Advertisement

ಎಸಿಬಿ ಸದುಪಯೋಗವಾಗಲಿ

12:17 PM Jan 31, 2020 | Naveen |

ಮುದ್ದೇಬಿಹಾಳ: ಸರ್ಕಾರಿ ಕಚೇರಿ ಮತ್ತು ಸರ್ಕಾರದಿಂದ ಅನುದಾನ ಪಡೆಯುವ ಸಂಸ್ಥೆಗಳಲ್ಲಿ ನಡೆಯುವ ಭ್ರಷ್ಟಾಚಾರ ನಿಯಂತ್ರಿಸಲು, ಜನಪ್ರತಿನಿಧಿ ಗಳ ಅವ್ಯವಹಾರಕ್ಕೆ ಕಡಿವಾಣ ಹಾಕಲು ಸರ್ಕಾರ 2016ರಲ್ಲಿ ಜಾರಿಗೆ ತಂದಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ವಿಜಯಪುರ ಎಸಿಬಿ ಕಚೇರಿ ಡಿಎಸ್ಪಿ ಎಲ್‌. ವೇಣುಗೋಪಾಲ ಮನವಿ ಮಾಡಿದರು.

Advertisement

ಇಲ್ಲಿನ ಮಿನಿ ವಿಧಾನಸೌಧದಲ್ಲಿರುವ ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಗುರುವಾರ ಎಸಿಬಿ ಕುರಿತು ಜನಜಾಗೃತಿ ಮೂಡಿಸುವ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಎಸಿಬಿಗೂ ಪೊಲೀಸ್‌ ಇಲಾಖೆಗೂ ಯಾವುದೇ ಸಂಬಂಧ ಇಲ್ಲ. ಇದು ನೇರವಾಗಿ ಮುಖ್ಯಮಂತ್ರಿಗಳ ಅಧೀನದಲ್ಲಿ ಕಾರ್ಯನಿರ್ವಹಿಸುವುದರಿಂದ ಗೃಹ ಮಂತ್ರಿಗಳಿಗೂ ಇದರ ಮೇಲೆ ನಿಯಂತ್ರಣ ಇರುವುದಿಲ್ಲ. ಹೀಗಾಗಿ ಸಾರ್ವಜನಿಕರು ಸರ್ಕಾರಿ ನೌಕರರು, ಜನಪ್ರತಿನಿಧಿಗಳು ಭ್ರಷ್ಟಾಚಾರದ ದೂರನ್ನು ದಾಖಲೆ ಸಮೇತ ಅರ್ಜಿ ರೂಪದಲ್ಲಿ ಸಲ್ಲಿಸಿದರೆ ಸಾರ್ವಜನಿಕರಿಗೆ ನ್ಯಾಯ ಕೊಡಿಸುವುದು ಸುಲಭವಾಗುತ್ತದೆ ಎಂದರು.

ಸರ್ಕಾರಿ ಕೆಲಸಕ್ಕೆ ಲಂಚ ಪಡೆದುಕೊಳ್ಳುವುದನ್ನು ನಿಯಂತ್ರಿಸುವುದು, ಸರ್ಕಾರಿ ನೌಕರರು, ಜನಪ್ರತಿನಿಧಿಗಳು, ಸರ್ಕಾರದಿಂದ ಅನುದಾನ ಪಡೆಯುವವರು ಅಕ್ರಮ ಆಸ್ತಿ ಗಳಿಸುವುದನ್ನು ತಡೆಗಟ್ಟುವಲ್ಲಿ ಎಸಿಬಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಕೆಲಸದ ಬಗ್ಗೆ ಸಮಸ್ಯೆ ಮಾಡೋರೋ ಸಿಬ್ಬಂದಿಗಳೇ. ನಂತರ ಲಂಚ ಪಡೆದು ಕೆಲಸ ಮಾಡಿಕೊಡುವವರೂ ಅದೇ ಸಿಬ್ಬಂದಿ.

ಹೀಗಾಗಿ ಸರ್ಕಾರದ ಯೋಜನೆ, ಅನುದಾನ ನೇರವಾಗಿ ಅರ್ಹರಿಗೆ ತಲುಪಬೇಕು. ಮಧ್ಯಸ್ಥಿಕೆದಾರರಿಗೆ ಸೋರಿ ಹೋಗಬಾರದು ಎನ್ನುವುದನ್ನು ಜನತೆ ತಿಳಿದುಕೊಳ್ಳಬೇಕು ಎಂದರು.

