚ್ಚಿ ಹಾಕಲು ಕಾರಣವಾಗುತ್ತದೆ.
ಜಿಲ್ಲಾ ಮಟ್ಟದಲ್ಲಿರುವ ಮಕ್ಕಳ ಕಲ್ಯಾಣ ಸಮಿತಿ ಇಂಥ ಪ್ರಕರಣ ವಿಶೇಷವಾಗಿ ಹ್ಯಾಂಡಲ್‌ ಮಾಡುತ್ತೆ. ಮಾಧ್ಯಮದವರೂ ಸೇರಿ ಯಾರೂ ದೌರ್ಜನ್ಯಕ್ಕೊಳಗಾದ ಮಕ್ಕಳ ಗುರುತು ಬಹಿರಂಗಪಡಿಸುವಂತಿಲ್ಲ. ಎಚ್‌ಐವಿ ಇರುವವರಿಗೂ ಇಲಾಖೆ ವಿಶೇಷ ಯೋಜನೆ ಅಡಿ ಪೌಷ್ಟಿಕ ಆಹಾರ, ಆರ್ಥಿಕ ನೆರವು ನೀಡಿ ವಿಶೇಷ ಕಾಳಜಿ ತೋರಿಸುತ್ತದೆ ಎಂದರು.

ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಧೀಶೆ ಕೆ.ಜಿ. ಚಿಂತಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಪೋಕ್ಸೋ ಕಾಯ್ದೆಯಡಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯದ 100 ಪ್ರಕರಣಗಳು ಇದ್ದರೆ ಅವುಗಳ ವಿಚಾರಣೆಗೆ ವಿಶೇಷ ಕೋರ್ಟ್‌ ಸ್ಥಾಪಿಸಿ ಅಲ್ಲೇ ಕೇಸ್‌ ನಡೆಸಲು ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ. ಇದು ಸದ್ಯ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ದೌರ್ಜನ್ಯಕ್ಕೊಳಗಾದ ಮಕ್ಕಳಿಗೆ ಪೋಕ್ಸೋ ಪ್ರಕರಣದಲ್ಲಿ ನ್ಯಾಯ ಕೊಡಿಸಲು ಇರುವ ಈ ಕೋರ್ಟ್‌ ಚೈಲ್ಡ್‌ ಫ್ರೆಂಡ್ಲಿ ಆಗಿರುತ್ತದೆ ಎಂದರು.

ದೌರ್ಜನ್ಯ ತಡೆಗಟ್ಟಲು ಈ ಕುರಿತು ಇರುವ ಕಠಿಣ ಕಾನೂನುಗಳ ಅರಿವನ್ನು ಎಲ್ಲೆಡೆ ಮೂಡಿಸಬೇಕು. ಪಾಲಕರು ತಮ್ಮ ಹೆಣ್ಣು ಮಕ್ಕಳಲ್ಲಿ ಕಾಲಕಾಲಕ್ಕೆ ಆಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಸಂಶಯ ಬಂದಾಗ ಅವುಗಳ ಬಗ್ಗೆ ವಿಚಾರಣೆ ನಡೆಸಬೇಕು. ದೌರ್ಜನ್ಯ ನಡೆದಲ್ಲಿ ಕೂಡಲೇ ಪೊಲೀಸ್‌ ಠಾಣೆಗೆ
ದೂರು ಸಲ್ಲಿಸಬೇಕು. ಇಂಥ ಪ್ರಕರಣದಲ್ಲಿ ದೌರ್ಜನ್ಯಕ್ಕೊಳಗಾದ ಅಪ್ರಾಪ್ತ ಹೆಣ್ಣು ಮಕ್ಕಳ ಗುರುತನ್ನು ರಹಸ್ಯವಾಗಿಡಬೇಕು. ಎಚ್‌ಐವಿ ಪೀಡಿತರಿಗೆ ಅನುಕಂಪಕ್ಕಿಂತ ಆರೋಗ್ಯ ಸೌಲಭ್ಯ ದೊರಕಿಸಿಕೊಡಲು ಹೆಚ್ಚು ಗಮನ ಹರಿಸಬೇಕು ಎಂದರು.

Advertisement

ಶಿರಸ್ತೇದಾರ್‌ ಎಸ್‌.ಎಂ. ಸಜ್ಜನ, ವಕೀಲರ ಸಂಘದ ಉಪಾಧ್ಯಕ್ಷ
ಪಿ.ಬಿ. ಜಾಧವ, ಶಿಕ್ಷಣ ಸಂಯೋಜಕ ಎ.ಎಸ್‌.ಬಾಗವಾನ, ತಾಪಂ ಕಚೇರಿ ವ್ಯವಸ್ಥಾಪಕಿ ಎಸ್‌.ಎಂ. ಅವಟಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅನುಸೂಯಾ ತೇರದಾಳ ಮತ್ತಿತರರು ವೇದಿಕೆಯಲ್ಲಿದ್ದರು. ವಕೀಲರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೇರಿ ಹಲವರು ಇದ್ದರು.
ಎನ್‌.ಆರ್‌. ಮೊಕಾಶಿ ಪೋಕ್ಸೋ ಕಾಯ್ದೆ ಕುರಿತು, ನಾಲತವಾಡ ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ಆಪ್ತ
ಸಮಾಲೋಚಕ ಮಲ್ಲನಗೌಡ ದ್ಯಾಪುರ ಅವರು ಎಚ್‌ಐವಿ ಏಡ್ಸ್‌ ರೋಗದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಎನ್‌.ಬಿ. ಮುದ್ನಾಳ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next