Advertisement

ಕೃಷ್ಣಾತೀರ ಜನರ ಸ್ಥಳಾಂತರ

12:40 PM Aug 11, 2019 | Naveen |

ಮುದ್ದೇಬಿಹಾಳ: ಕೃಷ್ಣಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ತೀವ್ರ ಸ್ವರೂಪ ಪಡೆದುಕೊಂಡಿದ್ದು ಪ್ರವಾಹದಿಂದ ತೊಂದರೆಗೊಳಗಾಗಿ ಜಲಾವೃತಗೊಂಡ ಮುದ್ದೇಬಿಹಾಳ ತಾಲೂಕಿನ ಕೃಷ್ಣಾ ನದಿ ತೀರದಲ್ಲಿ ಬರುವ ತಂಗಡಗಿ, ಕಮಲದಿನ್ನಿ, ಕುಂಚಗನೂರ, ದೇವೂರ, ನಾಗರಾಳ, ಹಂಡರಗಲ್ಲ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಜಿಲ್ಲಾಡಳಿತವು ಸಮರೋಪಾದಿ ಕಾರ್ಯಾಚರಣೆ ನಡೆಸಿದೆ.

Advertisement

ಶುಕ್ರವಾರ ರಾತ್ರಿಯಿಂದ ಶನಿವಾರ ಮಧ್ಯಾಹ್ನದವರೆಗೆ ಅಂದಾಜು 15 ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ ನೇತೃತ್ವದಲ್ಲಿ ನಡೆದ ಸ್ಥಳಾಂತರ ಕಾರ್ಯಾಚರಣೆಗಾಗಿ ತಹಶೀಲ್ದಾರ್‌ಗಳು, ಗ್ರಾಮ ಲೆಕ್ಕಾಧಿಕಾರಿಗಳು, ಪಿಡಿಒಗಳು ಮತ್ತು ಇದಕ್ಕಾಗಿ ನಿಯೋಜಿಸಿದ್ದ ಅಧಿಕಾರಿಗಳು ಸ್ಥಳೀಯವಾಗಿ ದೊರಕುವ ವಾಹನ ಮತ್ತು ಸರ್ಕಾರಿ ಬಸ್‌ ಸೌಲಭ್ಯವನ್ನು ಬಳಸಿಕೊಂಡರು.

ನಾಗರಾಳ ಗ್ರಾಮದ ಜನರನ್ನು ಮುದ್ದೇಬಿಹಾಳ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ವಿಬಿಸಿ ಪ್ರೌಢಶಾಲೆಯಲ್ಲಿ ಕರೆತಂದು ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಹಂಡರಗಲ್, ಮುದೂರ ಗ್ರಾಮಗಳ ಜನರನ್ನು ಆಯಾ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಇಳಿಸಲಾಗಿದೆ. ಕಮಲದಿನ್ನಿ, ತಂಗಡಗಿ, ಕುಂಚಗನೂರ ಗ್ರಾಮಸ್ಥರನ್ನು ತಂಗಡಗಿಯಲ್ಲಿರುವ ವಿವಿಧ ಶಾಲೆಗಳಲ್ಲಿ ಇಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಆಯಾ ಸ್ಥಳಗಳಲ್ಲಿ ಪರಿಹಾರ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.

ಜನಪ್ರತಿನಿಧಿ-ಅಧಿಕಾರಿಗಳ ಭೇಟಿ: ಜಲಾವೃತಗೊಂಡಿರುವ ಗ್ರಾಮಗಳಿಗೆ ಸ್ಥಳೀಯ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ, ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, ಎಸ್ಪಿ ಪ್ರಕಾಶ ನಿಕ್ಕಂ ಸೇರಿದಂತೆ ಎಂಟಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಸ್ಥಳಾಂತರ ಪ್ರಕ್ರಿಯೆ ವೀಕ್ಷಿಸಿದರು. ಜಲಾವೃತ ಪ್ರದೇಶಗಳಲ್ಲಿ ಸಂಚರಿಸಿ ಬೆಳೆ ಹಾನಿ ಮತ್ತು ಜನವಸತಿಗೆ ಆಗಿರುವ ತೊಂದರೆ ಪರಿಶೀಲಿಸಿದರು. ಸಂತ್ರಸ್ತ ಜನರ ಅಹವಾಲು ಆಲಿಸಿದರು. ಇದೇ ವೇಳೆ ಮಾಜಿ ಸಚಿವ ಸಿ.ಎಸ್‌. ನಾಡಗೌಡ ಅವರೂ ಸಹಿತ ಕಾಂಗ್ರೆಸ್‌ ಧುರೀಣರೊಂದಿಗೆ ತಂಗಡಗಿ, ಕುಂಚಗನೂರ, ಕಮಲದಿನ್ನಿ ಮುಂತಾದೆಡೆ ಸಂಚರಿಸಿ ಪರಿಶೀಲನೆ ನಡೆಸಿದರು.