ಅಡ್ಡದಾರಿ ಹಿಡಿಯುವವರನ್ನು ಮಟ್ಟ ಹಾಕುವ ಕೆಲಸ ಜನರಿಂದಲೇ ಆಗಬೇಕಿದೆ. ಸಾರ್ವಜನಿಕರು ತಮ್ಮ ಹೆಸರು, ಮೊಬೈಲ್‌ ಸಂಖ್ಯೆ, ಪೂರ್ಣ ವಿಳಾಸ ಸಮೇತ ಭ್ರಷ್ಟಾಚಾರದ ಬಗ್ಗೆ ಅರ್ಜಿ ಸಲ್ಲಿಸಿದರೆ ಆ ಬಗ್ಗೆ ತನಿಖೆ ನಡೆಸಿ ಸಾಕ್ಷಿ ಸಂಗ್ರಹಿಸುತ್ತೇವೆ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುತ್ತೇವೆ. ದಾಳಿ ನಡೆಸಿ ಅಕ್ರಮ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಸರ್ಕಾರಕ್ಕೆ ಒಪ್ಪಿಸುತ್ತೇವೆ. ಬೇನಾಮಿ ಅರ್ಜಿಗೆ ಯಾವುದೇ ಮಹತ್ವ ಕೊಡುವುದಿಲ್ಲ. ಅದು ಕಸದ ಬುಟ್ಟಿಗೆ ಹೋಗುತ್ತದೆ ಎಂದರು.

Advertisement

ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಗದ್ದೆಪ್ಪ ಹುಲ್ಲಳ್ಳಿ, ತಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ತಂಗಡಗಿ, ತಾಪಂ ಮಾಜಿ ಅಧ್ಯಕ್ಷ ಮುತ್ತಣ್ಣ ಹುಗ್ಗಿ, ಸಂಗಣ್ಣ ಕಂಚ್ಯಾಣಿ, ಹಣಮಂತ ಕಾಳಗಿ, ಹಜರೇಸಾ ಸುರಪುರ, ವಿಮಲಾಬಾಯಿ, ಅರುಣ ಪದಕಿ, ಸಾಬಣ್ಣ ಗೌಡರ, ಮೌಲಾಸಾಬ ನದಾಫ್‌, ರಾಜು ವಾಲಿಕಾರ ಸೇರಿದಂತೆ ಹಲವರು ಮೌಖೀಕ, ಲಿಖೀತ ಅಹವಾಲು ಸಲ್ಲಿಸಿದರು.

ಪೊಲೀಸರು ರಾತ್ರಿ ಗಸ್ತು ತಿರುಗುವುದನ್ನು ನಿಲ್ಲಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಾಗ ಉತ್ತರಿಸಿದ ವೇಣುಗೋಪಾಲ, ತಾವು ಪೊಲೀಸ್‌ ಇಲಾಖೆಯಲ್ಲಿ 25 ವರ್ಷ ಸೇವೆಯ ಅನುಭವ ಹೊಂದಿದ್ದು ಇಲಾಖೆ ಬಲಗೊಂಡಿಲ್ಲ. ಎಲ್ಲ ವ್ಯವಸ್ಥೆಗಳು ತ್ರಿಗುಣಗೊಂಡಿವೆ. ಆದರೆ ಪೊಲೀಸ್‌ ವ್ಯವಸ್ಥೆ ಮಾತ್ರ ಸುಧಾರಣೆ ಕಂಡಿಲ್ಲ. ಪ್ರತಿಯೊಂದು ಸಣ್ಣ ವಿಷಯಕ್ಕೂ ಪೊಲೀಸರೇ ಬೇಕು ಎನ್ನುವುದು ಸರಿ ಅಲ್ಲ. ಹೆಚ್ಚಿನ ಸಿಬ್ಬಂದಿ ನೇಮಕಗೊಳ್ಳಬೇಕು. ಅಂದಾಗ ಮಾತ್ರ ಪೊಲೀಸ್‌ ವ್ಯವಸ್ಥೆ ಸುಧಾರಿಸುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next