ಕಣ್ಣೀರು ಸುರಿಸಿದ ಸಂತ್ರಸ್ತರು: ಹಲವೆಡೆ ತಮಗೆ ಒದಗಿದ ದುಸ್ಥಿತಿ ನೆನೆದು ಸಂತ್ರಸ್ತರು ಜನಪ್ರತಿನಿಧಿಗಳು, ಅಧಿಕಾರಿಗಳ ಎದುರು ಕಣ್ಣೀರು ಸುರಿಸಿದರು. ಹಿಂದೆ ಎಂದೂ ಇಂಥ ಪರಿಸ್ಥಿತಿ ಬಂದಿರಲಿಲ್ಲ. ಮನೆ ಮಠ ಬಿಟ್ಟು ಹೀಗೆ ಗುಳೆ ಹೋದವರಂತೆ ಹೋಗಿರಲಿಲ್ಲ. ಈಗಲೇ ಪರಿಸ್ಥಿತಿ ಇಷ್ಟೊಂದು ಗಂಭೀರವಾಗಿದೆ. ಮುಂದೆ ಹೇಗೆ ಅನ್ನೋ ಚಿಂತೆ ಈಗಲೇ ಕಾಡತೊಡಗಿದೆ. ವಯಸ್ಸಾದವರು, ಮಹಿಳೆಯರು, ಮಕ್ಕಳು ಪರಿಸ್ಥಿತಿ ಹೇಗೆ ಎದುರಿಸಬೇಕು ಅನ್ನೋದು ತಿಳಿಯದೆ ಸಂಕಟಪಡುತ್ತಿದ್ದಾರೆ ಎಂದು ಗೋಳು ತೋಡಿಕೊಂಡರು.

Advertisement

ನೀರಲ್ಲಿನ ಚಕ್ಕಡಿ ಎತ್ತಲು ಸಹಾಯ: ಗಂಗೂರ, ಕಮಲದಿನ್ನಿ, ಕುಂಚಗನೂರ ಗ್ರಾಮಗಳಿಗೆ ಡಿಸಿ, ಎಸ್ಪಿ, ಎಸಿ ಸೇರಿದಂತೆ ಅಧಿಕಾರಿಗಳ ತಂಡ ಭೇಟಿ ನೀಡಿತ್ತು. ಆ ಸಂದರ್ಭ ಜಮೀನಿನಲ್ಲಿ ನಿಂತ ಪ್ರವಾಹದ ನೀರಿನ ಪರಿಶೀಲನೆ ನಡೆಸುತ್ತಿದ್ದಾಗ ರಸ್ತೆ ಪಕ್ಕದ ನೀರಿನಲ್ಲಿ ಚಕ್ಕಡಿಯೊಂದಿ ಮಗುಚಿ ಬಿದ್ದು ಅದನ್ನು ಮೇಲೆತ್ತಲು ಕೆಲ ಯುವಕರು ಪ್ರಯಾಸ ಪಡುತ್ತಿದ್ದರು. ಇದನ್ನು ನೋಡಿದ ಡಿಸಿ ವೈ.ಎಸ್‌. ಪಾಟೀಲ, ಎಸಿ ಸೋಮಲಿಂಗ ಗೆಣ್ಣೂರ, ಎಸ್ಪಿ ಪ್ರಕಾಶ ನಿಕ್ಕಂ ಮತ್ತಿತರರು ಚಕ್ಕಡಿ ಮೇಲೆತ್ತಲು ಕೈಜೋಡಿಸಿದರು.

ಅನ್ನಾಹಾರ ಮರೆತ ಅಧಿಕಾರಿಗಳು: ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ ನೇತೃತ್ವದಲ್ಲಿ ವಿಜಯಪುರ ಎಸಿ ಕಚೇರಿ ತಹಶೀಲ್ದಾರ್‌ ಜಿ.ಎಸ್‌. ಹಿರೇಮಠ, ಮುದ್ದೇಬಿಹಾಳ ಪ್ರಭಾರ ತಹಶೀಲ್ದಾರ್‌ ಎಂ.ಎನ್‌. ಚೋರಗಸ್ತಿ, ಜಿಲ್ಲಾ ನೋಡಲ್ ಅಧಿಕಾರಿ ಪ್ರಕಾಶ ಸೇರಿದಂತೆ ಹಲವು ಅಧಿಕಾರಿಗಳ ತಂಡ ಬೆಳಗ್ಗೆಯಿಂದಲೇ ಜಲಾವೃತ ಗ್ರಾಮಗಳಲ್ಲಿ ಬೀಡು ಬಿಟ್ಟು ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಕಳಿಸಲು ಉಸ್ತುವಾರಿ ವಹಿಸಿದ್ದರು. ಈ ವೇಳೆ ಜನರ ಕಷ್ಟವನ್ನು ತಮ್ಮ ಕಷ್ಟ ಎಂದೇ ಭಾವಿಸಿದ ಅಧಿಕಾರಿಗಳು ಬಹು ಹೊತ್ತಿನವರೆಗೆ ಅನ್ನಾಹಾರ ಸೇವಿಸದೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಸಲಹೆ, ಸೂಚನೆ ನೀಡುತ್ತ ಕ್ರಿಯಾಶೀಲರಾಗಿ ರಕ್ಷಣಾ ಕಾರ್ಯದಲ್ಲಿ ನಿರತರಾದದ್ದು ಕಂಡುಬಂತು.

Advertisement

Udayavani is now on Telegram. Click here to join our channel and stay updated with the latest news.

Next